ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ: ಬಿಡಾಡಿ ದನಗಳನ್ನು ಹಿಡಿಯೋದ್ಯಾವಾಗ?

ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆ; ಕ್ರಮಕ್ಕೆ ಆಗ್ರಹ
Published 5 ಆಗಸ್ಟ್ 2024, 5:07 IST
Last Updated 5 ಆಗಸ್ಟ್ 2024, 5:07 IST
ಅಕ್ಷರ ಗಾತ್ರ

ಗದಗ: ಪ್ರಮುಖ ಬೀದಿಗಳು ಹಾಗೂ ವೃತ್ತಗಳಲ್ಲಿ ಬಿಡಾಡಿ ದನಗಳು ಮಲಗಿರುವುದು, ಪರಸ್ಪರ ಕಾದಾಡುವುದು ಸಾಮಾನ್ಯವಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವುದರ ಜತೆಗೆ ಸಾರ್ವಜನಿಕರು, ಬೀದಿಬದಿ ವ್ಯಾಪಾರಿಗಳಿಗೆ ಸಮಸ್ಯೆ ಎದುರಾಗಿದೆ. ಅವಳಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಸ್ಥಳಾಂತರಕ್ಕೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಒತ್ತಾಯಿಸಿದ್ದಾರೆ. ಬೆಟಗೇರಿಯಲ್ಲಿ ಬಿಡಾಡಿ ದನ ತಿವಿದು ವೃದ್ಧರೊಬ್ಬರು ಮೃತಪಟ್ಟ ನಂತರ ಸಾರ್ವಜನಿಕರ ಒತ್ತಾಯ ಮತ್ತಷ್ಟು ಹೆಚ್ಚಾಗಿದೆ.

ನಗರದ ಪ್ರಮುಖ ರಸ್ತೆಯಲ್ಲಿ ಗುಂಪು ಗುಂಪಾಗಿ ನಿಲ್ಲುವ ಬಿಡಾಡಿ ದನಗಳು ವಾಹನಗಳ ಸಂಚಾರಕ್ಕೂ ಅಡಚಣೆ ಉಂಟು ಮಾಡುತ್ತಿವೆ. ಬೆಟಗೇರಿ ಭಾಗದಲ್ಲಿರುವ ಲೊಯೊಲಾ ಶಾಲೆ, ಜರ್ಮನ್‌ ಆಸ್ಪತ್ರೆ, ಹೊಸ ಬನಶಂಕರಿ ಗುಡಿ, ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆ ಎನ್ನದೇ ಬಿಡಾಡಿ ದನಗಳು ಎಲ್ಲ ಸಮಯದಲ್ಲೂ ರಸ್ತೆಗಳ ಮಧ್ಯೆ ಬಂದು ಕೂರುತ್ತವೆ. ಇದರಿಂದಾಗಿ ಬಸ್ಸು, ಕಾರು, ಆಟೊ ಸೇರಿದಂತೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಮಕ್ಕಳು ಶಾಲೆಗೆ ಹೋಗಿ ಬರುವ ಸಮಯವಾದ ಬೆಳಿಗ್ಗೆ ಮತ್ತು ಸಂಜೆ ಇಂತಹ ಕಿರಿಕಿರಿ ಜಾಸ್ತಿ ಇರುತ್ತದೆ.

ಬಿಡಾಡಿ ದನಗಳಿಂದ ಪ್ರಾಣಕ್ಕೆ ಸಂಚಕಾರ: ಬಿಡಾಡಿ ದನಗಳಿಂದ ವಾಹನ ಸಂಚಾರ ಸಮಸ್ಯೆ ಜತೆಗೆ ಜನರ ಪ್ರಾಣಕ್ಕೂ ಸಂಚಕಾರ ಬಂದೊದಗಿದೆ.

ಜುಲೈ 31ರಂದು ಮಗಳ ಮನೆಗೆಂದು ಲಕ್ಷ್ಮೇಶ್ವರ ಪಟ್ಟಣದಿಂದ ಬೆಟಗೇರಿಗೆ ಬಂದಿದ್ದ ವೃದ್ಧರೊಬ್ಬರಿಗೆ ಬಿಡಾಡಿ ದನ ತಿವಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ಅದೇರೀತಿ ಇನ್ನೊಂದು ಘಟನೆಯಲ್ಲಿ, ರಸ್ತೆ ಬದಿಯಲ್ಲಿ ಗುದ್ದಾಡುತ್ತಿದ್ದ ದನಗಳ ಪೈಕಿ ಒಂದು ದನ ಏಕಾಏಕಿ ರಸ್ತೆಗೆ ನುಗ್ಗಿ ತನ್ನ ಕೊಂಬಿನಿಂದ ಬೈಕ್‌ ಅನ್ನೇ ಎತ್ತಿ ಎಸೆದಿತ್ತು. ಬೈಕ್‌ ಚಲಾಯಿಸುತ್ತಿದ್ದ ಮಹಿಳೆಗೆ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದರು.

ಇಂತಹ ಹತ್ತಾರು ಘಟನೆಗಳು ನಗರದ ವಿವಿಧೆಡೆ ನಡೆದಿವೆ. ಇದೇ ಕಾರಣಕ್ಕೆ ಸಾರ್ವಜನಿಕರು ಬಿಡಾಡಿ ದನಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸಾಕಷ್ಟು ಬಾರಿ ಸ್ಥಳೀಯ ಆಡಳಿತಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೂ, ನಗರಸಭೆ ಅಧಿಕಾರಿಗಳು ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮವಹಿಸಲಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಲೀಕರಿಗೆ ಸೂಚನೆ:

ಬಿಡಾಡಿ ದನ ತಿವಿದು ವೃದ್ಧ ಮೃತಪಟ್ಟ ಬಳಿಕ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಅವಳಿ ನಗರದಲ್ಲಿ ಅಡ್ಡಾಡುವ ಸಾಕಷ್ಟು ದನಗಳಿಗೆ ಮಾಲೀಕರು ಇದ್ದಾರೆ. ಆದರೆ, ಅವರು ತಮ್ಮ ಜಾನುವಾರುಗಳನ್ನು ಮನೆಯಲ್ಲಿ ಕಟ್ಟಿಕೊಂಡು ಸಾಕುವ ಬದಲು ಬೀದಿಗೆ ಬಿಟ್ಟಿದ್ದಾರೆ. ದನಗಳ ಮಾಲೀಕರು ಆಗಸ್ಟ್‌ 5ರ ಒಳಗಾಗಿ ತಮ್ಮ ದನ ಕರುಗಳನ್ನು ಹಿಡಿದು, ಕಟ್ಟಿಕೊಳ್ಳುವಂತೆ ಮಾಲೀಕರಿಗೆ ಗಡುವು ನೀಡಿದ್ದಾರೆ. ಅದಾದ ನಂತರ, ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ಸ್ಥಳಾಂತರಿಸುವುದಾಗಿ ತಿಳಿಸಿದ್ದಾರೆ.

‘ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ನಗರಸಭೆ ಕ್ರಮವಹಿಸಿದ್ದು, ಕಳೆದ ಐದು ದಿನಗಳಿಂದ ಪ್ರತಿ ಓಣಿಯಲ್ಲೂ ಜನ ಜಾಗೃತಿ ಮೂಡಿಸಲಾಗುತ್ತಿದೆ. ದನಗಳ ಮಾಲೀಕರು ತಮ್ಮ ದನಕರುಗಳನ್ನು ಮನೆಯಲ್ಲೇ ಕಟ್ಟಿಕೊಳ್ಳುವಂತೆ ಅರಿವು ಮೂಡಿಸಲಾಗಿದೆ. ಆದರೆ, ನಮ್ಮ ಈ ಪ್ರಯತ್ನಕ್ಕೆ ಹೆಚ್ಚಿನ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ನಗರಸಭೆ ಅಧಿಕಾರಿ ಮಕಾಂದಾರ.

‘ಆ.6ರಿಂದ ಕಾರ್ಯಾಚರಣೆಗೆ ತಯಾರಿ ನಡೆಸಲಾಗುವುದು. ಬಿಡಾಡಿ ದನಗಳನ್ನು ಹಿಡಿಯಲು ಟೆಂಡರ್‌ ಅಥವಾ ಏಜೆನ್ಸಿಯವರಿಗೆ ನೀಡುವ ಬಗ್ಗೆ ಸದ್ಯದಲ್ಲೇ ತೀರ್ಮಾನ ಆಗಲಿದೆ’ ಎಂದು ತಿಳಿಸಿದರು.

ಬಿಡಾಡಿ ದನಗಳು ಮನೆಯಲ್ಲಿ ಮೇವು ತಿನ್ನುವುದಿಲ್ಲ: ‘ನಮ್ಮವು ಮೂರು ದನಗಳು ಇವೆ. ಮೊದಲಿನಿಂದಲೂ ಅವನ್ನು ಹೊರಗೆ ಬಿಡಲಾಗಿದೆ. ಅವು ಹೊರಗಿನ ಮೇವು, ತಿನಿಸಿಗೆ ಹೊಂದಿಕೊಂಡಿವೆ. ಮನೆಯಲ್ಲಿ ಹಾಕಿದ ಹುಲ್ಲು ತಿನ್ನುವುದಿಲ್ಲ. ಈ ಕಾರಣಕ್ಕೆ ಅವುಗಳನ್ನು ಮನೆಯಲ್ಲಿ ಕಟ್ಟಿ ಸಾಕಲು ಸಾಧ್ಯವಾಗುವುದಿಲ್ಲ. ನಗರಸಭೆಯವರು ಹಿಡಿದುಕೊಂಡು ಹೋದರೆ ಮರಳಿ ಬಿಡಿಸಿಕೊಂಡು ಬರಲು ಸಾಕಷ್ಟು ದುಡ್ಡು ಕೇಳುತ್ತಾರೆ. ಈ ಬಾರಿ ಹಿಡಿದುಕೊಂಡು ಹೋದರೆ ಮತ್ತೇ ಬಿಡಿಸಿಕೊಂಡು ಬರುವುದಿಲ್ಲ’ ಎಂದು ದನಗಳ ಮಾಲೀಕರೊಬ್ಬರು ತಿಳಿಸಿದರು. 

‘ಅವಳಿ ನಗರದಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿಂದೆ ನಗರಸಭೆಯಿಂದ ಮೂರು ಬಾರಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಪ್ರಾಣಿದಯಾ ಸಂಘದವರು ಮತ್ತು ಸಾರ್ವಜನಿಕರು ನಮಗೆ ಸಹಕಾರ ನೀಡಲಿಲ್ಲ’ ಎಂದು ಗದಗ ಬೆಟಗೇರಿ ನಗರಸಭೆ ಸದಸ್ಯ ಮಾಧುಸಾ ಮೇರವಾಡೆ ಬೇಸರ ವ್ಯಕ್ತಪಡಿಸಿದರು.

ಬಿಡಾಡಿ ದನಗಳಿಗಿಂತ ಬೀದಿನಾಯಿ ಹಾವಳಿ ಜಾಸ್ತಿ

ಪಟ್ಟಣದಲ್ಲಿ ಬೀದಿದನಗಳ ಸಂಖ್ಯೆ ಕಡಿಮೆ ಇದೆ. ಈವರೆಗೆ ಅವುಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಒಮ್ಮೊಮ್ಮೆ ಬಜಾರ್‌ನಲ್ಲಿ ದನಗಳು ಕೂಡಿದಾಗ ಸಂಚಾರಕ್ಕೆ ಮಾತ್ರ ಕಿರಿಕಿರಿ ಆಗುತ್ತದೆ. ಆದರೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಆಶ್ರಯ ಕಾಲೊನಿ ಮಟನ್ ಮಾರ್ಕೆಟ್ ಹತ್ತಿರ ನಾಯಿಗಳು ಹೆಚ್ಚಾಗಿವೆ. ಜತೆಗೆ ಪುರಸಭೆ ವ್ಯಾಪ್ತಿಯ ಮಂಜಲಾಪುರದಲ್ಲಿ ಆಗಾಗ ಬೀದಿನಾಯಿಗಳು ಮಕ್ಕಳು ವೃದ್ಧರ ಮೇಲೆ ದಾಳಿ ಮಾಡುತ್ತಿವೆ. ಈ ಕುರಿತು ಸಾರ್ವಜನಿಕರು ಸಾಕಷ್ಟು ಬಾರಿ ಪುರಸಭೆಗೆ ಮನವಿ ಮಾಡಿದ್ದಾರೆ. ಆದರೆ ಕ್ರಮಕೈಗೊಂಡಿಲ್ಲ. ಇದರಿಂದ ಜನರು ಆಕ್ರೋಶಗೊಂಡಿದ್ದಾರೆ. ‘ಬೀದಿ ನಾಯಿ ಹಿಡಿಯಲು ಕ್ರಮಕೈಗೊಳ್ಳಲಾಗುತ್ತಿದೆ. ಒಂದು ನಾಯಿ ಹಿಡಿಯಲು ₹500 ಕೇಳಿದ್ದಾರೆ. ಆದರೆ ಪುರಸಭೆಯಿಂದ ಒಂದು ನಾಯಿ ಹಿಡಿಯಲು ₹100 ಪಾವತಿಸಲು ನಿರ್ಧರಿಸಿದ್ದೇವೆ’ ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ತಿಳಿಸಿದರು.

ಬಿಡಾಡಿ ದನಗಳ ಸ್ಥಳಾಂತರಕ್ಕೆ ಪುರಸಭೆ

ಕ್ರಮ ಗಜೇಂದ್ರಗಡ: ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದ ಮೂಲಕ ರಾಷ್ಟ್ರೀಯ ದ್ವಿಪಥ ಹೆದ್ದಾರಿ ಹಾದು ಹೋಗಿದೆ. ಪಟ್ಟಣಕ್ಕೆ ಪ್ರತಿನಿತ್ಯ ನೂರಾರು ಜನರು ವ್ಯಾಪಾರ-ವಹಿವಾಟು ನಡೆಸಲು ಬರುತ್ತಿರುತ್ತಾರೆ. ಬಿಡಾಡಿ ದನಗಳು ಹಗಲು-ರಾತ್ರಿ ರಸ್ತೆಯಲ್ಲಿಯೇ ನಿಲ್ಲುವುದು ಮಲಗುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಹೂ ಹಣ್ಣು ವ್ಯಾಪಾರಿಗಳಿಗೆ ಬಿಡಾಡಿ ದನಗಳ ಕಾಟಕ್ಕೆ ಬೇಸತ್ತಿದ್ದಾರೆ. ಬಿಡಾಡಿ ದನಗಳು ಕಾದಾಡುವಾಗ ದ್ವಿಚಕ್ರ ವಾಹನಗಳನ್ನು ಕೆಡವಿದ ನಿದರ್ಶನಗಳು ಇವೆ. ಪಟ್ಟಣದಲ್ಲಿರುವ ಬಿಡಾಡಿ ದನಗಳ ಪೈಕಿ ಕೆಲವು ದನಗಳಿಗೆ ಮಾಲೀಕರಿದ್ದಾರೆ. ಅವುಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲು ಮುಂದಾದರೆ ಮಾಲೀಕರು ತಕರಾರು ತೆಗೆಯುತ್ತಾರೆಂಬ ಆರೋಪಗಳೂ ಇವೆ. ‘ಪಟ್ಟಣದಲ್ಲಿರುವ ಬಿಡಾಡಿ ದನಗಳನ್ನು ಸೆರೆ ಹಿಡಿಯಲು ದಾವಣಗೆರೆ ತಂಡವೊಂದನ್ನು ಸಂಪರ್ಕಿಸಿದ್ದೆವು. ಆದರೆ ಅವರು ಒಂದು ದನ ಸೆರೆ ಹಿಡಿಯಲು ₹8ರಿಂದ ₹10 ಸಾವಿರ ಕೇಳುತ್ತಿದ್ದಾರೆ. ನಾಲ್ಕು ದಿನಗಳಿಂದ ಬಿಡಾಡಿ ದನಗಳಿಗೆ ಮಾಲೀಕರಿದ್ದರೆ ಅವುಗಳನ್ನು ಹಿಡಿದು ಮನೆಯಲ್ಲಿ ಕಟ್ಟಿಕೊಳ್ಳುವಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದ್ದೇವೆ. ಆ.5ರಿಂದ ಪಟ್ಟಣದಲ್ಲಿರುವ ಎಲ್ಲ ಬಿಡಾಡಿ ದನಗಳನ್ನು ಸೆರೆ ಹಿಡಿದು ಶಿವಯೋಗ ಮಂದಿರದಲ್ಲಿರುವ ಗೋಶಾಲೆಗೆ ಸ್ಥಳಾಂತರಿಸಲು ಕ್ರಮವಹಿಸಲಾಗುವುದುʼ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು. ‘ಪಟ್ಟಣದಲ್ಲಿ ಬಿಡಾಡಿ ದನಗಳು ಹೆಚ್ಚಾಗಿದ್ದು ಜೋಡು ರಸ್ತೆಯಲ್ಲಿ ಮಂಗಳವಾರ ನಡೆಯುವ ಸಂತೆ ಸಂದರ್ಭದಲ್ಲಿ ನಡುವೆ ಬರುವ ದನಗಳು ತರಕಾರಿ ಹಣ್ಣು ತಿನ್ನುವುದರ ಜೊತೆಗೆ ಯಾವಾಗ ಯಾರಿಗೆ ಏನು ಮಾಡುತ್ತವೆ ಎಂಬುದು ತಿಳಿಯುವುದಿಲ್ಲ. ದನಗಳಿಂದ ಸಂಚಾರ ಹಾಗೂ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಬೀದಿ ಬದಿ ವ್ಯಾಪಾರಿ ರಾಜು ಮಾಂಡ್ರೆ ಹೇಳಿದರು.

ಬಿಡಾಡಿ ದನಗಳಿಂದ ಬೆಳೆ ನಾಶ

ಮುಂಡರಗಿ:ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಿಡಾಡಿ ದನಗಳ ಸಂಖ್ಯೆ ತುಂಬಾ ಕಡಿಮೆ ಇರುವುದರಿಂದ ಅವುಗಳಿಂದ ಸಂಭವಿಸುವ ಅನಾಹುತ ಹಾಗೂ ಅವಘಡಗಳ ಸಂಖ್ಯೆಯೂ ಕಡಿಮೆ ಇದೆ. ಗ್ರಾಮಿಣ ಭಾಗಗಳಲ್ಲಿ ಬಿಡಾಡಿ ದನಗಳು ರೈತರ ಜಮೀನುಗಳಿಗೆ ನುಗ್ಗಿ ಮನ ಬಂದಂತೆ ರೈತರ ಪೈರನ್ನು ತಿಂದು ಹಾಳು ಮಾಡುತ್ತವೆ ಎನ್ನುವುದನ್ನು ಹೊರತುಪಡಿಸಿ ಅವುಗಳಿಂದ ಇನ್ನಾವುದೇ ತೊಂದರೆ ಜನರನ್ನು ಬಾಧಿಸುವುದಿಲ್ಲ. ಬಿಡಾಡಿ ದನಗಳು ಹೆಚ್ಚಾಗಿರುವ ಕೆಲವು ದೊಡ್ಡ ಗ್ರಾಮಗಳಲ್ಲಿ ಅಲ್ಲಿಯ ಪಂಚಾಯ್ತಿಯವರು ಅವುಗಳ ನಿಯಂತ್ರಣಕ್ಕೆ ಸರಳ ಕ್ರಮಗಳನ್ನು ಕೈಗೊಳ್ಳುತ್ತಾರೆ. 

ಪೂರಕ ಮಾಹಿತಿ: ಕಾಶೀನಾಥ ಬಿಳಿಮಗ್ಗದ, ನಾಗರಾಜ ಹಣಗಿ, ಶ್ರೀಶೈಲ ಎಂ.ಕುಂಬಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT