ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಗದಗ ಲೋಕಸಭಾ ಕ್ಷೇತ್ರ | ಬೊಮ್ಮಾಯಿ ಹೆಸರು ಅಂತಿಮ; ಆಕಾಂಕ್ಷಿಗಳಿಗೆ ನಿರಾಸೆ

ಕಾಂಗ್ರೆಸ್‌– ಬಿಜೆಪಿ ನಡುವೆ ನೇರ ಹಣಾಹಣಿ ನಿಶ್ಚಿತ
Published 14 ಮಾರ್ಚ್ 2024, 4:49 IST
Last Updated 14 ಮಾರ್ಚ್ 2024, 4:49 IST
ಅಕ್ಷರ ಗಾತ್ರ

ಗದಗ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದ್ದು, ಈ ಕ್ಷೇತ್ರದಿಂದ ಅಭ್ಯರ್ಥಿ ಯಾರಾಗಬಹುದು ಎಂಬ ಹಲವು ದಿನಗಳ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಆದರೆ, ಬಿಜೆಪಿಯಿಂದ ಟಿಕೆಟ್‌ ಪಡದೇ ತೀರಬೇಕು ಎಂಬ ಹಠದಿಂದ ಸಾಕಷ್ಟು ಪ್ರಯತ್ನ ನಡೆಸಿದ್ದ ಹಲವು ಆಕಾಂಕ್ಷಿಗಳಿಗೆ ಈ ಪಟ್ಟಿ ತೀವ್ರ ನಿರಾಸೆ ಮೂಡಿಸಿದೆ.

ಹಾಲಿ ಸಂಸದ ಶಿವಕುಮಾರ ಉದಾಸಿ ಅವರು ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ ನಂತರ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್‌ ಹಾವೇರಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿದ್ದರು. ಇತರೆ ಆಕಾಂಕ್ಷಿಗಳಿಗೆ ಹೋಲಿಕೆ ಮಾಡಿದಲ್ಲಿ ಮುಂಚೂಣಿಯಲ್ಲಿದ್ದ ಇವರು ಹಾವೇರಿ, ಗದಗ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಸೆಳೆಯುವ ಯತ್ನದಲ್ಲಿ ತೊಡಗಿದ್ದರು.

ಗದಗ ನಗರದಲ್ಲಿ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಿ, ಅಂದು ಊರಿಗೆಲ್ಲಾ ಹೋಳಿಗೆ ಊಟ ಹಾಕಿಸಿದ್ದರು. ಅದೇರೀತಿ, ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿ ಜನಸಂಪರ್ಕ ಸಾಧಿಸುತ್ತಿದ್ದರು.

ಮಗನಿಗೆ ಹಾವೇರಿ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಕೆ.ಎಸ್‌.ಈಶ್ವರಪ್ಪ ಅವರು ಕಾಂತೇಶ್‌ ಜತೆಗೆ ಒಟ್ಟಾಗಿ ವೇದಿಕೆ ಹಂಚಿಕೊಂಡಿದ್ದರು. ಮಗನಿಗೆ ಚುನಾವಣೆಯಲ್ಲಿ ಆಶೀರ್ವಾದ ಮಾಡುವಂತೆ ಹಲವು ವೇದಿಕೆಗಳಲ್ಲಿ ಕೋರಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬೊಮ್ಮಾಯಿ ಹೆಸರು ಅಂತಿಮಗೊಂಡಿದೆ.

‘ಹಿರಿಯ ನಾಯಕರ ಒಡನಾಟದ ಜತೆಗೆ ರಾಜ್ಯದಲ್ಲಿ ಅಪ್ಪನ ರಾಜಕೀಯ ಪ್ರಭೆ ಜೋರಾಗಿ ಇದ್ದಿದ್ದರಿಂದ ಹಾವೇರಿ ಕ್ಷೇತ್ರದಿಂದ ಟಿಕೆಟ್‌ ಸಿಕ್ಕೇಸಿಗುತ್ತದೆ ಎಂಬ ಆತ್ಮವಿಶ್ವಾಸ ಹೊಂದಿದ್ದ ಕೆ.ಇ.ಕಾಂತೇಶ್‌ ಅವರಿಗೆ ಈ ಪಟ್ಟಿ ತೀವ್ರ ನಿರಾಸೆ ಮೂಡಿಸಿದೆ’ ಎಂದು ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಹಾವೇರಿ ಕ್ಷೇತ್ರದ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಆಗಿದ್ದವರು ಡಾ. ಮಹೇಶ ನಾಲವಾಡ. ಇವರು ಕೂಡ ಹಲವು ತಿಂಗಳುಗಳಿಂದ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನಸಂಪರ್ಕ ಸಾಧಿಸಿದ್ದರು. ತುಂಬ ಹಿಂದಿನಿಂದಲೂ ತಮ್ಮದೇ ಟ್ರಸ್ಟ್‌ ಮೂಲಕ ಹಲವು ಸಾಮಾಜಿಕ ಚಟುವಟಿಕೆಗಳನ್ನು ನಡೆಸಿ, ಜನರ ವಿಶ್ವಾಸ ಗಳಿಸಿದ್ದರು.

ಬಿಜೆಪಿ ಹಿರಿಯ ಮುಖಂಡರ ಜತೆಗಿನ ಒಡನಾಟ, ಜನಾನುರಾಗಿ ವ್ಯಕ್ತಿತ್ವದ ಕಾರಣದಿಂದಾಗಿ ಈ ಬಾರಿಯ ಟಿಕೆಟ್‌ ತನಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಡಾ. ಮಹೇಶ್ ಅವರಿಗೂ ಈಗ ನಿರಾಸೆಯಾಗಿದೆ.

‘ಹಾವೇರಿ ಗದಗ ಲೋಕಸಭಾ ಕ್ಷೇತ್ರಕ್ಕೆ ನನಗಿಂತ ಸಮರ್ಥ ಅಭ್ಯರ್ಥಿ ಮತ್ತ್ಯಾರು ಇದ್ದಾರೆ?’ ಎಂಬ ಆತ್ಮವಿಶ್ವಾಸದಿಂದಲೇ ವರ್ಷದ ಹಿಂದಿನಿಂದಲೇ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡು ಪ್ರಚಾರ ಆರಂಭಿಸಿದವರು ಡಾ. ಶೇಖರ ಸಜ್ಜನರ. ಇವರು ಕರ್ನಾಟಕ ಮಾಹಿತಿ ಆಯೋಗದ ನಿವೃತ್ತ ಮಾಹಿತಿ ಆಯುಕ್ತರು.

ಚೆನ್ನಾಗಿ ಓದಿಕೊಂಡಿರುವ, ಪ್ರಧಾನಿ ಮೋದಿ ಅವರ ಬಗ್ಗೆ ಅಪಾರ ಒಲವು ಇಟ್ಟುಕೊಂಡಿದ್ದ ಇವರು ಈ ವಿಶ್ವಾಸದಿಂದಲೇ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇವರಿಗೂ ನಿರಾಸೆ ತರಿಸಿದೆ.

ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಶಶಿಧರ ನಾಗರಾಜಪ್ಪ ಕೂಡ ಹಾವೇರಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಸಾಗರೋತ್ತರ ಬಿಜೆಪಿಯ ಕರ್ನಾಟಕ ಸಂಯೋಜಕರಾಗಿ 22 ವರ್ಷಗಳ ದುಡಿದಿದ್ದ ಇವರು ಅನಿವಾಸಿ ಭಾರತೀಯರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದರು. ದುಬೈಗೆ ತೆರಳುವ ಬಿಜೆಪಿ ನಾಯಕರಿಗೆ ಅತಿಥಿ ಸತ್ಕಾರ ಮಾಡುತ್ತಿದ್ದ ಇವರು ಹಾವೇರಿ ಕ್ಷೇತ್ರದಿಂದ ಸ್ಪರ್ಧೆಗೆ ಬಯಸಿ ಹಿರಿಯ ಮುಖಂಡರನ್ನು ಸಂಪರ್ಕಿಸಿದ್ದರು. ಆದರೆ, ಇವರಿಗೂ ಟಿಕೆಟ್‌ ಕೈ ತಪ್ಪಿದೆ.

ಅಂತಿಮವಾಗಿ ಭಾರತೀಯ ಜನತಾ ಪಕ್ಷವು ಹಾವೇರಿ ಗದಗ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಹಾಗಾಗಿ, ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಮತ್ತು ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ನಡುವೆ ನೇರ ಹಣಾಹಣಿ ಏರ್ಪಡುವುದು ನಿಶ್ಚಿತವಾಗಿರುವುದರಿಂದ ಈ ಕ್ಷೇತ್ರ ಕೂಡ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಡಲಿದೆ.

ಕೆ.ಎಸ್‌.ಈಶ್ವರಪ್ಪ ಪುತ್ರನ ಪರ ಒಲವು ತೋರದ ವರಿಷ್ಠರು ತೀವ್ರ ಲಾಭಿಯಿಂದ ಕೂಡಿದ್ದ ಹಾವೇರಿ–ಗದಗ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT