ಶುಕ್ರವಾರ, ಮಾರ್ಚ್ 24, 2023
30 °C
ಮಾದಿಗರ ಚೈತನ್ಯ ರಥಯಾತ್ರೆ ನಗರಕ್ಕೆ

ಗದಗ: ಮಾದಿಗರ ಶಕ್ತಿ ಪ್ರದರ್ಶನ ಮಾ.8ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ನ್ಯಾ. ಸದಾಶಿವ ಆಯೋಗದ ವರದಿಯನ್ನು ಯಥಾವತ್ ಜಾರಿಗೆ ಒತ್ತಾಯಿಸಿ ಆರಂಭವಾಗಿರುವ ಮಾದಿಗರ ಚೈತನ್ಯ ರಥಯಾತ್ರೆ ಶನಿವಾರ ಗದಗ ಪ್ರವೇಶಿಸಲಿದೆ’ ಎಂದು ಮಾದಿಗ ಸಮುದಾಯದ ಮುಖಂಡ ಯಲ್ಲಪ್ಪ ರಾಮಗಿರಿ ಹೇಳಿದರು.

‘ಶನಿವಾರ ಸಂಜೆ 6ಕ್ಕೆ ರಥವು ಬೆಟಗೇರಿ ಪ್ರವೇಶಿಸಲಿದ್ದು, ಇಲ್ಲಿನ ಬಸ್ ನಿಲ್ದಾಣದ ಬಳಿ ಸ್ವಾಗತಿಸಲಾಗುವುದು. ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ಮೂಲಕ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್‌.ಅಂಬೇಡ್ಕರ್ ಮೂರ್ತಿವರೆಗೆ ಕರೆತರಲಾಗುವುದು. ಅಲ್ಲಿಂದ ಗಾಂಧಿ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಸದಾಶಿವ ಆಯೋಗದ ವರದಿ ಜನಸಂಖ್ಯೆ ಆಧರಿಸಿ, ಮೀಸಲಾತಿ ನಿಗದಿಪಡಿಸಿದ್ದು ಅದನ್ನು ಯಥಾವತ್ ಆಗಿ ಜಾರಿ ಮಾಡುವುದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಆದರೆ, ಕೆಲವರು ಅನಗತ್ಯವಾಗಿ ವಿರೋಧಿಸುತ್ತಿದ್ದಾರೆ’ ಎಂದು ಹೇಳಿದರು.

‘ಹಿಂದಿನ ಸಿದ್ದರಾಮಯ್ಯ ಸರ್ಕಾರ ಸದಾಶಿವ ಆಯೋಗ ವರದಿ ಜಾರಿ ಮಾಡದ ಪರಿಣಾಮ ನಂತರ ಬಂದ ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷ ಸೋಲು ಅನುಭವಿಸಿತು. ಆ ವೇಳೆ ವಿರೋಧ ಪಕ್ಷದ ನಾಯಕರಾಗಿದ್ದ, ಇಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ವರದಿ ಜಾರಿ ಮಾಡುವ ಭರವಸೆ ನೀಡಿದ್ದರು. ಆದರೆ, ಅವರ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತ ಬಂದರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ಅವರು ಕಿಡಿಕಾರಿದರು.

ಮುಖಂಡ ಉಡಚಪ್ಪ ಹಳ್ಳಿಕೇರಿ ಮಾತನಾಡಿ, ‘ವರದಿ ಯಥಾವತ್ ಜಾರಿಗೆ ಒತ್ತಾಯಿಸಿ ಹಾಗೂ ಹೋರಾಟದ ಅಂತಿಮ ಭಾಗವಾಗಿ ಮಾರ್ಚ್‌ 8ರಂದು ಬೆಂಗಳೂರಿನಲ್ಲಿ ಮಾದಿಗರ ವಿರಾಟ್ ಶಕ್ತಿಪ್ರದರ್ಶನ ನಡೆಯಲಿದೆ. ಪ್ರಸ್ತುತ ಬಿಜೆಪಿ ಸರ್ಕಾರವೂ ಸದಾಶಿವ ಆಯೋಗವು ನೀಡಿದ ವರದಿಯನ್ನು ಯಥಾವತ್ ಆಗಿ ಜಾರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪರ್ಯಾಯ ರಾಜಕೀಯ ಶಕ್ತಿ ಹುಟ್ಟಿಕೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು.

ವಿಜಯ ಕಲ್ಮನಿ, ಗಣೇಶ ಹುಬ್ಬಳ್ಳಿ, ಹೇಮೇಶ ಯಟ್ಟಿ, ಚಂದ್ರಶೇಖರ ಹರಿಜನ, ವಿನಾಯಕ ಬಳ್ಳಾರಿ, ನಿಂಗಪ್ಪ ದೊಡ್ಡಮನಿ, ರಾಘವೇಂದ್ರ ಪರಾಪೂರ, ರಮೇಶ ಹರಿವಾಣ, ನಾಗೇಶ ಬಳ್ಳಾರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು