ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ ಪುರಸಭೆ: ಗರಿಗೆದರಿದ ರಾಜಕೀಯ ಚಟುವಟಿಕೆ

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ
Published 7 ಆಗಸ್ಟ್ 2024, 5:15 IST
Last Updated 7 ಆಗಸ್ಟ್ 2024, 5:15 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಕೊನೆಗೂ ರಾಜ್ಯ ಸರ್ಕಾರದ ಪೌರಾಡಳಿತ ಇಲಾಖೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅದರಲ್ಲೂ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಅವಧಿ ಮುಕ್ತಾಯಗೊಂಡು 15 ತಿಂಗಳು ಕಳೆದಿದ್ದರೂ ಸಹ ಇದುವರೆಗೂ ಎರಡನೆಯ ಅವಧಿಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಆಗಿರಲಿಲ್ಲ.

ಆದರೆ ಇದೀಗ ಹೈಕೋರ್ಟ್‌ ಆದೇಶದಂತೆ ರಾಜ್ಯ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ನಿಗದಿಪಡಿಸಿದೆ. ಪಟ್ಟಣದ ಪುರಸಭೆಗೆ 2018 ರಲ್ಲಿ ಚುನಾವಣೆಗಳು ನಡೆದಿತ್ತು. ಆದರೆ ಆರಂಭದಲ್ಲಿಯೇ ಬರೋಬ್ಬರಿ ಎರಡು ವರ್ಷಗಳ ಕಾಲ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಗೊಂದಲ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅದು ಗೊಂದಲದ ಗೂಡಾಗಿತ್ತು.

ನಂತರ ಮೇ 3, 2023ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನವನ್ನು ಮೀಸಲಾತಿ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಈಗ ಮೊದಲ 30 ತಿಂಗಳ ಅವಧಿ ಮುಗಿದು ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆ ಖಾಲಿಯಾಗಿ 15 ತಿಂಗಳುಗಳೆ ಕಳೆದಿದ್ದವು.

ಈಗ ಸರ್ಕಾರ ಮತ್ತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಬಾಕಿ ಉಳಿದ 15 ತಿಂಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನ ನಿರ್ಧರಿಸುತ್ತದೆಯೋ ಅಥವಾ 30 ತಿಂಗಳಿಗೆ ನಿರ್ಧರಿಸುತ್ತದೆ ಎಂಬುದು ಸರ್ಕಾರದ ನಿರ್ಣಯ ಅವಲಂಬಿಸಿದೆ.

ಈಗ ಸ್ಥಳೀಯ ಪುರಸಭೆಗೆ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗಗಳ ಅ ಮಹಿಳೆಗೆ ಮೀಸಲಿಟ್ಟಿದ್ದು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಪಡಿಸಿದೆ.

ಕಳೆದ 15 ತಿಂಗಳಿನಿಂದಲೂ ಚುನಾಯಿತ ಸದಸ್ಯರು ಇದ್ದರೂ ಸಹ ಉಪವಿಭಾಗಾಧಿಕಾರಿಗಳು ಆಡಳಿತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದರಿಂದಾಗಿ ಪುರಸಭೆಯ ಪ್ರತಿಯೊಂದು ನಿರ್ಣಯ ಪಡೆಯಲು ಕಾಯಬೇಕಾಗಿತ್ತು. ಇನ್ನು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ನಂತರ ಪುರಸಭೆಯಲ್ಲಿ ಚುನಾಯಿತ ಮಂಡಳಿ ಕ್ರಿಯಾಶೀಲವಾಗಲಿದೆ.

ಪುರಸಭೆಗೆ 2018ರಲ್ಲಿ ಚುನಾವಣೆ ನಡೆದು ಅಂದುಕೊಂಡಂತೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿದ್ದರೆ ಕಳೆದ ವರ್ಷವೇ ಅಂದರೆ 2023ರಲ್ಲಿ ಪುರಸಭೆಯ ಅವಧಿ ಮುಕ್ತಾಯಗೊಳ್ಳುತ್ತಿತ್ತು. ಈಗ ಎರಡು ವರ್ಷ ಅಂದರೆ 24 ತಿಂಗಳು ಮತ್ತು ಈಗ 15 ತಿಂಗಳು ಒಟ್ಟು 39 ತಿಂಗಳ ಕಾಲಹರಣವಾಗಿದ್ದು ಸರ್ಕಾರದ ನಿರ್ಧಾರದ ಮೇಲೆ ಪುರಸಭೆಯ ಅವಧಿ ನಿರ್ಣಯವಾಗಲಿದೆ.

ಇನ್ನು ಮೀಸಲಾತಿ ಹೊರ ಪ್ರಕಟ ಆಗುತ್ತಿದ್ದಂತೆ ಪುರಸಭೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರ ತೊಡಗಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರಾಗಿ ಆಯ್ಕೆ ಆಗಿರುವ ಸದಸ್ಯರು ಇದ್ದಾರೆ. ಸಧ್ಯ ಅಧ್ಯಕ್ಷ, ಉಪಾಧ್ಯಕ್ಷರು ಯಾರು ಆಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT