ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ನಿಂದನೆ, ರಂಪಾಟಕ್ಕೆ ಸಾಕ್ಷಿಯಾದ ಸಭೆ

ಗದಗ ಬೆಟಗೇರಿ ನಗರಸಭೆ ಸಾಮಾನ್ಯ ಸಭೆ– ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
Last Updated 21 ಸೆಪ್ಟೆಂಬರ್ 2022, 6:04 IST
ಅಕ್ಷರ ಗಾತ್ರ

ಗದಗ: ಇಲ್ಲಿನ ಗದಗ ಬೆಟಗೇರಿ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿಜನರ ಸಮಸ್ಯೆಗಳು ಬದಿಗೆ ಸರಿದು ವೈಯಕ್ತಿಕಪ್ರತಿಷ್ಠೆಗಳೇಮುನ್ನೆಲೆಗೆ ಬಂದವು. ಸಮಸ್ಯೆಗಳ ಪರಿಹಾರಕ್ಕೆ ವೇದಿಕೆ ಆಗಬೇಕಿದ್ದ ಸಭೆಯು ವೈಯಕ್ತಿಕ ಟೀಕೆ, ನಿಂದನೆ ಹಾಗೂ ರಂಪಾಟಕ್ಕೆ ಸಾಕ್ಷಿಯಾಯಿತು.

ಸಭೆಯ ಆರಂಭದಲ್ಲಿ ಬಿಜೆಪಿ ಸದಸ್ಯ ಚಂದ್ರು ತಡಸದ ‍ಪೌರಕಾರ್ಮಿಕರನ್ನು ಕಾಯಂ ಮಾಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ಕೃಷ್ಣ ಪರಾಪೂರ ಆಕ್ಷೇಪ ವ್ಯಕ್ತಪಡಿಸಿದರು. ಗದಗ ಬೆಟಗೇರಿ ನಗರಸಭೆಯಲ್ಲಿ 220 ಮಂದಿ ಪೌರಕಾರ್ಮಿಕರಿದ್ದು, ಅವರಾರು ಸರ್ಕಾರದ ಕಣ್ಣಿಗೆ ಕಾಣಿಸಲಿಲ್ಲವೇ ಎಂದು ಆಕ್ರೋಶ ಹೊರಹಾಕಿದರು. ನಾವು ದುಡ್ಡು ಕೊಡದಿರುವುದಕ್ಕೆ ಕಾಯಂ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಬಳಿಕ ಚಂದ್ರು ತಡಸದ ಮಾತನಾಡಿ, ‘ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 11,133 ಪೌರಕಾರ್ಮಿಕರ ಸೇವೆಯನ್ನು ಕಾಯಂ ಮಾಡುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ. ಆದರೆ, ರಾಜ್ಯದ ಯಾವ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಹೆಸರು ಇದರಲ್ಲಿದೆ ಎಂಬುದು ಇನ್ನೆರಡು ದಿನಗಳಲ್ಲಿ ತಿಳಿಯಲಿದೆ. ಒಂದು ವೇಳೆ ಗದಗ ಬೆಟಗೇರಿ ನಗರಸಭೆಯಿಂದ ಯಾರ ಹೆಸರು ಇಲ್ಲವಾದಲ್ಲಿ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ, ಸರ್ಕಾರಕ್ಕೆ ಮನವಿ ಸಲ್ಲಿಸಬಹುದು’ ಎಂದು ಸಲಹೆ ನೀಡಿದರು.

ಚಂದ್ರು ತಡಸದ ಅವರ ಸಲಹೆಗೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಸಹಮತ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಎಲ್.ಡಿ.ಚಂದಾವರಿ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ನದಿ ಕೆರೆಗಳು ತುಂಬಿವೆ. ಆದರೂ, ಗದಗ ಬೆಟಗೇರಿ ನಗರದ ನೀರಿನ ಬವಣೆ ನೀಗಿಲ್ಲ. ಕೆಲವು ಕಡೆಗಳಲ್ಲಿ 15 ದಿನಗಳಿಗೊಮ್ಮೆ ನೀರು ಬರುತ್ತಿದೆ. ನಗರಸಭೆಯ 35 ವಾರ್ಡ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಅಧಿಕಾರಿಗಳು ಸಮರ್ಪಕ ಉತ್ತರ ನೀಡಬೇಕು ಎಂದರು.

ಕೆಯುಡಬ್ಲ್ಯುಎಸ್ ಎಂಜಿನಿಯರ್‌ ಭಜಮ್ಮನವರ, ‘15, 16 ಮತ್ತು 17 ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದ ವಾರ್ಡ್‌ಗಳಲ್ಲಿ ಸಮಸ್ಯೆ ಇದೆ. ಈ ಮೊದಲು ಆನಂದ ನಗರದಲ್ಲಿ 5 ದಿನಕ್ಕೊಮ್ಮೆ ನೀರು ಬರುತ್ತಿತ್ತು. ಈಗ ಅದು 15 ದಿನಗಳಿಗೊಮ್ಮೆ ಎಂಬಂತಾಗಿದೆ. ಎತ್ತರದ ಪ್ರದೇಶದಲ್ಲಿರುವ ಹುಡ್ಕೊ ಕಾಲೊನಿ, ಪಿಆ್ಯಂಡ್‌ಟಿ ಕ್ವಾರ್ಟ್ರಸ್‌ ಭಾಗದಲ್ಲೂ ಇದೇ ಸಮಸ್ಯೆ ಇದೆ. ಏಜೆನ್ಸಿಯವರ ನಿರ್ಲಕ್ಷ್ಯದಿಂದ ನೀರು ಪೂರೈಕೆಯಲ್ಲಿ ವಿಳಂಬವಾಗಿದೆ. ಈಗಾಗಲೇ ಏಜೆನ್ಸಿಯವರಿಗೆ ನೋಟಿಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಲಾಗುವುದು’ ಎಂದರು.

ಎಂಜಿನಿಯರ್‌ ಮಾಹಿತಿಗೆ ತೃಪ್ತರಾಗದ ವಿರೋಧ ಪಕ್ಷದ ಸದಸ್ಯರು, ಸದನದ ಬಾವಿಗಿಳಿದು ಖಾಲಿ ಕೊಡ ಪ್ರದರ್ಶಿಸಿ, ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಅರ್ಧ ಗಂಟೆಗೂ ಹೆಚ್ಚು ಸಮಯ ವ್ಯರ್ಥವಾಯಿತು. ಬಳಿಕ ಸಭೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಮಾತನಾಡಿ, ನಗರ ನೀರು ಸರಬರಾಜು ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ದೀಪಾ ಚೋಳನ್ ಸದ್ಯದಲ್ಲೇ ಗದಗ-ಬೆಟಗೇರಿ ಅವಳಿ ನಗರಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಶೀಲಿಸಲಿದ್ದು, ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ನೀರು ಪೂರೈಕೆ ವಿಷಯಕ್ಕೆ ಸಂಬಂಧಿಸಿದಂತೆ ಏಜೆನ್ಸಿಯವರಿಗೆ 15 ಬಾರಿ ನೋಟಿಸ್ ನೀಡಲಾಗಿದ್ದರೂ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಲೇ ಇದೆ. ಕೂಡಲೇ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಒತ್ತಡ ಹೇರುತ್ತಲೇ ಧರಣಿ ಆರಂಭಿಸಿದರು. ಆಡಳಿತ ಸದಸ್ಯರು ಚರ್ಚೆ ಮೂಲಕ ಮುಂದುವರಿಸಿದರು.

ಇದೇ ವಿಚಾರವಾಗಿ, ಆಡಳಿತ ಪಕ್ಷದ ಅನಿಲ್‌ ಅಬ್ಬಿಗೇರಿ ಮತ್ತು ಕಾಂಗ್ರೆಸ್ ಪಕ್ಷದ ಜೈನುಲ್ಲಾಬಿ ನಮಾಜಿ ಪರಸ್ಪರ ಏಕವಚನದಲ್ಲಿ ಮಾತನಾಡಿ, ವೈಯಕ್ತಿಕವಾಗಿ ಪರಸ್ಪರ ನಿಂದಿಸಿಕೊಂಡರು. ಉಳಿದವರು ಮೌನಕ್ಕೆ ಜಾರಿದ್ದರು. ಸಾಮಾನ್ಯ ಸಭೆಯು ಗದ್ದಲ, ಕೋಲಾಹಲ, ರಂಪಾಟಕ್ಕೆ ಸಾಕ್ಷಿಯಾಯಿತು.

ಅವ್ಯವಹಾರ ಆರೋಪ; ಅಧಿಕಾರಿಯ ಅಮಾನತಿಗೆ ಆಗ್ರಹ

2020-21ನೇ ಸಾಲಿನ ನಗರಸಭೆಯ ಅನುದಾನದ ಶೇ 24.10, 7.5 ಅನುದಾನದಲ್ಲಿ ಎಸ್‍ಎಫ್‍ಸಿ ಅನುದಾನದಡಿ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಮುದಾಯ ಸಂಘಟನಾ ಅಧಿಕಾರಿ ಹುಣಸಿಮರದ ಅಕ್ರಮ ಎಸಗಿದ್ದು, ಅವರನ್ನು ತಕ್ಷಣವೇ ಅಮಾನತು ಮಾಡಬೇಕು. ಇಲ್ಲವಾದಲ್ಲಿ, ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರು ಒಕ್ಕೋರಲಿನಿಂದ ಆಗ್ರಹಿಸಿದರು.

ಹುಣಸಿಮರದ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ನಗರಸಭೆ ಸದಸ್ಯರ ಅಭಿಪ್ರಾಯ ಸಂಗ್ರಹಿಸದೇ, ಅಧ್ಯಕ್ಷರ ಗಮನಕ್ಕೂ ತರದೇ ಗೋಲ್‍ಮಾಲ್‍ ಮಾಡಿದ್ದಾರೆ.ಅವಳಿ ನಗರದ 35 ವಾರ್ಡ್‍ಗಳ ಪೈಕಿ ಕೆಲವೇ ವಾರ್ಡ್‍ಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ದೂರಿದರು.

ಜತೆಗೆ, ಅಂಗವಿಕಲರಿಗೆ ಸಹಾಯಧನ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಉದ್ಯೋಗ ಸಹಾಯಧನ ವಿತರಣೆಯಲ್ಲಿಯೂ ತಾರತಮ್ಯ ಮಾಡಲಾಗಿದೆ. 35 ವಾರ್ಡ್‍ಗಳಲ್ಲಿನ ಸದಸ್ಯರ ಅಭಿಪ್ರಾಯದ ಮೇರೆಗೆ ಅರ್ಹ ಫಲಾನುಭವಿಗಳಿಗೆ ಲ್ಯಾಪ್‍ಟಾಪ್ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಳಿಕ ನಗರಸಭೆ ಅಧ್ಯಕ್ಷೆ ಉಷಾ ದಾಸರ ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT