ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ ಬಸ್‌ ನಿಲ್ದಾಣ; ಅವ್ಯವಸ್ಥೆಗಳ ತಾಣ

ಪ್ರಯಾಣಿಕರಿಗೆ ಕುಡಿಯಲು ನೀರಿಲ್ಲ, ಕುಳಿತುಕೊಳ್ಳಲು ಸ್ಥಳ ಇಲ್ಲ: ಸ್ವಚ್ಛತೆ ದುರ್ಬೀನು ಹಾಕಿ ಹುಡುಕಬೇಕು
ನಾಗರಾಜ. ಎಸ್‌. ಹಣಗಿ
Published 12 ಫೆಬ್ರುವರಿ 2024, 5:36 IST
Last Updated 12 ಫೆಬ್ರುವರಿ 2024, 5:36 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಜಿಲ್ಲೆಯಲ್ಲಿಯೇ ದೊಡ್ಡ ಪಟ್ಟಣ ಎನಿಸಿರುವ ಲಕ್ಷ್ಮೇಶ್ವರದ ಬಸ್ ನಿಲ್ದಾಣ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿದೆ.

2019ರಲ್ಲಿ ನವೀಕರಣಗೊಂಡ ನಂತರ ನಿಲ್ದಾಣದಲ್ಲಿ ಐದು ವಾಣಿಜ್ಯ ಮಳಿಗೆಗಳು ಮತ್ತು ಮೂರು ಶೆಡ್‍ಗಳನ್ನು ಆರಂಭ ಮಾಡಲಾಯಿತು. ಇವುಗಳಿಂದ ಲಕ್ಷಾಂತರ ರೂಪಾಯಿ ಬಾಡಿಗೆ ಬರುತ್ತಿದೆ ಆದರೂ ನಿಲ್ದಾಣ ಸಮಸ್ಯೆಗಳಿಂದ ಬಳಲುವುದು ತಪ್ಪಿಲ್ಲ.

ಲಕ್ಷ್ಮೇಶ್ವರದಿಂದ ಗದಗ, ಹಾವೇರಿ, ಹುಬ್ಬಳ್ಳಿ ಕಡೆ ತೆರಳುವ ಸಾರಿಗೆ ಇಲಾಖೆಗೆ ಸೇರಿದ ನೂರಾರು ಬಸ್‍ಗಳು ಪ್ರತಿದಿನ ಲಕ್ಷ್ಮೇಶ್ವರದ ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತವೆ. ಬಾಗಲಕೋಟೆ ಮತ್ತು ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಮಧ್ಯವರ್ತಿ ನಿಲ್ದಾಣವಾಗಿದ್ದರಿಂದ ನಿಲ್ದಾಣದಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ.

ಕುಡಿಯಲು ನೀರಿಲ್ಲ: ಸಾವಿರಾರು ಪ್ರಯಾಣಿಕರು ಸೇರುವ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮೂರು ವರ್ಷಗಳ ಹಿಂದೆ ನಿಲ್ದಾಣದಲ್ಲಿ ಶುದ್ಧ ನೀರಿನ ಘಟಕ ಆರಂಭಿಸಲಾಗಿತ್ತು. ಆದರೆ ಆರಂಭವಾದ ಕೆಲವೇ ದಿನಗಳಲ್ಲಿ ಬಾಗಿಲು ಮುಚ್ಚಿತು. ಅನಿವಾರ್ಯವಾಗಿ ಪ್ರಯಾಣಿಕರು ಬಾಟಲಿ ನೀರನ್ನು ಖರೀದಿಸಬೇಕಿದೆ.

ನಿಲ್ದಾಣದಲ್ಲಿ ಆಟೊ ಮತ್ತು ದ್ವಿಚಕ್ರ ವಾಹನಗಳು ಬೇಕಾಬಿಟ್ಟಿಯಾಗಿ ನಿಲ್ಲುತ್ತಿದ್ದು ಜನರಿಗೆ ನಿಲ್ದಾಣದೊಳಗೆ ಹೋಗಿ ಬರಲು ಅಡಚಣೆ ಮಾಡುತ್ತಿವೆ. ಖಾಸಗಿ ವಾಹನಗಳು ಯಾರ ಭಯವೂ ಇಲ್ಲದೆ ಬಸ್ ಪ್ಲಾಟ್‍ಫಾರಂವರೆಗೂ ಬರುತ್ತಿದ್ದು, ಬಸ್‍ಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಇದರ ನಿಯಂತ್ರಣಕ್ಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಹೆಸರಿಗೆ ಮಾತ್ರ ಕಂಟ್ರೋಲರ್ ಇದ್ದಾರೆ ಎಂಬ ಪರಿಸ್ಥಿತಿ ಇದೆ.

ಎಲ್ಲೆಂದರಲ್ಲಿ ಕಸ: ವಿಶಾಲವಾದ ನಿಲ್ದಾಣ ಕಸಕಡ್ಡಿಗಳ ತಾಣವಾಗಿದೆ. ಸಿಕ್ಕಸಿಕ್ಕಲ್ಲಿ ಪ್ಲಾಸ್ಟಿಕ್ ಚೀಲ, ಬಾಟಲಿ ಬಿದ್ದಿರುತ್ತವೆ. ಪ್ರಯಾಣಿಕರು ಕಂಡ ಕಂಡಲ್ಲಿ ಎಲೆ ಅಡಿಕೆ ತಿಂದು ಉಗಿಯುವುದರಿಂದಾಗಿ ನಿಲ್ದಾಣ ಮತ್ತಷ್ಟು ಗಬ್ಬೆದ್ದಿದೆ. ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ಕೊಟ್ಟಿಲ್ಲ. ಎರಡು ದಿನಗಳ ಹಿಂದಷ್ಟೆ ಶಾಸಕ ಡಾ.ಚಂದ್ರು ಲಮಾಣಿ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಅಸ್ವಚ್ಛತೆ ವಾತಾವರಣಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಆಸನಗಳ ಅವ್ಯವಸ್ಥೆ: ಗದಗ ಪಾಯಿಂಟ್‍ನ ಕಾಂಪೌಂಡ್‌ ಗೋಡೆಗುಂಟ ಗಿಡ ಮರಗಳು ಬೆಳೆದಿವೆ. ಕಲ್ಲಿನ ಆಸನಗಳು ಮುರಿದು ಬಿದ್ದಿವೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಜಾಗವಿಲ್ಲ.

ನಿಲ್ದಾಣದಲ್ಲಿ ಆಗಾಗ ಕಳ್ಳತನಗಳು ನಡೆಯುತ್ತಿದ್ದವು. ಇದನ್ನು ತಪ್ಪಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಕಾರ್ಯಕರ್ತರು ಹೋರಾಟ ಮಾಡಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ 5 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಇನ್ನೂ ಮೂರ್ನಾಲ್ಕು ಕ್ಯಾಮೆರಾ ಅಳವಡಿಸಬೇಕಿದೆ.

ನಿಲ್ದಾಣದಲ್ಲಿ ಅಲ್ಲಲ್ಲಿ ಟ್ಯೂಬ್‍ಲೈಟ್‍ಗಳನ್ನು ಹಾಕಲಾಗಿದೆ. ಆದರೆ, ರಾತ್ರಿ ವೇಳೆ ಸಾರ್ವಜನಿಕರು ಅವುಗಳನ್ನು ಕದಿಯುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ನಿಲ್ದಾಣದ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು. ನಿಲ್ದಾಣದ ಧ್ವಜದ ಕಟ್ಟೆ ಹತ್ತಿರ ಹೈಮಾಸ್ಕ್ ಅಳವಡಿಸಬೇಕು ಎಂಬುದು ಸಾರ್ವಜನಿಕರು ಮತ್ತು ಅಧಿಕಾರಿಗಳ ಬೇಡಿಕೆಯಾಗಿದೆ.

ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯ ತುಂಬಿ ಗಲೀಜು ಹೊರಗೆ ಹರಿಯುತ್ತಿದೆ. ಹೀಗೆ ಹೊಲಸು ನೀರು ಪಕ್ಕದ ಬಸವೇಶ್ವರ ನಗರದಲ್ಲಿ ಹರಿಯುವುದರಿಂದ ಅಲ್ಲಿನ ವಾತಾವರಣ ದುರ್ನಾತದಿಂದ ಕೂಡಿದೆ. ಬಸವೇಶ್ವರ ನಗರದ ನಿವಾಸಿಗಳು ಸಾಕಷ್ಟು ಬಾರಿ ಶೌಚಾಲಯದ ನೀರನ್ನು ಹೊರಗೆ ಬಿಡಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ಅವರ ಮನವಿಗೆ ಸಾರಿಗೆ ಅಧಿಕಾರಿಗಳು ಸ್ಪಂದಿಸಿಲ್ಲ.

ವಾಣಿಜ್ಯಾತ್ಮಕವಾಗಿ ಉತ್ತಮ ವಹಿವಾಟು ನಡೆಸುವ ಲಕ್ಷ್ಮೇಶ್ವರ ಪಟ್ಟಣಕ್ಕೆ ದಿನನಿತ್ಯ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಆದರೆ, ಪಟ್ಟಣಕ್ಕೆ ಮುಕುಟಮಣಿಯಂತೆ ಇರಬೇಕಿದ್ದ ಬಸ್‌ ನಿಲ್ದಾಣ ಬೇಸರ ಹುಟ್ಟಿಸುವಷ್ಟರ ಮಟ್ಟಿಗೆ ಗಲೀಜು, ಅವ್ಯವಸ್ಥೆಯಿಂದ ಕೂಡಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಸ್‌ ನಿಲ್ದಾಣದ ಅಭಿವೃದ್ಧಿಗೆ ಕ್ರಮವಹಿಸಬೇಕಿದೆ. ಅದೇರೀತಿ, ಸಾರ್ವಜನಿಕರು ಕೂಡ ಬಸ್‌ ನಿಲ್ದಾಣದ ಸ್ವಚ್ಛತೆಗೆ ಕೈಜೋಡಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ಎಲ್ಲೆಂದರಲ್ಲಿ ನಿಲ್ಲುವ ಆಟೋಗಳು
ಎಲ್ಲೆಂದರಲ್ಲಿ ನಿಲ್ಲುವ ಆಟೋಗಳು
ಬಸ್ ಹತ್ತಲು ಪರದಾಡುತ್ತಿರುವ ಪ್ರಯಾಣಿಕರು
ಬಸ್ ಹತ್ತಲು ಪರದಾಡುತ್ತಿರುವ ಪ್ರಯಾಣಿಕರು
ಬಂದ್ ಆಗಿರುವ ಶುದ್ಧ ನೀರಿನ ಘಟಕ
ಬಂದ್ ಆಗಿರುವ ಶುದ್ಧ ನೀರಿನ ಘಟಕ
ನಿಲ್ದಾಣದಲ್ಲಿದ್ದ ಕಲ್ಲಿನ ಆಸನಗಳು ಮುರಿದು ಬಿದ್ದಿವೆ
ನಿಲ್ದಾಣದಲ್ಲಿದ್ದ ಕಲ್ಲಿನ ಆಸನಗಳು ಮುರಿದು ಬಿದ್ದಿವೆ

ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಲು ಖಾಸಗಿ ವಾಹನಗಳ ನಿಯಂತ್ರಣಕ್ಕೆ ತಕ್ಕ ಕ್ರಮಕೈಗೊಳ್ಳುತ್ತೇವೆ –ಎಸ್.ಬಿ. ಹತ್ತಾಪಕ್ಕಿ ಪ್ರಭಾರ ಘಟಕ ವ್ಯವಸ್ಥಾಪಕರು

ಸಕ್ಕಿಂಗ್ ಮಷಿನ್ ಮೂಲಕ ಶೌಚಾಲಯ ಸ್ವಚ್ಛ ಮಾಡಿ ತ್ಯಾಜ್ಯ ನೀರನ್ನು ಬಸವೇಶ್ವರ ನಗರಕ್ಕೆ ಬಿಡದಂತೆ ಅಧಿಕಾರಿಗಳು ಕ್ರಮ ವಹಿಸಬೇಕು –ಸಿ.ಜಿ. ಹಿರೇಮಠ ಬಸವೇಶ್ವರ ನಗರದ ನಿವಾಸಿ

ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಖಾಸಗಿ ವಾಹನಗಳು ನಿಲ್ಲುತ್ತಿವೆ. ಅವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. –ಬಿ.ಎಸ್. ಬಾಳೇಶ್ವರಮಠ ವಕೀಲರು ಲಕ್ಷ್ಮೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT