ಸೋಮವಾರ, ಜೂನ್ 27, 2022
21 °C
ಜಿಲ್ಲೆಯಲ್ಲಿ ಜೂನ್ 3ರಿಂದ 7ರವರೆಗೆ ಸಂಪೂರ್ಣ ಲಾಕ್‌ಡೌನ್‌ ಮುಂದುವರಿಕೆ

ಗದಗ: ಇಂದು, ನಾಳೆ ದಿನಸಿ ಖರೀದಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಮೇ 27ರಿಂದ ಜೂನ್‌ 1ರವರೆಗೆ ವಿಧಿಸಿದ್ದ ಕಠಿಣ ಲಾಕ್‌ಡೌನ್‌ನಿಂದ ಉತ್ತಮ ಫಲಿತಾಂಶ ಸಿಕ್ಕಿದ್ದು, ಲಾಕ್‌ಡೌನ್‌ ಪೂರ್ವದಲ್ಲಿ ಶೇ 25ರಷ್ಟಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಈಗ ಶೇ 19ಕ್ಕೆ ಕುಸಿದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಲಾಕ್‌ಡೌನ್‌ ಸಮಯದಲ್ಲಿ ಬಡವರ್ಗದ ಜನತೆಗೆ ತೊಂದರೆಯಾಗಿದೆ ನಿಜ. ಆ ಬಗ್ಗೆ ನೋವಿದೆ. ಆದರೆ, ಕಠಿಣ ಲಾಕ್‌ಡೌನ್‌ನಿಂದ ಉತ್ತಮ ಫಲಿತಾಂಶ ಸಿಕ್ಕಿದೆ. ಇದರಿಂದಾಗಿ, ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖಗೊಂಡಿದ್ದು, ಜಿಮ್ಸ್‌ ಸೇರಿದಂತೆ ಎಲ್ಲ ಕೋವಿಡ್‌ ಆಸ್ಪತ್ರೆಗಳಲ್ಲಿ ಸಾಕಷ್ಟು ಆಮ್ಲಜನಕ ಸಹಿತ ಹಾಸಿಗೆಗಳು ಲಭ್ಯ ಇವೆ’ ಎಂದು ತಿಳಿಸಿದರು.

‘ಗದಗ ಜಿಲ್ಲೆಯಲ್ಲಿ 14,710 ಕೋವಿಶೀಲ್ಡ್, 4,540 ಕೋವ್ಯಾಕ್ಸಿನ್ ಲಸಿಕೆ ಲಭ್ಯ ಇದ್ದು, ಲಸಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ರಾಜ್ಯ ಸರ್ಕಾರ ಜಿಲ್ಲೆಗೆ 50 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಒದಗಿಸಿದೆ. ಜತೆಗೆ ದಾನಿಗಳು 100 ಕಾನ್ಸನ್‌ಟ್ರೇಟರ್‌ಗಳನ್ನು ನೀಡಿದ್ದಾರೆ’ ಎಂದು ತಿಳಿಸಿದರು.

‘ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ₹17 ಲಕ್ಷ ವೆಚ್ಚದಲ್ಲಿ 27 ಕಾನ್ಸನ್‌ಟ್ರೇಟರ್ ಖರೀದಿಸಲಾಗಿದೆ. 125 ಆಕ್ಸಿಮೀಟರ್ ಒದಗಿಸಲಾಗುತ್ತಿದೆ. ಇದರ ಜೊತೆಗೆ ಸಣ್ಣ ಕೈಗಾರಿಕಾ ವಲಯದಿಂದ 15 ಬೈ ಪ್ಯಾಕ್ ಯಂತ್ರಗಳನ್ನು ಒದಗಿಸಲಾಗಿದೆ. 
ಜಿಮ್ಸ್ ಆಸ್ಪತ್ರೆಯಲ್ಲಿ 250 ಹೊಸ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ತಮ್ಮ ಅನುದಾನದಲ್ಲಿ ₹12 ಲಕ್ಷ ಹಾಗೂ ಕರ್ನಾಟಕ ಮಿನರಲ್ ಕಾರ್ಪೋರೇಶನ್‌ನವರು ₹15 ಲಕ್ಷ ನೆರವು ನೀಡಿದ್ದಾರೆ. ಇದರ ಜತೆಗೆ 100 ಹಾಸಿಗೆ ಸಾಮರ್ಥ್ಯದ ಆಮ್ಲಜನಕ ಸಹಿತ ಹಾಸಿಗೆಯುಳ್ಳ ಆಸ್ಪತ್ರೆಯನ್ನು ಹೊಸದಾಗಿ ಸಜ್ಜುಗೊಳ್ಳಲಿದೆ’ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯ್ತಿ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್ ಎನ್., ಎಡಿಸಿ ಸತೀಶ್ ಕುಮಾರ್ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

ಕೃಷಿ ಪರಿಕರಗಳ ಖರೀದಿಗೆ ಹೆಚ್ಚಿನ ಸಮಯ

‘ಕಠಿಣ ನಿಯಮಗಳನ್ನು ಹೇರಿದ್ದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದು, ಇದೇ ನಿಯಮವನ್ನು ಜೂನ್ 7ರವರೆಗೆ ವಿಸ್ತರಿಸಲಾಗಿದೆ. ಆದರೆ, ಜೂನ್ 1 ಮತ್ತು 2ರಂದು ಮಾತ್ರ ದಿನಸಿ ಖರೀದಿ, ಮಾಂಸ ಮಾರಾಟಕ್ಕೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು. 

ಹಣ್ಣು, ತರಕಾರಿಗಳನ್ನು ತಳ್ಳುವ ಗಾಡಿ, ಟಂಟಂ ಗಾಡಿ, ಆಟೊಗಳಲ್ಲಿ ಬೀದಿ ಬೀದಿ ಸುತ್ತಿ ಮಾರಾಟ ಮಾಡುವ ಅವಕಾಶ ಈಗಿನಂತೆಯೇ ಮುಂದುವರಿಯಲಿದೆ. ಹಾಲು, ಮೊಸರು ಖರೀದಿಗೆ ಬೆಳಿಗ್ಗೆ 6ರಿಂದ 8ರವರೆಗೆ ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ಬೀಜ ಗೊಬ್ಬರ , ಕೀಟನಾಶಕಗಳು ಹಾಗೂ ಯಂತ್ರೋಪಕರಣ ಖರೀದಿಗಾಗಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ವಿಸ್ತರಿಸಲಾಗಿದೆ.

ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಕೋವಿಡ್ ಮಾರ್ಗಸೂಚಿಗಳ ಅನುಸಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ.

ಮದ್ಯದಂಗಡಿ, ಬಾರ್ ಅಂಡ್‌ ರೆಸ್ಟೊರೆಂಟ್‌ಗಳು, ನಗರ ಹಾಗೂ ಗ್ರಾಮೀಣ ಪ್ರದೇಶದ ಹೋಟೆಲ್‌ಗಳನ್ನು ತೆರೆಯಲು ಅವಕಾಶ ಇಲ್ಲ ಎಂದು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು