ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಮಳೆರಾಯನ ಕಣ್ಣಾಮುಚ್ಚಾಲೆ; ಹೆಸರು ಬಿತ್ತನೆಯಲ್ಲಿ ಹಿನ್ನಡೆ: ಆತಂಕ

ಕೈಕೊಟ್ಟ ರೋಹಿಣಿ ಮಳೆ
Published 2 ಜೂನ್ 2024, 5:01 IST
Last Updated 2 ಜೂನ್ 2024, 5:01 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ರೋಣಿ ಮಳೆ ಆದರ ಓಣಿ ತುಂಬ ಕಾಳು’ ಎಂಬ ನಾಣ್ನುಡಿ ರೈತಾಪಿ ವಲಯದಲ್ಲಿ ಪ್ರಚಲಿತದಲ್ಲಿದೆ. ಆದರೆ ರೋಹಿಣಿ ಮಳೆ ಅವಧಿ ಮುಗಿಯುತ್ತಾ ಬಂದರೂ ತಾಲ್ಲೂಕಿನಲ್ಲೆಡೆ ಸರಿಯಾಗಿ ಮಳೆ ಆಗುತ್ತಿಲ್ಲ. ಇದರಿಂದಾಗಿ ರೈತರಲ್ಲಿ ಆತಂಕ ಶುರುವಾಗಿದೆ.

ಮೇ 17ರಿಂದ 21ರ ವರೆಗೆ ತಾಲ್ಲೂಕಿನ ಕೆಲ ಭಾಗಗಳಲ್ಲಿ ಉತ್ತಮ ಮಳೆ ಆಗಿದ್ದರಿಂದ ರೈತರು ಬಿತ್ತನೆ ಕೈಗೊಂಡಿದ್ದಾರೆ. ಮೇ 21ರಂದು 6.7 ಸೆಂ.ಮೀ ಆಗಿದ್ದು ಬಿಟ್ಟರೆ ನಂತರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ.

ಮುಂದೆ ಮಳೆ ಆಗಬಹುದು ಎಂಬ ನಿರೀಕ್ಷೆಯಿಂದ ರೈತರು ಇರುವಷ್ಟು ತೇವಾಂಶ ನಂಬಿ ಬಿತ್ತನೆ ಕೈಗೊಂಡಿದ್ದಾರೆ. ನೂರಾರು ಹೆಕ್ಟೇರ್ ಬಿತ್ತನೆ ಕಾರ್ಯ ಮುಗಿದಿದೆ. ರೋಹಿಣಿ ಮಳೆಗೆ ಹೆಸರು ಬಿತ್ತನೆ ಜೋರು. ಆದರೆ ಈ ವರ್ಷ ರೋಹಿಣಿ ಮಳೆ ಸರಿಯಾಗಿ ಆಗಿಲ್ಲ. ಕಾರಣ ಹೆಸರು ಬಿತ್ತನೆಗೆ ಹಿನ್ನಡೆ ಆಗಿದೆ.

ತಾಲ್ಲೂಕಿನ ರಾಮಗೇರಿ, ಬಸಾಪುರ ಭಾಗದ ಎರೆ ಭೂಮಿಗೆ ಒಂದಷ್ಟು ಮಳೆ ಚೆನ್ನಾಗಿ ಸುರಿದಿದ್ದು, ಅಲ್ಲಿನ ರೈತರು ಬೆಳ್ಳುಳ್ಳಿ, ಈರುಳ್ಳಿ, ಹೆಸರು ಬಿತ್ತನೆ ನಡೆಸುತ್ತಿದ್ದಾರೆ. ಮೊದಲೇ ಬಿತ್ತನೆ ಮಾಡಿದ ಕಾಳುಗಳು ಮೊಳಕೆಯೊಡೆದು ಮತ್ತೆ ಮಳೆರಾಯನ ಆಗಮನಕ್ಕಾಗಿ ಕಾಯುತ್ತಿವೆ.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು, ತೊಗರಿ, ಗೋವಿನಜೋಳ ಮತ್ತು ಕಂಠಿಶೇಂಗಾದ ಬಿತ್ತನೆ ಬೀಜಗಳ ಮಾರಾಟ ವ್ಯವಸ್ಥಿತವಾಗಿ ಸಾಗಿದೆ. ಇನ್ನು ಡಿಎಪಿ ಗೊಬ್ಬರದ ಕೊರತೆ ಸಮಸ್ಯೆ ಉಂಟಾಗಿತ್ತು. ಡಿಎಪಿ ಗೊಬ್ಬರ ಸೇರಿಸಿ ರೈತರು ಬಿತ್ತನೆ ಮಾಡುತ್ತಾರೆ. ಹೀಗಾಗಿ ಡಿಎಪಿ ಗೊಬ್ಬರ ಸುಲಭವಾಗಿ ದೊರೆತರೆ ರೈತರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ‘ಸದ್ಯ ತಾಲ್ಲೂಕಿನಲ್ಲಿ 200 ಟನ್ ಡಿಎಪಿ ಗೊಬ್ಬರದ ದಾಸ್ತಾನು ಇದೆ’ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದರು.

ಇವತ್ತು ನಾಳೆ ಮಳೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಮಳೆ ಕೈಕೊಟ್ಟಿದ್ದರಿಂದ ನೀರಾವರಿ ಸೌಲಭ್ಯ ಇರುವ ರೈತರು ಕೊಳವೆ ಬಾವಿಗಳ ಮೂಲಕ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಆದರೆ ಒಣ ಬೇಸಾಯ ನಂಬಿರುವ ರೈತರು ಮೋಡದತ್ತ ವರುಣನ ಆಗಮನಕ್ಕೆ ಕಾಯುತ್ತಿದ್ದಾರೆ.

ಸಾವಿರಾರು ರೂಪಾಯಿ ಮಾಡಿ ಖರ್ಚು ಮಾಡಿ ಹತ್ತು ಎಕರೆದಾಗ ಗ್ವಾಂಜಾಳ ಬಿತ್ತೇನ್ರೀ. ಆದರ ಮಳೀನ ಆಗವಲ್ದು.
-ರಾಜಣ್ಣ ಗುಡಗೇರಿ, ಲಕ್ಷ್ಮೇಶ್ವರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT