ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ಹದಗೆಟ್ಟ ರಸ್ತೆಗಳಲ್ಲಿ ಸಂಚಾರ ಹೈರಾಣ

ತಾಲ್ಲೂಕಿನಲ್ಲಿ ಶೇ 90ರಷ್ಟು ರಸ್ತೆಗಳಿಗೆ ಆಗಬೇಕಿದೆ ಮೇಜರ್‌ ಸರ್ಜರಿ
Published 23 ಆಗಸ್ಟ್ 2024, 4:34 IST
Last Updated 23 ಆಗಸ್ಟ್ 2024, 4:34 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನ ಲಕ್ಷ್ಮೇಶ್ವರ–ಹಾವೇರಿ, ಲಕ್ಷ್ಮೇಶ್ವರ–ಹುಬ್ಬಳ್ಳಿ ರಸ್ತೆಗಳನ್ನು ಹೊರತುಪಡಿಸಿದರೆ ಉಳಿದ ರಸ್ತೆಗಳೆಲ್ಲ ಕಿತ್ತು ಹಾಳಾಗಿವೆ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳ ಸ್ಥಿತಿ ಅಯೋಮಯವಾಗಿವೆ.

ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಮತ್ತು ಪಿಎಂಜಿಎಸ್‍ವೈಆರ್‌ ಇಲಾಖೆಗಳಿಗೆ ಸೇರಿದ ಎಲ್ಲ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಹದಗೆಟ್ಟಿರುವ ಗ್ರಾಮೀಣ ರಸ್ತೆಗಳಿಂದಾಗಿ ರೈತರಿಗೆ ಹೊಲಗಳಿಗೆ ಹೋಗಿ ಬರುವುದು ಸಮಸ್ಯೆಯಾಗಿ ಕಾಡುತ್ತಿದೆ. ಕೆಲವು ಕಡೆ ಬೈಕ್‍ಗಳೂ ಹೋಗಲಾರದ ಮಟ್ಟಿಗೆ ರಸ್ತೆಗಳು ದುಃಸ್ಥಿತಿಗೆ ತಲುಪಿವೆ.

ಹಿಂದೆ ನಿರ್ಮಿಸಿದ್ದ ರಸ್ತೆಗಳಲ್ಲಿ ಅಡಿಗಡಿಗೆ ಬೃಹತ್ ಆಕಾರದ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ವಾಹನಸವಾರರು ಪರದಾಡುವ ಪರಿಸ್ಥಿತಿ ಉದ್ಭವಿಸಿದೆ. ಗುಂಡಿ ಬಿದ್ದ ರಸ್ತೆಗಳು ಜನರ ಪ್ರಾಣಹರಣಕ್ಕೆ ಕಾಯುತ್ತಿವೆ.

ಒಟ್ಟು 495 ಕಿ.ಮೀ. ಉದ್ದದ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೊಳಪಟ್ಟಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ 412 ಕಿ.ಮೀ. ರಸ್ತೆಗಳು ಬರುತ್ತವೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಲಕ್ಷ್ಮೇಶ್ವರ-ಹುಬ್ಬಳ್ಳಿಗೆ ಸಂಪರ್ಕಿಸುವ ಮಂಗಸೂಳಿ ಮತ್ತು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಗಳು ಮತ್ತು ಲಕ್ಷ್ಮೇಶ್ವರ-ಹರದಗಟ್ಟಿ, ಲಕ್ಷ್ಮೇಶ್ವರ-ಶಿಗ್ಲಿ-ದೊಡ್ಡೂರು ರಸ್ತೆಗಳು ಇದ್ದುದರಲ್ಲಿ ಸ್ವಲ್ಪ ಉತ್ತಮ ಸ್ಥಿತಿಯಲ್ಲಿವೆ.

ಇನ್ನುಳಿದಂತೆ ಗೋವನಾಳ-ಶಿಗ್ಲಿ ಐದು ಕಿ.ಮೀ., ಲಕ್ಷ್ಮೇಶ್ವರ-ದೊಡ್ಡೂರು-ಸೂರಣಗಿ-ಬಾಲೆಹೊಸೂರು 20 ಕಿ.ಮೀ., ಸೂರಣಗಿ-ನೆಲೂಗಲ್ಲ 15 ಕಿ.ಮೀ., ಲಕ್ಷ್ಮೇಶ್ವರ-ಮಾಗಡಿ 8 ಕಿ.ಮೀ., ಲಕ್ಷ್ಮೇಶ್ವರ-ಮಾಗಡಿ-ಯಳವತ್ತಿ-ಯತ್ನಳ್ಳಿ-ಮಾಡಳ್ಳಿ 15 ಕಿ.ಮೀ. ಲಕ್ಷ್ಮೇಶ್ವರ-ಯತ್ನಳ್ಳಿ 12 ಕಿ.ಮೀ. ಉದ್ದದ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದು ಹಾಳಾಗಿ ವರ್ಷಗಳೇ ಕಳೆದಿವೆ. ಅದರಲ್ಲೂ ಸೂರಣಗಿ-ಬಾಲೆಹೊಸೂರು ಮುಖ್ಯ ರಸ್ತೆ ಗುಂಡಿಗಳಿಂದಾಗಿ ಹಳ್ಳದಂತೆ ಕಾಣುತ್ತಿದೆ. ಇದೇಸ್ಥಿತಿ ಗೋವನಾಳ-ಶಿಗ್ಲಿ ರಸ್ತೆಯದ್ದಾಗಿದೆ. ಈ ರಸ್ತೆ ಹಾಳಾಗಿಯೇ ನಾಲ್ಕೈದು ವರ್ಷಗಳೇ ಕಳೆದಿವೆ.

ಇನ್ನು ಶಿಗ್ಲಿ-ಹೂವಿನಶಿಗ್ಲಿ 6 ಕಿ.ಮೀ., ಶಿಗ್ಲಿ-ನಾಯಿಕೆರೂರ-ಉಳ್ಳಟ್ಟಿ 5 ಕಿ.ಮೀ., ಮುನಿಯನ ತಾಂಡಾ- ಉಂಡೇನಹಳ್ಳಿ 6 ಕಿ.ಮೀ., ಪುಟಗಾಂವ್‍ಬಡ್ನಿ-ಸೂರಣಗಿ 8 ಕಿ.ಮೀ., ಅಕ್ಕಿಗುಂದ-ಲಕ್ಷ್ಮೇಶ್ವರ 8 ಕಿ.ಮೀ., ಗುಲಗಂಜಿಕೊಪ್ಪ- ಮುಕ್ತಿಮಂದಿರ 4 ಕಿ.ಮೀ. ರಸ್ತೆಗಳಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದು ಹಾಳಾಗಿವೆ.

ಜಿಲ್ಲಾ ಪಂಚಾಯಿತಿ ರಸ್ತೆಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಆದರೆ, ಸದ್ಯ ಇಲಾಖೆಯ ಲಕ್ಷ್ಮೇಶ್ವರ-ಮುಕ್ತಿಮಂದಿರ ರಸ್ತೆಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲ ರಸ್ತೆಗಳು ಪೂರ್ಣ ಪ್ರಮಾಣದಲ್ಲಿ ಹದಗೆಟ್ಟಿವೆ. ತಾಲ್ಲೂಕಿನಲ್ಲಿ ಶೇ 90ರಷ್ಟು ರಸ್ತೆಗಳು ಹದಗೆಟ್ಟು ದುರಸ್ತಿ ಅಥವಾ ಮರು ನಿರ್ಮಾಣಕ್ಕೆ ಕಾಯುತ್ತಿವೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನವಾಗಿ ಸಂಸದರಾಗಿ ಆಯ್ಕೆಯಾಗಿದ್ದು ಅವರಾದರೂ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೋಡುವರೇ ಎಂದು ಜನರು ಎದುರು ನೋಡುತ್ತಿದ್ದಾರೆ.

ಶಿಗ್ಲಿ–ಗೋವನಾಳ ರಸ್ತೆ ಹಾಳಾಗಿ ನಾಲ್ಕೈದು ವರ್ಷಗಳು ಕಳೆದಿವೆ. ಇನ್ನೂ ದುರಸ್ತಿ ಮಾಡಿಲ್ಲ. ಆದಷ್ಟು ಬೇಗನೇ ಈ ರಸ್ತೆಯನ್ನು ಪುನರ್ ನಿರ್ಮಿಸಬೇಕು

-ಸೋಮಣ್ಣ ಡಾಣಗಲ್ಲ ಶಿಗ್ಲಿ ಗ್ರಾಮದ ನಿವಾಸಿ

ಲಕ್ಷ್ಮೇಶ್ವರ ತಾಲ್ಲೂಕಿನ ಹಾಳಾದ ರಸ್ತೆಗಳ ಕುರಿತು ಸಂಬಂಧಿಸಿದ ಇಲಾಖೆ ಸಚಿವರ ಗಮನಕ್ಕೆ ತಂದಿದ್ದೇನೆ. ಆದಷ್ಟು ಬೇಗ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು

-ಡಾ.ಚಂದ್ರು ಲಮಾಣಿ ಶಾಸಕ

ಹದಗೆಟ್ಟ ರಸ್ತೆಗಳ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಅನುದಾನ ಬಂದ ತಕ್ಷಣ ರಸ್ತೆ ದುರಸ್ತಿ ಮಾಡಿಸಲಾಗುವುದು

-ಫಕ್ಕೀರೇಶ ತಿಮ್ಮಾಪುರ ಲೋಕೋಪಯೋಗಿ ಇಲಾಖೆ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT