ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ; ಬೇಕಿದೆ ಬೇಸಿಗೆ ಸಿದ್ಧತೆ

ಉತ್ತಮ ಮಳೆ ಹೆಚ್ಚಿದ ಅಂತರ್ಜಲ ಮಟ್ಟ l ಲೀಕೇಜ್‌ ಸಮಸ್ಯೆ l ಕುಡಿಯುವ ನೀರು ಚರಂಡಿ, ರಸ್ತೆ ಪಾಲು
Last Updated 15 ಫೆಬ್ರುವರಿ 2021, 5:20 IST
ಅಕ್ಷರ ಗಾತ್ರ

ಗದಗ: ಹಿಂದೊಮ್ಮೆ ನೀರಿಗಾಗಿ ತೀವ್ರ ತತ್ವಾರ ಅನುಭವಿಸುತ್ತಿದ್ದ ಜಿಲ್ಲೆಯ ಜನತೆಗೆ ಈಗ ಕುಡಿಯುವ ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಇಚ್ಛಾಶಕ್ತಿ
ಯಿಂದಾಗಿ 24X7, ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ), ಜಲ ಜೀವನ್‌ ಮಿಷನ್, ಜಲಾಮೃತ ಯೋಜನೆಗಳಿಂದ ಕುಡಿಯುವ ನೀರಿನ ‘ಬರ’ ಇಂಗಿದೆ.

ಆದರೂ, ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಸ್ಥಳೀಯ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕಿದೆ. ಜತೆಗೆ ನೀರಿನ ಮಿತಬಳಕೆ ಕುರಿತಂತೆ ಜನಜಾಗೃತಿ ಮೂಡಿಸಬೇಕಿದೆ. ಏಕೆಂದರೆ, ಶೇ 20ರಷ್ಟು ಕುಡಿಯುವ ನೀರು ಇಂದು ಲೀಕೇಜ್‌ ರೂಪದಲ್ಲಿ ವ್ಯರ್ಥವಾಗುತ್ತಿದೆ!

ಗದಗ ನಗರಕ್ಕೆ ನಿರಂತರ ನೀರು ಪೂರೈಸುವ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಯೋಜನೆ 2017ರ ಜೂನ್‌ನಿಂದ ಪ್ರಾರಂಭಗೊಂಡಿದೆ. ಅಂದಿನಿಂದ ನಗರಕ್ಕೆ ತುಂಗಭದ್ರ ನೀರು ಪೂರೈಕೆಯಾಗುತ್ತಿದೆ. ಆದರೆ, ಈ ಯೋಜನೆಯ ಮೂರನೇ ಹಂತ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಸಾಕಷ್ಟು ಕಡೆಗಳಲ್ಲಿ ಇಂದಿಗೂ ಹಳೆಯ ಪೈಪ್‌ಲೈನ್‌ಗಳಲ್ಲೇ ನೀರು ಸರಬರಾಜು ಆಗುತ್ತಿದೆ. ಹಳೆಯ ಲೈನ್‌ಗಳು ನೀರಿನ ರಭಸ ತಡೆಯಲಾರದೇ ಒಡೆದು ಹೋಗಿ, ಲಕ್ಷಾಂತರ ಲೀಟರ್‌ನಷ್ಟು ನೀರು ವ್ಯರ್ಥವಾಗುತ್ತದೆ.

ಗದಗ ನಗರಕ್ಕೆ ಪ್ರತಿನಿತ್ಯ 29 ಎಂಎಲ್‌ಡಿ ನೀರಿನ ಅಗತ್ಯವಿದ್ದು, ಇಂದು 33 ಎಂಎಲ್‌ಡಿ ಪೂರೈಕೆ ಆಗುತ್ತಿದೆ. ನಗರದಲ್ಲಿ ಒಟ್ಟು 36,606 ನಳದ ಸಂಪರ್ಕಗಳು ಇವೆ.

‘ಗದಗ ನಗರದಲ್ಲಿ 23 ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲೀಕೇಜ್‌ ಆಗುತ್ತಿದ್ದು, ಅವುಗಳಲ್ಲಿ ಫೆ.21ರ ನಂತರ ಸರಿಪಡಿಸಲಾಗುವುದು. ಉಳಿದ 6 ಲೀಕೇಜ್‌ ಪಾಯಿಂಟ್‌ಗಳನ್ನು ಸರಿಪಡಿಸಲು ಇಡೀ ನಗರದ ನೀರು ಸರಬರಾಜು ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಬೇಕಿದೆ. ಅದನ್ನು ಕೂಡ ಶೀಘ್ರವೇ ಸರಿಪಡಿಸಲಾಗುವುದು’ ಎಂದು ಕೆಯುಐಎಫ್‌ಸಿಯ ಎಇಇ ಎಸ್‌.ಎ.ಭಾಜಣ್ಣವರ ಮಾಹಿತಿ ನೀಡಿದರು.

ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬಳಿ ₹1,049 ಕೋಟಿ ವೆಚ್ಚದಲ್ಲಿ ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ಸುಮಾರು 400 ಗ್ರಾಮಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಸುವ ಎಲ್‌ ಅಂಡ್ ಟಿ ಘಟಕ ಪ್ರಾರಂಭಿಸಲಾಗಿದೆ. ಇದರಿಂದಾಗಿ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತದೆ. ಪಟ್ಟಣದ ಜನರಿಗೆ ಎರಡು ಅಥವಾ ಮೂರು ದಿನಗಳಿಗೊಮ್ಮೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಲಕ್ಷ್ಮೇಶ್ವರದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ: ಲಕ್ಷ್ಮೇಶ್ವರ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದ ಎಲ್ಲ ಭಾಗಗಳಿಗೆ ನದಿ ನೀರು ಪೂರೈಕೆ ಆಗುದಿರುವುದೇ ಪ್ರಮುಖ ಸಮಸ್ಯೆ. ಇನ್ನು ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸೂರಣಗಿಯ ನೀರು ಶುದ್ಧೀಕರಣ ಘಟಕದಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ.

2004ರಿಂದ ನದಿ ನೀರು ಜನತೆಗೆ ದೊರೆಯುತ್ತಿದೆ. ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ಸದ್ಯ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇಲ್ಲ. ಅಂದಾಜು 5 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನಳಗಳ ಜೋಡಣೆ ಇದ್ದು, ಪ್ರತಿವರ್ಷ ₹1,200ಯಂತೆ ವರ್ಷಕ್ಕೆ ₹60 ಲಕ್ಷ ನೀರಿನ ಕರದ ರೂಪದಲ್ಲಿ ಪುರಸಭೆಗೆ ಬರುತ್ತಿದೆ. ಇನ್ನು ನದಿ ನೀರು ಕೈಕೊಟ್ಟಾಗ ಪುರಸಭೆ ಕೊರೆಯಿಸಿದ 79 ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

ಹಳ್ಳಿಗಳಲ್ಲಿ ನೆಮ್ಮದಿ; ಪಟ್ಟಣದಲ್ಲಿ ಬೇಗುದಿ ಎರಡು ಮೂರು ವರ್ಷಗಳ ಹಿಂದೆಗಜೇಂದ್ರಗಡ ತಾಲ್ಲೂಕಿನಾದ್ಯಂತ ಕುಡಿಯುವ ನೀರಿಗಾಗಿ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ) ಗಜೇಂದ್ರಗಡ ತಾಲ್ಲೂಕಿನ ಬಹುತೇಕ ಹಳ್ಳಿಗಳ ಜನರ ನೀರಿನ ಬವಣೆ ನೀಗಿಸಿದೆ.

ತಾಲ್ಲೂಕಿನ ರಾಜೂರು, ದಿಂಡೂರು, ಲಕ್ಕಲಕಟ್ಟಿ, ನಾಗೇಂದ್ರಗಡ, ಮುಶಿಗೇರಿ, ಕಲ್ಲಿಗನೂರು, ನೆಲ್ಲೂರು, ಬೇವಿನಕಟ್ಟಿ, ಸೂಡಿ, ಕಾಲಕಾಲೇಶ್ವರ, ಬೈರಾಪೂರ, ಜಿಗೇರಿ, ರಾಮಾಪುರ, ಹಿರೇಕೊಪ್ಪ, ಕುಂಟೋಜಿ, ಗೊಗೇರಿ ಸೇರಿದಂತೆ 33 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ (ಡಿಬಿಒಟಿ) ನವಿಲು ತೀರ್ಥದ ಮಲಪ್ರಭಾ ನದಿ ನೀರು ಪೂರೈಕೆಯಾಗುತ್ತಿದ್ದು, ತಹಲ್ ಕಂಪನಿ ನೀರು ಸರಬರಾಜಿನ ಗುತ್ತಿಗೆ ಪಡೆದಿದೆ.

ದಿಂಡೂರು, ರಾಜೂರು, ಕಾಲಕಾಲೇಶ್ವರ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ನಿಯಂತ್ರಣ ಕೊಠಡಿಯಿಂದ ಸಮೀಪದ ಕಣವಿ ವೀರಭದ್ರೇಶ್ವರ ಬೆಟ್ಟದ ಮೇಲೆ 4 ಲಕ್ಷ ಲೀಟರ್‌ ಸಾಮರ್ಥ್ಯದ ಎರಡು ಬೃಹತ್ ಟ್ಯಾಂಕ್‌ಗಳಿಗೆ ನೀರು ಸಂಗ್ರಹಿಸಿ, ಅಲ್ಲಿಂದ 33 ಹಳ್ಳಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ನೀರು ಸರಬರಾಜು ಮಾಡಲಾಗುತ್ತಿದೆ.

‘ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಪುರಸಭೆ ಕೊಳವೆಬಾವಿಗಳ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಅಲ್ಲದೆ ಡಿಬಿಒಟಿ
ಯಿಂದ ನೀರು ಲಭಿಸುತ್ತಿರುವುದರಿಂದ ಪಟ್ಟಣದಲ್ಲಿ 9-10 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ ನೀರಿನ ಸಮಸ್ಯೆಯಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ ಹೇಳಿದರು.

ಡಿಬಿಒಟಿಯಿಂದ ಪ್ಲೋರೈಡ್ ನೀರಿಂದ ಮುಕ್ತಿ: ಈ ಹಿಂದೆ ಗಜೇಂದ್ರಗಡ ತಾಲ್ಲೂಕಿನ ಹಳ್ಳಿಗಳಲ್ಲಿ ಕೊಳವೆ ಬಾವಿಗಳಿಂದ ಪ್ಲೋರೈಡ್‌ಯುಕ್ತ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಜನರು ಈ ನೀರು ಕುಡಿಯುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಡಿಬಿಒಟಿ ನೀರು ಪೂರೈಕೆಯಾಗುತ್ತಿರುವುದರಿಂದ ಪ್ಲೋರೈಡ್ ನೀರಿನಿಂದ ಮುಕ್ತಿ ದೊರಕಿದಂತಾಗಿದೆ. ಆದರೆ, ಕೆಲ ಗ್ರಾಮಗಳಲ್ಲಿ ಒಮ್ಮೊಮ್ಮೆ ಪ್ಲೋರೈಡ್‌ಯುಕ್ತ ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ನೀರಿನ ವ್ಯತ್ಯಯ ಆಗದಂತೆ ವ್ಯವಸ್ಥೆ

ಮುಳಗುಂದ: ಪಟ್ಟಣ ಸೇರಿದಂತೆ ಶೀತಾಲಹರಿ, ಬಸಾಪೂರ ಒಳಗೊಂಡ 19 ಸಾವಿರ ಜನಸಂಖ್ಯೆಗೆ ಪ್ರತಿ ದಿನಕ್ಕೆ ಅಂದಾಜು 5 ಲಕ್ಷ ಲೀ.ನಷ್ಟು ಬೇಡಿಕೆ ಇದ್ದು, ಊರಿನ ಸುತ್ತಲೂ ಇರುವ 42 ಕೊಳವೆಬಾವಿಗಳು ಇದನ್ನು ಪೂರೈಸುತ್ತಿವೆ.

ಈ ಹಿಂದೆ ಪಟ್ಟಣದ ಸವಳಬಾವಿ, ಅಶ್ವಿನಿ ನಗರ ಸೇರಿದಂತೆ ಕೆಲವು ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯಾಗುತ್ತಿತ್ತು. ಇದನ್ನ ಮನಗಂಡು ಪೈಪ್‌ಲೈನ್ ಮಾರ್ಗಗಳನ್ನ ಬದಲಿಸಿ ಎತ್ತರದ ಟ್ಯಾಂಕ್ ಮೂಲಕವೇ ನೀರುವ ಹೋಗುವಂತೆ ಮಾಡಲಾಗಿದೆ. ಸದ್ಯ ₹26 ಲಕ್ಷ ಅನುದಾನದಲ್ಲಿ ಪೈಪ್‌ಲೈನ್ ಕಾಮಗಾರಿ ಆರಂಭವಾಗುತ್ತಿದೆ.

ಕಳೆದ ವರ್ಷ ಸಾಕಷ್ಟು ಮಳೆಯಾಗಿದ್ದರಿಂದ ಕೆರೆಕಟ್ಟೆಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಅಂತರ್ಜಲ ವೃದ್ಧಿಸಿದೆ. ಹೀಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವ ವ್ಯತ್ಯಯ ಆಗದು. ವಿದ್ಯುತ್ ಪೂರೈಕೆ ಸ್ಥಗಿತಗೊಂಡರೆ ಮಾತ್ರ ನೀರಿಗೆ ಸಮಸ್ಯೆಯಾಗುತ್ತದೆ. 3 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದ್ದು ಇದಕ್ಕಾಗಿ 10 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ತಿಳಿಸಿದರು.

––––––––
ಕುಡಿಯುವ ನೀರಿಗಾಗಿ ಪರದಾಟ

ನರೇಗಲ್: ಒಂದು ಕಾಲದಲ್ಲಿ ನೀರಾವರಿ, ಕೃಷಿ ತರಬೇತಿ ಕೇಂದ್ರವಾ
ಗಿದ್ದ ಪಟ್ಟಣದಲ್ಲಿ ಬೇಸಿಗೆ ಬಂದರೆ ಸಾಕು ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದು, ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುತ್ತಿದ್ದಾರೆ.

ಸ್ಥಳೀಯ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 12 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಕೇವಲ 3 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ₹60 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ನಿರ್ಮಿಸಲಾಗಿರುವ ಘಟಕಗಳು ದುರಸ್ತಿ ಕಾಣದೆ ಇರುವುದು ವಿಪರ್ಯಾಸ. 2012–13ನೇ ಸಾಲಿನಲ್ಲಿ ಕರ್ನಾಟಕ ನಿರಾವರಿ ನಿಗಮದ ಕೆಡಬ್ಲ್ಯುಎಸ್ ವತಿಯಿಂದ ₹50 ಲಕ್ಷ ವೆಚ್ಚದಲ್ಲಿ ದೊಡ್ಡದಾದ ನೀರಿನ ಟ್ಯಾಂಕ್‌ ಅನ್ನು ಪಟ್ಟಣದ 7ನೇ ವಾರ್ಡ್‌ನಲ್ಲಿ ನಿರ್ಮಿಸಲಾಗಿದೆ. ಆದರೆ, ಅವು ಇಂದಿಗೂ ಉಪಯೋಗವಾಗದೆ ಪಾಳು ಬಿದ್ದಿವೆ.

––––––––––

ಕೊಳವೆಬಾವಿಯೇ ಆಸರೆ

ರೋಣ: ತಾಲ್ಲೂಕಿನ ಜನರು ಕುಡಿಯುವ ನೀರಿಗೆ ಕೊಳವೆಬಾವಿಯ ಮೇಲೆ ಅವಲಂಬನೆಯಾಗಿದ್ದಾರೆ. ಎಲ್ಲಿಯೂ ನದಿ, ಕಾಲುವೆಯಂತಹ ನೀರಿನ ಮೂಲಗಳು ಇಲ್ಲ‌. ಹಾಗಾಗಿ ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಾ ಹೋಗುತ್ತದೆ.

ಬಿಸಿಲು ಏರುತ್ತಿದ್ದಂತೆ ಸಮಸ್ಯೆಯೂ ದ್ವಿಗುಣಗೊಳ್ಳುತ್ತದೆ ಆದರೂ ತಾಲ್ಲೂಕಿನ ಅಧಿಕಾರಿಗಳು ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಕುರಿತು ಯೋಚಿಸದೇ ಇರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.ಬೇಸಿಗೆಯಲ್ಲಿ ಬಳಕೆಯ ನೀರು ಹಾಗೂ ಕುಡಿಯುವ ನೀರಿಗಾಗಿ ಜನ ಅಲ್ಲಿ, ಇಲ್ಲಿ ಸುತ್ತಾಡಲು ಆರಂಭಿಸುತ್ತಾರೆ. ಹಣ ಕೊಟ್ಟು ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಇಷ್ಟೆಲ್ಲ ಸಮಸ್ಯೆಗಳು ಕಣ್ಮುಂದೆ ಇದ್ದರೂ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಅಧಿಕಾರಿಗಳು ಮುಂಚಿತವಾಗಿ ಕಾರ್ಯಾರಂಭ ಮಾಡುವುದಿಲ್ಲ. ತಾಲ್ಲೂಕಿಗೆ ಅನುಕೂಲ
ವಾಗುವಂತೆ ನೀರನ್ನು ಸಂಗ್ರಹಿಸಬೇಕು ಎಂದು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮಂಜುನಾಥ ಹಾಲಕೆರೆ ಹೇಳಿದರು.

––––––––

ನಿತ್ಯ ನೀರೋತ್ಸವ

ಮುಂಡರಗಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ನೀರಿನ ಗಂಭೀರ ಸಮಸ್ಯೆಗಳು ಉದ್ಭವಿಸಿಲ್ಲ. ಪಟ್ಟಣವು ಸುಮಾರು 50 ಸಾವಿರ ಜನಸಂಖ್ಯೆ ಹೊಂದಿದ್ದು, ಪುರಸಭೆಯು ಪಟ್ಟಣದ ವಿವಿಧ ಭಾಗಗಳಿಗೆ ನಿಯಮಿತವಾಗಿ ನೀರು ಪೂರೈಸುತ್ತಿದೆ.

ಸದ್ಯ ಪಟ್ಟಣದ ವಿವಿಧ ಭಾಗಗಳಲ್ಲಿ 58 ಕೊಳವೆಬಾವಿಗಳಿದ್ದು, ಅವುಗಳ ಮೂಲಕ ಸರದಿಯಂತೆ ಎಲ್ಲ ವಾರ್ಡ್‌ಗ
ಳಿಗೂ ನಿಯಮಿತವಾಗಿ ನೀರು ಪೂರೈಸಲಾಗುತ್ತಿದೆ.

ಪಟ್ಟಣದಲ್ಲಿ 13 ಶುದ್ಧ ಕುಡಿಯುವ ನೀರು ಪೂರೈಸುವ ಘಟಕಗಳಿದ್ದು, ಒಂದು ದುರಸ್ತಿ ಯಲ್ಲಿದೆ. ಇನ್ನುಳಿದ ಘಟಕಗ ಳಲ್ಲಿ ನಿತ್ಯ ಶುದ್ಧ ನೀರು ದೊರೆಯುತ್ತದೆ. ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಗ್ರಾಮೀಣ ಭಾಗದ ಜನರು ಕುಡಿಯಲು ಶುದ್ಧ ನೀರನ್ನು ಬಳಸುತ್ತಿದ್ದಾರೆ. ತಾಲ್ಲೂಕಿನ ಚಿಕ್ಕವಡ್ಡಟ್ಟಿ, ಹಳ್ಳಕೇರಿ, ಹಳ್ಳಿಗುಡಿ ಮೊದಲಾದ ಗ್ರಾಮಗಳಲ್ಲಿಯೂ ಈಗ ನೀರಿನ ಸಮಸ್ಯೆ ಇಲ್ಲ.

ಟ್ಯಾಪ್ ಜೋಡಿಸಲು ಮನವಿ: ಪಟ್ಟಣ ಹಾಗೂ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸ್ಥಳೀಯ ಸಂಸ್ಥೆಗಳು ಪೂರೈಸುವ ನಳಗಳಿಗೆ ಟ್ಯಾಪ್ ಇರುವುದಿಲ್ಲ. ಇದರಿಂದಾಗಿ ಪೂರೈಸುವ ಶೇ 40ರಷ್ಟು ನೀರು ನಿತ್ಯ ವ್ಯರ್ಥವಾಗಿ ಚರಂಡಿ ಅಥವಾ ರಸ್ತೆ ಸೇರುತ್ತಿದೆ. ನಳಗಳಿಗೆ ಟ್ಯಾಪ್ ಅಳವಡಿಸುವ ಕುರಿತಂತೆ ಪುರಸಭೆ ಹಾಗೂ ಗ್ರಾಮ ಪಂಚಾಯ್ತಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಿ ಪವನ ಚೋಪ್ರಾ ಮನವಿ ಮಾಡಿದ್ದಾರೆ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಶ್ರೀಶೈಲ ಎಂ. ಕುಂಬಾರ, ನಾಗರಾಜ ಎಸ್‌.ಹಣಗಿ, ಕಾಶೀನಾಥ ಬಿಳಿಮಗ್ಗದ, ಚಂದ್ರಶೇಖರ ಭಜಂತ್ರಿ, ಚಂದ್ರು ಎಂ.ರಾಥೋಡ್‌, ಬಸವರಾಜ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT