ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ ಕೆರೆಯಲ್ಲಿ ಚೀನಾ‌ ಚೆಲುವೆಯರು!

ಹಿಮಾಲಯ ದಾಟಿ ಬಂದ ವಲಸೆ ಹಕ್ಕಿಗಳಿಗೆ ಇಲ್ಲಿನ ಶೇಂಗಾ ಅಚ್ಚುಮೆಚ್ಚು
Last Updated 7 ಡಿಸೆಂಬರ್ 2020, 19:35 IST
ಅಕ್ಷರ ಗಾತ್ರ
ADVERTISEMENT
""

ಗದಗ: ಹಿಮಾಲಯ ಪರ್ವತ ಶ್ರೇಣಿಗಳನ್ನು ದಾಟಿ ಬಂದಿರುವ ವಿದೇಶಿ ಹಕ್ಕಿಗಳು ಈಗ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆಯಲ್ಲಿ ಬೀಡು ಬಿಟ್ಟಿದ್ದು, ಅವುಗಳ ಚಿನ್ನಾಟ ಪಕ್ಷಿಪ್ರಿಯರಿಗೆ ಮುದ ನೀಡುತ್ತಿವೆ.

ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಮಂಗೋಲಿಯಾ, ಚೀನಾ, ಟಿಬೆಟ್‌, ಲಡಾಖ್‌, ಸೈಬೀರಿಯಾ ಮೊದಲಾದ ದೇಶಗಳಿಂದ ವಲಸೆ ಹೊರಡುವ ವಿವಿಧ ಜಾತಿಯ ಪಕ್ಷಿಗಳು ಮಾಗಡಿ ಕೆರೆಗೆ ಬಂದಿಳಿಯುತ್ತವೆ. ಸಮಶೀತೋಷ್ಣ ವಾತಾವರಣ, ಸುರಕ್ಷತೆ ಹಾಗೂ ಆಹಾರ ಲಭ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವು ಮಾಗಡಿ ಕೆರೆಗೆ ಬಂದಿಳಿಯುತ್ತವೆ ಎಂಬುದು ಪಕ್ಷಿತಜ್ಞರ ವಿಶ್ಲೇಷಣೆ.

‘ನವೆಂಬರ್‌ ಮೊದಲ ವಾರದಿಂದ ಮಾರ್ಚ್‌ವರೆಗೆ ಮಾಗಡಿ ಕೆರೆಯಲ್ಲಿ ವಾಸವಿರುತ್ತವೆ. ಈ ಬಾರಿ ಪಟ್ಟೆತಲೆ ಹೆಬ್ಬಾತುಗಳು (ಬಾರ್‌ ಹೆಡ್ಡೆಡ್‌ ಗೂಝ್‌) ಹೆಚ್ಚಿನ ಸಂಖ್ಯೆಯಲ್ಲಿ ಬಂದಿಳಿದಿವೆ. ಡಿಸೆಂಬರ್‌ ಅಂತ್ಯದ ವೇಳೆಗೆ ನಾರ್ಥರ್ನ್‌ ಶೊವೆಲರ್‌ ಸೇರಿದಂತೆ ಇನ್ನಿತರ ಜಾತಿಯ ವಿದೇಶಿ ಪಕ್ಷಿಗಳು ಬಂದಿಳಿಯುವ ನಿರೀಕ್ಷೆ ಇದೆ. ಅಲ್ಲಿನ ಹೆಪ್ಪುಗಟ್ಟುವಂತಹ ಚಳಿ ತಾಳಲಾರದೆ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ ಎನ್ನುತ್ತಾರೆ ವಾಚರ್‌ ಸೋಮಪ್ಪ ಶಿವಪ್ಪ ಪಶುಪತಿಹಾಳ.

‘ಪಟ್ಟೆತಲೆ ಹೆಬ್ಬಾತುಗಳ ವಲಸೆ ಮಾರ್ಗ ಕಂಡುಹಿಡಿಯಲು ಪಕ್ಷಿ ವಿಜ್ಞಾನಿಗಳು ಹಕ್ಕಿಗಳ ಕೊರಳಿಗೆ ಟ್ಯಾಗ್‌ ಅಳವಡಿಸಿರುತ್ತಾರೆ. ಮಾಗಡಿ ಕೆರೆಯಲ್ಲಿ ಈವರೆಗೆ ಕತ್ತಿನಲ್ಲಿ ಟ್ಯಾಗ್‌ ಇರುವ ಮೂರು ಮಂಗೋಲಿಯನ್‌ ಹೆಬ್ಬಾತುಗಳು ಕಂಡು ಬಂದಿವೆ’ ಎಂದು ಮಾಹಿತಿ ನೀಡಿದರು.

ಮಾಗಡಿ ಕೆರೆಯಲ್ಲಿ ಹೆಬ್ಬಾತುಗಳ ಹಾರಾಟದ ಸೊಬಗು

ಪ್ರತಿದಿನ ಬೆಳಿಗ್ಗೆ 5ಕ್ಕೆ ಆಹಾರ ಹುಡುಕುತ್ತ ಸುತ್ತಮುತ್ತಲಿನ ಪ್ರದೇಶಗಳಿಗೆ ಹಿಂಡು ಹಿಂಡಾಗಿ ಹಾರುವ ಹಕ್ಕಿಗಳು ಶೇಂಗಾ, ಕಡಲೆಕಾಳು, ಗೋಧಿ, ಜೋಳ ಹಾಗೂ ಕಡಲೆ ಸಸಿ ಚಿಗುರು ಸವಿದು 10 ಗಂಟೆಯ ಸುಮಾರಿಗೆ ವಾಪಸ್‌ ಬರುತ್ತವೆ. ಸಂಜೆ 4ರವರೆಗೆ ವಿಶ್ರಾಂತಿ ಪಡೆಯುವ ಪಕ್ಷಿಗಳು ಮತ್ತೆ ಆಹಾರ ಹುಡುಕಿಕೊಂಡು ಹೋಗುತ್ತವೆ. ರಾತ್ರಿ 8ಕ್ಕೆ ಕೆರೆಗೆ ವಾಪಸಾಗುತ್ತವೆ.

ವಿಶ್ರಾಂತಿ ಅವಧಿಯಲ್ಲಿ 134.15 ಎಕರೆಯಲ್ಲಿ ವ್ಯಾಪಿಸಿರುವ ಕೆರೆಯ ನೀರಿನ ತುಂಬೆಲ್ಲ ವಲಸೆ ಪಕ್ಷಿಗಳು ಒಟ್ಟಾಗಿ ಈಜುವ ದೃಶ್ಯ ಮನೋಹರವಾಗಿರುತ್ತದೆ. ನೀರಿನ ಜುಳುಜುಳು ಶಬ್ದ, ಗಾಳಿಯ ಮಾರ್ದವತೆಗೆ ಹಕ್ಕಿಗಳ ಧ್ವನಿಯ ಇಂಪು ಸೇರಿಕೊಂಡು ಅಲ್ಲೊಂದು ಹೊಸ ಲೋಕ ಸೃಷ್ಟಿಯಾಗುತ್ತದೆ.

***

ಈಗ ಬಂದಿರುವ ಪಟ್ಟೆತಲೆ ಹೆಬ್ಬಾತುಗಳ ಸಂಖ್ಯೆಯೇ 10 ಸಾವಿರದಿಂದ 12 ಸಾವಿರದವರೆಗೆ ಇದೆ. ಇಲ್ಲಿ ಪಕ್ಷಿಗಳ ಸಂತಾನೋತ್ಪತ್ತಿ ಕ್ರಿಯೆ ನಡೆಯುವುದಿಲ್ಲ.

-ಸೋಮಪ್ಪ ಶಿವಪ್ಪ ಪಶುಪತಿಹಾಳ, ವಾಚರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT