ಸಂಗೀತ ಸೇವೆಗೆ ಜೀವನ ಮುಡಿಪು

ನರೇಗಲ್: ಹೋಬಳಿಯ ಅಬ್ಬಿಗೇರಿ ಗ್ರಾಮವು ಕವಿ, ಸಾಹಿತಿಗಳ ತವರೂರಾಗಿದೆ. ಇದೇ ಗ್ರಾಮದ ಪಾಲಾಕ್ಷಯ್ಯ ಗುರುಪಾದಯ್ಯ ಅರಳಲೆಮಠ ಅವರು 60 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತವಾಗಿ ಸಂಗೀತ ಪಾಠ ಮಾಡುತ್ತಾ ಬಂದಿದ್ದಾರೆ.
ಇವರ ಬಳಿ ಸಂಗೀತ ಕಲಿತವರು ರಂಗಾಯಣದ ಸಂಗೀತ ನಿರ್ದೇಶಕರಾಗಿದ್ದಾರೆ, ಪುರಾಣಿಕರಾಗಿದ್ದಾರೆ, ಸಂಗೀತ ಶಿಕ್ಷಕರಾಗಿದ್ದಾರೆ, ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿ ಜೀವನ ಕಟ್ಟಿಕೊಂಡಿದ್ದಾರೆ.
ಪಾಲಾಕ್ಷಯ್ಯ ಚಿಕ್ಕ ವಯಸ್ಸಿನಲ್ಲಿದ್ದಾಗ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಮಠದ ಬೆತ್ತದ ಶ್ರೀಗಳ ಮುಂದೆ ಹಾಡು ಹಾಡುತ್ತಿದ್ದರು. ಆಗ ಶ್ರೀಗಳು ಗದುಗಿನ ಆಶ್ರಮಕ್ಕೆ ಹೋಗಿ ಸಂಗೀತ ಅಭ್ಯಾಸ ಮಾಡುವಂತೆ ಸೂಚಿಸಿ ಹಸ್ತಾಕ್ಷರ ಬರೆದು ವೀರೇಶ್ವರ ಪುಣ್ಯಾಶ್ರಮಕ್ಕೆ ಕಳುಹಿಸುತ್ತಾರೆ. ನಂತರ ಪುಟ್ಟರಾಜ ಕವಿ ಗವಾಯಿಗಳ ಮಾರ್ಗದರ್ಶನದಲ್ಲಿ ಸಂಗೀತದಲ್ಲಿ ಪೂರ್ವಭಾಗದ ವಿಶಾರದ ಮುಗಿಸುತ್ತಾರೆ.
ಸಂಗೀತ ಕಲಿತ ನಂತರ ಪುಟ್ಟರಾಜ ಗವಾಯಿಗಳು, ‘ನಿನಗೆ ಜಮೀನು ಇದೆ. ಜೀವನ ನಡೆಸಲು ಯಾವುದೇ ತೊಂದರೆ ಇಲ್ಲ. ಅದಕ್ಕಾಗಿ ಸಂಗೀತವನ್ನು ದುಡ್ಡಿಗೆ ಮಾರಿಕೊಳ್ಳಬೇಡ. ಹಳ್ಳಿ ಮಕ್ಕಳಿಗೆ ಉಚಿತವಾಗಿ ಕಲಿಸು’ ಎಂದು ಆಶೀರ್ವದಿಸುತ್ತಾರೆ. ಅಂದು ಅಬ್ಬಿಗೇರಿ ಗ್ರಾಮದ ಪುಟ್ಟ ಮನೆಯಲ್ಲಿ ಆರಂಭಿಸಿದ ಉಚಿತ ಸಂಗೀತ ಪಾಠ ಶಾಲೆ ಇಂದಿಗೂ ನಡೆಯುತ್ತಿದೆ. ತಮ್ಮ 86ನೇ ವಯಸ್ಸಿನಲ್ಲೂ ಪ್ರತಿದಿನ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಗೀತ ಕಲಿಸುತ್ತಿದ್ದಾರೆ.
ಬಿಡುವಿನಲ್ಲಿ ಗ್ರಾಮದ ಯುವಕರಿಗೆ ಭಜನೆ ಕಲಿಸುತ್ತಾರೆ, ಶಾಲಾ ಮಕ್ಕಳಿಗೆ ಸಂಗೀತ, ವಾದ್ಯ ನುಡಿಸುವುದನ್ನು ಕಲಿಸುವಲ್ಲಿ ಮುಂದಾಗುತ್ತಾರೆ. 1964ರಲ್ಲಿ ಶಿಕ್ಷಕ ಬಸವರಾಜ ಅಮರಗೋಳ ಅವರ ಜೊತೆಗೆ ಗದುಗಿನ ಪುಣ್ಯಾಶ್ರಮ ವತಿಯಿಂದ ಮೈಸೂರಿನ ರಾಜರ ಮುಂದೆ ಸಂಗೀತ ಪ್ರಸ್ತುತ ಪಡಿಸಿ ಮೆಚ್ಚಿಗೆ ಪಡೆದಿದ್ದಾರೆ.
ಅಖಿಲ ಭಾರತ ಅನುಭವ ಮಂಟಪದಿಂದ ಪುರಾಣ ಪ್ರವಚನ ಪ್ರವೀಣ, ಹುಬ್ಬಳ್ಳಿಯ ಉಣಕಲ್ ಮಠದಿಂದ ಸಂಗೀತ ನಾಟ್ಯ ಕಲಾರತ್ನ, ಬೆಂಗಳೂರಿನ ನಾಟ್ಯ ಸಂಘದಿಂದ ಸಂಗೀತ ಶಿಖಾಮಣಿ, ಗದಗ ವೀರೇಶ್ವರ ಪುಣ್ಯಾಶ್ರಮದಿಂದ ಹಾನಗಲ್ ಕುಮಾರ ಶ್ರೀ, ರಾಜೂರ ಗ್ರಾಮದ ವತಿಯಿಂದ ಪುರಾಣ ಪಂಡಿತ, ಅಬ್ಬಿಗೇರಿ ಗ್ರಾಮದಿಂದ ನಾಟ್ಯಕಲಾ ಪ್ರವೀಣ ಸೇರದಿಂತೆ ಹಲವು ಪ್ರಶಸ್ತಿ, ಸನ್ಮಾನಗಳು ಇವರ ಸಂಗೀತ ಹಾಗೂ ಕಲಾಸೇವೆಗೆ ಒದಗಿ ಬಂದಿವೆ.
‘ಸಂಗೀತ ಎನ್ನುವುದು ಮೋಜಿನ ಅನುಕರಣೆಯಲ್ಲ. ಪ್ರಕೃತಿಯ ಪ್ರತಿ ಶಬ್ದದಲ್ಲೂ ನಾದವಿದೆ. ಅದನ್ನು ಮನಃಪೂರ್ವಕವಾಗಿ ಅನುಭವಿಸುವ ಮನಸ್ಸು ಇರಬೇಕು. ಆಸಕ್ತ ಮಕ್ಕಳಿಗೆ ಸಂಗೀತ ಕಲಿಸಿದರೆ ಶೈಕ್ಷಣಿಕ ಭವಿಷ್ಯಕ್ಕೆ ಉತ್ತಮ ರೀತಿಯಲ್ಲಿ ನೆರವು ನೀಡುತ್ತದೆ’ ಎನ್ನುತ್ತಾರೆ ಪಾಲಾಕ್ಷಯ್ಯ.
ಜೀವನಪಾಠ ಹೇಳಿಕೊಡುವ ಗುರು
‘ಗುರು ಪಾಲಾಕ್ಷಯ್ಯ ಅವರು ಸಂಗೀತ ಹೇಳಿಕೊಡುವುದರ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುತ್ತಾರೆ. ಬದುಕಿನ ಬಗ್ಗೆ ಅರಿವು ಮೂಡಿಸುತ್ತಾರೆ. ತಪ್ಪು ಮಾಡಿದರೆ ಬೈಯ್ದು ಬುದ್ಧಿ ಹೇಳಿ ತಿದ್ದುತ್ತಾರೆ. ಹಾಗಾಗಿ ನಾವು ಸಂಗೀತದ ಜೊತೆಗೆ ಜೀವನದ ನಡೆನುಡಿ ಬಗ್ಗೆಯೂ ಕಲಿತಿದ್ದೇವೆ’ ಎಂದು ಶಿಷ್ಯಂದಿರಾದ ರಾಘು ಕಮ್ಮಾರ, ಬಸವರಾಜ ಕುರಹಟ್ಟಿ, ಬಸಪ್ಪ ಹೂಗಾರ, ಗೀತಾ ಬೋಪಳಾಪುರ ಹೇಳಿದರು.
ಬದುಕಿನ ಕೊನೆವೆರೆಗೂ ಸಂಗೀತ ಸರಸ್ವತಿಯ ಆರಾಧನೆ ಹಾಗೂ ಉಚಿತ ಪಾಠ ಶಾಲೆ ನಿರಂತರವಾಗಿ ಮನೆಯಲ್ಲಿ ನಡೆಯುತ್ತದೆ.
ಪಾಲಕ್ಷಯ್ಯ ಅರಳಲೆಮಠ, ಅಬ್ಬಿಗೇರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.