ಮಂಗಳವಾರ, ಸೆಪ್ಟೆಂಬರ್ 21, 2021
26 °C
ರಂಜಾನ್‌ ಮಾಸ ಮಗಿದ ಬೆನ್ನಲ್ಲೇ ಹಣ್ಣುಗಳಿಗೆ ಬೆಲೆ ಇಳಿಕೆ

ಮಾವು ಸಿಹಿ; ಟೊಮೊಟೊ ಮತ್ತಷ್ಟು ಹುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಮಾವು ಪ್ರಿಯರಿಗೆ ಸಿಹಿ ಸುದ್ದಿ. ಕಳೆದ ತಿಂಗಳಿಗೆ ಹೋಲಿಸಿದರೆ ಮಾವಿನ ಧಾರಣೆ ಅರ್ಧದಷ್ಟು ಇಳಿಕೆಯಾಗಿದೆ. ಬೆಲೆ ಇಳಿದ ನಂತರ ಮಾವು ಸವಿಯಬೇಕು ಎಂದು ಕಾಯುತ್ತಿದ್ದ ಗ್ರಾಹಕರಿಗೆ ಈಗ ಸಕಾಲ. ಮಾರುಕಟ್ಟೆಗೆ ಮಾವಿನ ಆವಕವೂ ಗಣನೀಯವಾಗಿ ಹೆಚ್ಚಿದೆ.

ಅಪೂಸ್‌, ಕಲ್ಮಿ, ಅಲ್ಫಾನ್ಸಾ, ಮಲಗೋಬಾ ತಳಿಯ ಮಾವಿನ ಹಣ್ಣುಗಳು ಕಳೆದ ಒಂದೂವರೆ ತಿಂಗಳಿಂದ ನಗರದ ಮಾರುಕಟ್ಟೆಗೆ ಆವಕವಾಗುತ್ತಿದೆ. ಮೇ ತಿಂಗಳ ಅಂತ್ಯದವರೆಗೆ ಬೆಲೆಯೂ ಗ್ರಾಹಕರ ಕೈಗೆ ಎಟುಕುವಂತೆ ಇರಲಿಲ್ಲ. ಈ ಭಾಗದಲ್ಲಿ ಬಹು ಬೇಡಿಕೆ ಇರುವ ಅಪೂಸ್‌ ತಳಿಯ ಮಾವಿನ ಹಣ್ಣಿಗೆ ಎರಡು ವಾರದ ಹಿಂದಿನವರೆಗೆ 1 ಡಜನ್‌ಗೆ ₹400ರಿಂದ ₹500 ಇತ್ತು. ಸದ್ಯ 1 ಡಜನ್‌ ಹಣ್ಣಿಗೆ ₹200 ಇದೆ. ಮಲ್ಗೂಬಾ ₹150 ಹಾಗೂ ಕಲ್ಮಿ ₹100ಗೆ ಬಿಕರಿಯಾಗುತ್ತಿವೆ.

ಬೆಳಗಾವಿ ಪ್ರದೇಶದಲ್ಲಿ ಬೆಳೆಯುವ ಸಿಂಧೂರ ಮಾವಿನ ಹಣ್ಣು, ಹಾಗೂ ಜಿಲ್ಲೆಯದ್ದೇ ಆದ ಬದಾಮಿ ತಳಿಯ ಡಜನ್‌ ಹಣ್ಣಿಗೆ ₹200 ದರ ಇದೆ. ನಗರದಲ್ಲಿ ಮಾವಿನ ಹಣ್ಣುಗಳನ್ನು ಕೆ.ಜಿ ಲೆಕ್ಕಕ್ಕಿಂತ ಹೆಚ್ಚಾಗ ಡಜನ್‌ ಲೆಕ್ಕದಲ್ಲಿ ಖರೀದಿಸುತ್ತಾರೆ.

ಟೊಮೊಟೊ ತುಟ್ಟಿ: ವಾರದ ಹಿಂದೆ ಕೆ.ಜಿಗೆ ₹50 ದಾಟಿದ್ದ ಟೊಮೊಟೊ ಸದ್ಯ ₹60ಕ್ಕೆ ಏರಿಕೆಯಾಗಿದೆ. ಈ ಬಾರಿ ಗ್ರಾಹಕರಿಗೆ ಟೊಟೊಟೊ ಬೆಲೆ ಏರಿಕೆಯ ಬಿಸಿ ಜೋರಾಗಿಯೇ ತಟ್ಟುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೊಟೊಗೆ ಭಾರಿ ಬೇಡಿಕೆ ಇದೆ. ಇದರ ಜತೆಗೆ ಆವಕವೂ ತಗ್ಗಿರುವುದರಿಂದ ಸ್ಥಳೀಯ ವ್ಯಾಪಾರಿಗಳು ಬೆಲೆ ಏರಿಕೆ ಮಾಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಟೊಮೊಟೊ ಧಾರಣೆ ಆರು ಪಟ್ಟು ಹೆಚ್ಚಿದೆ.

ಮಾರ್ಚ್‌ ಆರಂಭದಲ್ಲಿ 1 ಕೆ.ಜಿ ಟೊಮೊಟೊಗೆ ಸರಾಸರಿ ₹10 ಧಾರಣೆ ಇತ್ತು. ಮಾರ್ಚ್‌ ಅಂತ್ಯಕ್ಕೆ ಇದು ₹20ಕ್ಕೆ ಮತ್ತು ಏಪ್ರಿಲ್‌ ಮೂರನೆಯ ವಾರದಲ್ಲಿ ₹30ಕ್ಕೆ ಹಾಗೂ ಮೇ ತಿಂಗಳಲ್ಲಿ  ₹50ಕ್ಕೆ ಏರಿಕೆಯಾಯಿತು. ಈಗ ₹60ಕ್ಕೆ ಏರಿದೆ. ಸಗಟು ವ್ಯಾಪಾರಿಗಳು ಉತ್ತಮ ಗುಣಮಟ್ಟದ ಟೊಮೊಟೊವನ್ನು ₹60ಕ್ಕೆ ಮತ್ತು ಚಿಲ್ಲರೆ ವ್ಯಾಪಾರಿಗಳು ₹55ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಕೋಲಾರ, ಅರಸೀಕೆರೆ, ಕೊಪ್ಪಳದಿಂದ ಗದಗ ಮಾರುಕಟ್ಟೆಗೆ ಆವಕ ಕಡಿಮೆಯಾಗಿದೆ. ಸ್ಥಳೀಯವಾಗಿ ಮುಂಡರಗಿ, ರೋಣ, ಲಕ್ಷ್ಮೇಶ್ವರದಿಂದ ಕಡಿಮೆ ಪ್ರಮಾಣದಲ್ಲಿ ಟೊಮೊಟೊ ಆವಕವಾಗುತ್ತಿದೆ. ಹೀಗಾಗಿ ಟೊಮೊಟೊ ಬೆಲೆಯಲ್ಲಿ ಹೆಚ್ಚಳವಾಗಿದೆ.

*
ಕಳೆದ ಎರಡು ವಾರಗಳಿಂದ ನಗರದ ಮಾರುಕಟ್ಟೆಗೆ ಮಾವು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆವಾಕವಾಗುತ್ತಿದೆ. ಬೆಲೆ ಅರ್ಧದಷ್ಟು ಇಳಿಕೆಯಾಗಿದೆ.
–ಇಮಾಮಸಾಬ್ ಮುಲ್ಲಾ, ಹಣ್ಣಿನ ವ್ಯಾಪಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು