ಶುಕ್ರವಾರ, ಮೇ 27, 2022
21 °C
ಗದಗ: ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಫ್. ಜಕ್ಕಪ್ಪನವರ ವಾಗ್ದಾಳಿ

ಚುನಾವಣೆಗೆ ಸ್ಪರ್ಧಿಸುವ ನೈತಿಕ ಹಕ್ಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಬಿಜೆಪಿ ಅಧಿಕಾರ ವಿಕೇಂದ್ರೀಕರಣವನ್ನು ವಿರೋಧಿಸಿದ ಪಕ್ಷ. ಇಂತಹ ಪಕ್ಷಕ್ಕೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಸ್ಪರ್ಧಿಸುವ ನೈತಿಕ ಹಕ್ಕು ಇಲ್ಲ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಫ್.ಜಕ್ಕಪ್ಪನವರ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸ್ವರಾಜ್‍ದ ಪರಿಕಲ್ಪನೆಯೇ ಇಲ್ಲದ ಬಿಜೆಪಿ ಜನ ಸ್ವರಾಜ್ ಸಮಾವೇಶ ಮಾಡಿದ್ದು ಹಾಸ್ಯಾಸ್ಪದ. ಈ ಹಿಂದೆ ಬಿಜೆಪಿ ಉಪಾಧ್ಯಕ್ಷರಾಗಿದ್ದ ರಾಮಾಜೋಯೀಸ್ ಅವರು ಗ್ರಾಮ ಪಂಚಾಯ್ತಿ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವಿರೋಧಿಸಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು’ ಎಂದು ದೂರಿದರು.

‘ಕಳೆದ ವರ್ಷ ಗ್ರಾಮ ಪಂಚಾಯ್ತಿಗಳ ಅವಧಿ ಮುಗಿದರೂ ಚುನಾವಣೆ ನಡೆಸಲಿಲ್ಲ. ಇದೀಗ ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿಗಳ ಅಧಿಕಾರವಧಿ ಮುಗಿದಿದ್ದರೂ ಚುನಾವಣೆ ನಡೆಸುತ್ತಿಲ್ಲ. ಕಾಂಗ್ರೆಸ್ ಪಕ್ಷ ಹೈಕೋರ್ಟ್‍ಗೆ ಪಿಐಎಲ್ ಹಾಕಿದ ನಂತರವಷ್ಟೇ ಕೋರ್ಟ್ ಸೂಚನೆ ಮೇರೆಗೆ ಚುನಾವಣೆ ನಡೆಸಿದರು’ ಎಂದು ಹೇಳಿದರು.

‘ಬಿಜೆಪಿ ಸರ್ಕಾರ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು ಐದು ವರ್ಷದಿಂದ ಎರಡೂವರೆ ವರ್ಷಕ್ಕೆ ಇಳಿಸಿದೆ. ವಾರ್ಡ್‍ಗಳ ಮೀಸಲಾತಿಯನ್ನು ಎರಡು ಅವಧಿಗೆ ಬದಲಾಗಿ ಒಂದು ಅವಧಿಗೆ ಸೀಮಿತಗೊಳಿಸಿದೆ. ಅವಿಶ್ವಾಸ ಗೊತ್ತುವಳಿಗೆ ಎರಡೂವರೆ ವರ್ಷದ ಮಿತಿಯನ್ನು ಆರು ತಿಂಗಳಿಗೆ ಇಳಿಸಿದೆ. ಬಿಜೆಪಿ ಸರ್ಕಾರದ ಈ ಎಲ್ಲ ಕ್ರಮಗಳು ವಿಕೇಂದ್ರೀಕರಣದ ವಿರೋಧಿ ನಡೆಗಳೇ ಆಗಿವೆ’ ಎಂದು ಆಪಾದಿಸಿದರು.

‘ಗ್ರಾಮ ಪಂಚಾಯ್ತಿ ವತಿಯಿಂದ ಅನುಷ್ಠಾನಗೊ‌ಳ್ಳಬೇಕಿರುವ ವಿವಿಧ ಯೋಜನೆಗಳನ್ನು ರಾಜ್ಯ ಸರ್ಕಾರ ಜಿಲ್ಲಾ ಪಂಚಾಯ್ತಿ ಸಿಇಒ, ಗ್ರಾಮ ಪಂಚಾಯ್ತಿ ಪಿಡಿಒ ಹೀಗೆ ಅಧಿಕಾರಿಗಳ ಮೂಲಕ ನಡೆಸಿ ಭ್ರಷ್ಟಾಚಾರ ಮಾಡುತ್ತಿದೆ. ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಜಲ ಜೀವನ್‌ ಮಿಷನ್‌ ಯೋಜನೆಯನ್ನು ಸ್ಥಳೀಯ ಆಡಳಿತಗಳಿಗೆ ಮಾಹಿತಿ ನೀಡದೇ ಏಜೆನ್ಸಿ ಮೂಲಕ ಕಾಮಗಾರಿ ನಡೆಸಿ ಕೋಟ್ಯಂತರ ರೂಪಾಯಿ ಹಣ ಲೂಟಿ ಹೊಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆಯಿಲ್ಲದ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು. 

‘ಸರ್ಕಾರ ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಸೋಲಾರ್ ಅಳವಡಿಸುವ ಯೋಜನೆ ಹಾಕಿಕೊಂಡಿದ್ದು ಸ್ವಾಗತಾರ್ಹ. ಆದರೆ, ಅದನ್ನು ಸಚಿವರೊಬ್ಬರ ಸಹೋದರನಿಗೆ ಗುತ್ತಿಗೆ ನೀಡಿದ್ದು, ಭ್ರಷ್ಟಾಚಾರವಲ್ಲದೇ ಮತ್ತೇನೂ ಅಲ್ಲ’ ಎಂದು ಆರೋಪ ಮಾಡಿದರು.

ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ, ಗದಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಗದಗ ಜಿಲ್ಲಾ ಕಾಂಗ್ರೆಸ್ ಎಸ್‍ಸಿ ವಿಭಾಗದ ಅಧ್ಯಕ್ಷ ಬಸವರಾಜ ಕಡೇಮನಿ, ಅಜಯ ಪಾಟೀಲ, ಮಲ್ಲಿಕಾರ್ಜುನ ಬಳ್ಳಾರಿ ಇದ್ದರು.

‘ಹೈಕೋರ್ಟ್‌ ಚಾಟಿ ಬೀಸಿದ ಬಳಿಕವಷ್ಟೇ ಚುನಾವಣೆ’

‘ಗದಗ ಬೆಟಗೇರಿ ನಗರಸಭೆ ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ ಅಧಿಕಾರವಧಿ ಮುಗಿದರೂ ಚುನಾವಣೆ ನಡೆಸಿರಲಿಲ್ಲ. ಇದನ್ನು ಕಂಡ ಹೈಕೋರ್ಟ್‌ ಸ್ವಯಂ ಪ್ರಕರಣ ದಾಖಲಿಸಿಕೊಂಡು ಸರ್ಕಾರಕ್ಕೆ ಎಚ್ಚರಿಕೆ ನೀಡಿತು. ಬಳಿಕವಷ್ಟೇ ಅವರು ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಿದರು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಫ್.ಜಕ್ಕಪ್ಪನವರ ಹೇಳಿದರು.

‘ಅದೇ ಮಾದರಿಯಲ್ಲಿ ನ್ಯಾಯಾಲಯವು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳನ್ನು ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.

ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್‌ ಹೆಚ್ಚಿನ ಮತಗಳ ಅಂತರದಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ಜಯ ಸಾಧಿಸಲಿದ್ದಾರೆ
ಎಫ್.ಎಚ್. ಜಕ್ಕಪ್ಪನವರ, ಕಾಂಗ್ರೆಸ್ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.