ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ: ಹೊಲ ಹದಗೊಳಿಸಲು ಮುಂದಾದ ರೈತರು

ರೋಹಿಣಿ ಮಳೆಯತ್ತ ರೈತರ ಚಿತ್ತ: ಕಾಲುವೆಗಳಿಗೆ ನೀರು ಬರುವ ಭರವಸೆ
Published 21 ಮೇ 2024, 4:44 IST
Last Updated 21 ಮೇ 2024, 4:44 IST
ಅಕ್ಷರ ಗಾತ್ರ

ನರಗುಂದ: ಬಿರು ಬೇಸಿಗೆಗೆ ತತ್ತರಿಸಿದ್ದ ರೈತರು ಕಳೆದ ಎರಡು ಮೂರುದಿನಗಳಿಂದ ಪಟ್ಟಣ ಹಾಗೂ ತಾಲ್ಲೂಕಿನ ಕೆಲವೆಡೆ ಮಳೆ ಸುರಿದಿದ್ದು ರೈತರು ಸಂತಸದಲ್ಲಿ ಇದ್ದಾರೆ. ಬರಗಾಲದಿಂದ ಹೊಲದಿಂದ ವಿಮುಖಗೊಂಡಿದ್ದ ರೈತರು ಕಳೆದ ನಾಲ್ಕು ದಿನಗಳಿಂದ ಹೊಲ ಹರಗಿ, ಹದಗೊಳಿಸಲು ಮುಂದಾಗುತ್ತಿದ್ದಾರೆ.

ರೈತರ ಪ್ರಮುಖ ಹಂಗಾಮೆಂದೇ ಕರೆಯಲ್ಪಡುವ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಿದ್ದರಾಗುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ 38 ಡಿಗ್ರಿ, ಸೆಲ್ಸಿಯಸ್‌ನಿಂದ 41 ಡಿಗ್ರಿ ಸೆಲ್ಸಿಯಸ್ ನಷ್ಟು ಇದ್ದ ತಾಪಮಾನ . ವರುಣನ ಆಗಮನದಿಂದ ಮೂರು ದಿನಗಳಿಂದ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಹವಾಮಾನದಲ್ಲಿ ಬದಲಾವಣೆ ಆಗುತ್ತಿದೆ. ಮಳೆಗಾಗಿ ಕಾಯುತ್ತಾ ಕುಳಿತಿದ್ದ ರೈತರಿಗೆ ಆಶಾಭಾವನೆ ಮೂಡಿದೆ.ಇದರಿಂದ ಮುಂಗಾರು ಬಿತ್ತನೆಗೆ ಭೂಮಿ ಹದಗೊಳ್ಳಿಸಲು ಪ್ರಾರಂಭಿಸಿದ್ದಾನೆ.

ವಾಡಿಕೆಗಿಂತಲೂ ಹೆಚ್ಚು ಮಳೆ: ಮೇ ಅಂತ್ಯದವರೆಗೆ 24 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ ಈಗ ಮೇ 19ರವರೆಗೆ 36 ಮಿ.ಮೀ.ಮಳೆ ಸುರಿದಿದೆ. ಇದು ರೈತರಿಗೆ ಉತ್ಸಾಹ ತುಂಬಿದೆ. ಇದರಿಂದಾಗಿ ಭೂಮಿ ಹದಗೊಳಿಸಲು ಎಡೆಬಿಡದೆ ಮುಂದಾಗಿರುವುದು ಕಾಣುತ್ತಿದೆ.

ಬೀಜ, ಗೊಬ್ಬರ ಸಂಗ್ರಹ: ಮುಂಗಾರು ಬಿತ್ತನೆಗೆ ಅಗತ್ಯವಿರುವ ಬೀಜ, ಗೊಬ್ಬರ ಸಂಗ್ರಹಣೆಗೆ ರೈತರು ಹಾಗೂ ಕೃಷಿ ಇಲಾಖೆ ಮುಂದಾಗುತ್ತಿದೆ. ರೈತರು ಅಗ್ರೋ ಸೆಂಟರ್ ಗಳಲ್ಲಿ ಗೊಬ್ಬರ ಖರೀದಿ ಮಾಡುತ್ತಿದ್ದಾರೆ.

ನವಿಲುತೀರ್ಥ ಜಲಾಶಯದತ್ತ ರೈತರ ಚಿತ್ತ: ತಾಲ್ಲೂಕಿನ ಶೇ 50ರಷ್ಟು ಭೂಮಿ ನೀರಾವರಿಯಿಂದ ಕೂಡಿದೆ. ಈ ರೈತರಿಗೆ ಸವದತ್ತಿ ಬಳಿಯ ಮಲಪ್ರಭಾ ನದಿಯ ನವಿಲು ತೀರ್ಥ ಜಲಾಶಯ ಆಧಾರ. ಇದಕ್ಕೆ ಪೂರಕವಾಗಿ ಹವಾಮಾನ ಇಲಾಖೆ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದ್ದರಿಂದ ರೈತರು ತಮ್ಮ ಚಿತ್ತವನ್ನೂ ನವಿಲುತೀರ್ಥದತ್ತ ಹರಿಸಿದ್ದು ನೀರಾವರಿ ಆಶ್ರಿತ ಬಿಟಿ ಹತ್ತಿ ಬಿತ್ತನೆಗೂ ಪೈಪೋಟಿ ನಡೆಸುತ್ತಿದ್ದಾರೆ.

ಒಟ್ಟಾರೆ ಆರಂಭದಲ್ಲಿಯೇ ಮಳೆ ಆಶಾದಾಯಕ ಭಾವನೆ ಮೂಡಿಸಿದೆ. ಉತ್ತಮ ಮಳೆ ರೈತರಿಗೆ ವರವಾಗಬೇಕಿದೆ.

ಆರಂಭದಲ್ಲಿ ಮುಂಗಾರು ಮಳೆ ಒಳ್ಳೆಯ ಮುನ್ಸೂಚನೆ ನೀಡಿದೆ.ಹವಾಮಾನ ಇಲಾಖೆ ಮೂಲದ ಪ್ರಕಾರ ವಾಡಿಕೆ ಮಳೆಗಿಂತ ಹೆಚ್ಚಿನ ಮಳೆ ಆಗಬಹುದು. ಕೃಷಿ ಇಲಾಖೆ ಎರಡು ದಿನಗಳಲ್ಲಿ ಹೆಸರು ಬೀಜ ವಿತರಣೆ ಆರಂಭಿಸಲಿದೆ. ಬೀಜಗೊಬ್ಬರ ಸಂಗಹವಿದೆ

-ಗುರುನಾಥ್ ಎಂ.ಬಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ

ಬಿತ್ತನೆ ಮಾಡುವಷ್ಟು ಮಳೆಯಾಗಿಲ್ಲ. ಆದರೂ ರೋಹಿಣಿ ಮಳೆ ಸುರಿಯುವ ಭರವಸೆ ಇದೆ. ಆ ಸಂದರ್ಭದಲ್ಲಿ ಕೃಷಿ ಇಲಾಖೆ ರೈತರ ಬಿತ್ತನೆಗೆ ಬೇಕಾದ ಬೀಜಗೊಬ್ಬರ ಕೊರತೆಯಾಗದಂತೆ ನೋಡಿ ಕೊಳ್ಳಬೇಕು

-ಎಂ.ಎಂ.ಜಾವೂರ ಸುರಕೋಡ

ರೋಹಿಣಿ ಮಳೆಯೇ ಆಧಾರ

ಮುಂಗಾರು ಹಂಗಾಮಿನಲ್ಲಿ ರೋಹಿಣಿ ಮಳೆಯೇ ಮುಖ್ಯ ಆಧಾರ. ಇದು ಸಮರ್ಪಕವಾಗಿ ಸುರಿದರೆ ಮುಂಗಾರಿನ ವಾಣಿಜ್ಯ ಬೆಳೆಯಾದ ಹೆಸರು ಕಾಳು ಬಿತ್ತನೆಗೆ ಸಾಧ್ಯ. ಜೊತೆಗೆ ಫಸಲು ಬರಲು ಅನುಕೂಲವಾಗುತ್ತದೆ. ಇದರ ಜೊತೆಗೆ ಗೋವಿನಜೋಳ ಬಿ.ಟಿ.ಹತ್ತಿ ಈರುಳ್ಳಿ ಸೂರ್ಯಕಾಂತಿ ಮೆಣಸಿನಕಾಯಿ ಸಜ್ಜೆ ತೊಗರಿ ಬಿತ್ತನೆ ಮಾಡುತ್ತಾರೆ. ಮೇ 24-25ರ ಸುಮಾರಿಗೆ ರೋಹಿಣಿ ಮಳೆ ಆರಂಭವಾಗುತ್ತದೆ. ಆದರೆ ಅದು ಸುರಿದು ರೈತರನ್ನು ಖುಷಿಗೊಳಿಸಬೇಕಿದೆ. ಆದ್ದರಿಂದ ರೈತರ ಚಿತ್ತ ರೋಹಿಣಿ ಮಳೆಯತ್ತ ಎನ್ನುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT