ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ: ಶೇಂಗಾ ಬೆಳೆ ಹಾನಿ

ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಬೆಳೆಗಾರರ ಒತ್ತಾಯ
Last Updated 16 ಸೆಪ್ಟೆಂಬರ್ 2020, 5:06 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಕಾಯಿ ಬಿಡುವ ಸಮಯಕ್ಕೆ ಬಿಟ್ಟೂ ಬಿಡದೆ ಸುರಿದ ಜಿಟಿಜಿಟಿ ಮಳೆಯ ಪರಿಣಾಮ ಶೇಂಗಾ ಬೆಳೆಗೆ ಹಾನಿಯಾಗಿದೆ. ಶೇ 50ರಷ್ಟು ಇಳುವರಿ ಕುಂಠಿತಗೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಾರಿ ತಾಲ್ಲೂಕಿನ 15 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕಂಠಿಶೇಂಗಾ ಬಿತ್ತನೆ ಮಾಡಲಾಗಿದೆ. ಆರಂಭದಲ್ಲಿ ಹದವರಿತು ಮಳೆ ಆಗಿದ್ದರಿಂದ ಬಿತ್ತಿದ ಬೀಜ ಚೆನ್ನಾಗಿ ಹುಟ್ಟಿತ್ತು. ಒಂದರಿಂದ ಒಂದೂವರೆ ಅಡಿವರೆಗೆ ಶೇಂಗಾಬಳ್ಳಿ ಬೆಳೆದಿತ್ತು. ಇದನ್ನು ನೋಡಿದ ರೈತರು ಈ ವರ್ಷ ಬಂಪರ್ ಬೆಳೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಇದ್ದರು. ಆದರೆ ತಿಂಗಳವರೆಗೆ ಸುರಿದ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಯಿ ಸರಿಯಾಗಿ ಕಟ್ಟಲು ಅವಕಾಶ ಸಿಗಲಿಲ್ಲ. ಹೀಗಾಗಿ ಇಳುವರಿ ಬಹಳಷ್ಟು ಕಡಿಮೆಯಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು, ಮಾಡಿದ ವೆಚ್ಚವೂ ಕೈಸೇರುವುದಿಲ್ಲ ಎಂದು ಚಿಂತೆಗೀಡಾಗಿದ್ದಾರೆ.

‘ಈ ವರ್ಷದ ಮಳಿಗೆ ಶೇಂಗಾ ಚಲೋ ಬರತೈತಿ ಅಂತಾ ಲೆಕ್ಕಾ ಹಾಕಿದ್ವಿ. ಆದರ ಮಳಿರಾಯ ನಮ್ಮ ಲೆಕ್ಕಾನ ಉಲ್ಟಾ ಮಾಡ್ಯಾನ. ಹೆಚ್ಚಿಗೆ ಮಳಿ ಆಗಿದ್ದರಿಂದ ರೋಗ ಬಂದು ಶೇಂಗಾ ಸರಿಯಾಗಿ ಬೆಳದಿಲ್ರೀ’ ಎಂದು ಸಮೀಪದ ಗೊಜನೂರು ಗ್ರಾಮದ ಮುತ್ತಣ್ಣ ಸೊರಟೂರ ಮತ್ತು ಗಂಗನಗೌಡ ಪಾಟೀಲ ಅಳಲು ತೋಡಿಕೊಂಡರು.

‘ನಾಲ್ಕು ಎಕರೇಕ ನಲವತ್ತು ಸಾವಿರ ರೂಪಾಯಿ ಖುರ್ಚ ಮಾಡಿನಿ. ಆದರ ಲಾಭ ಹೋಗಲಿ ಹಾಕಿದ ಬಂಡವಾಳನೂ ಬರಲಾರದ ಸ್ಥಿತಿ ಐತ್ರಿ’ ಎಂದು ಲಕ್ಷ್ಮೇಶ್ವರದ ಶೇಂಗಾ ಬೆಳೆಗಾರ ಈಶ್ವರ ಮುಗಳಿ ನೋವು ತೋಡಿಕೊಂಡರು.

ಪರಿಹಾರಕ್ಕೆ ಆಗ್ರಹ: ‘ಅತಿವೃಷ್ಟಿಯಿಂದಾಗಿ ಕಂಠಿಶೇಂಗಾ ಸರಿಯಾಗಿ ಬೆಳೆದಿಲ್ಲ. ಹೀಗಾಗಿ ಶೇಂಗಾ ಬೆಳೆಗಾರರಿಗೆ ಸಾಕಷ್ಟು ನಷ್ಟ ಆಗಿದೆ. ಕಾರಣ ಸರ್ಕಾರ ಶೇಂಗಾ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ತಾಲ್ಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT