ಸೋಮವಾರ, ಆಗಸ್ಟ್ 2, 2021
26 °C
‘ಪ್ರಜಾವಾಣಿ’ ರಿಯಾಲಿಟಿ ಚೆಕ್‌– ಸುರಕ್ಷತಾ ಕ್ರಮಗಳನ್ನು ಪಾಲಿಸಲು ಜನರ ನಿರ್ಲಕ್ಷ್ಯ

ನಿಯಮಗಳಿಗೆ ಧಿಕ್ಕಾರ; ಸಂಚಾರ ನಿರಂತರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಅನ್‌ಲಾಕ್‌ ಘೋಷಣೆ ನಂತರ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆಗಳ ಜತೆಗೆ ಜನದಟ್ಟಣೆ ಹೆಚ್ಚಾಗಿರುವುದು ಕಂಡುಬಂದಿದೆ. ಲಾಕ್‍ಡೌನ್ ಸಮಯದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳ ಕಣ್ಣುತಪ್ಪಿಸಿ ಕದ್ದುಮುಚ್ಚಿ ಓಡಾಡುತ್ತಿದ್ದ ಜನರು, ಆನ್‌ಲಾಕ್‌ ಘೋಷಣೆ ಆಗುತ್ತಿದ್ದಂತೆ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಹೇರಿರುವ ನಿರ್ಬಂಧಗಳನ್ನು ಧಿಕ್ಕರಿಸುತ್ತಿದ್ದಾರೆ.

ಸಾರ್ವಜನಿಕರ ಸಂಚಾರ, ಮಾಸ್ಕ್ ಧರಿಸುವಿಕೆ ಮೊದಲಾದವುಗಳನ್ನು ನಿರ್ಬಂಧಿಸುವ ವಿಷಯದಲ್ಲಿ ಈ ಮೊದಲು ವಿವಿಧ ಇಲಾಖೆಗಳ ಅಧಿಕಾರಿಗಳು ತೋರುತ್ತಿದ್ದ ಕಾಳಜಿಯೂ ಮಾಯವಾಗಿದೆ. ಪೊಲೀಸರ ಭಯವಿಲ್ಲದ್ದರಿಂದ ಜನರು ಮನ ಬಂದಂತೆ ಓಡಾಡುತ್ತಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವೂ ದೂರವಾಗಿರುವುದು ಜುಲೈ 5ರಿಂದ 9ರವರೆಗೆ ‘ಪ್ರಜಾವಾಣಿ’ ನಡೆಸಿದ ‘ರಿಯಾಲಿಟಿ ಚೆಕ್‌’ ವೇಳೆ ಕಂಡುಬಂತು. 

ಬೀದಿಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಹಳ್ಳಿಯಿಂದ ಬರುವ ಅನೇಕ ಬಡಜನರು ಮಾಸ್ಕ್‌ ಧರಿಸುವ ಬಗ್ಗೆ ಕಿಂಚಿತ್ತು ತಲೆಕೆಡಿಸಿಕೊಂಡಿರಲಿಲ್ಲ. ರಸ್ತೆಯಲ್ಲಿ ತಿರುಗಾಡುವ ಶೇ 70ಕ್ಕೂ ಅಧಿಕ ಮಂದಿ ಕೋವಿಡ್‌ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಅಡ್ಡಾಡುವುದು ಕಂಡುಬಂತು. ಬೈಕ್‌ನಲ್ಲಿ ತಿರುಗುವ ಯುವಕ, ಯುವತಿಯರು ಮಾಸ್ಕ್‌ ಅನ್ನು ಗಲ್ಲದ ಮೇಲಿಟ್ಟುಕೊಂಡು ಸಂಚರಿಸುವುದು ಕಂಡುಬಂತು.

ಜಿಲ್ಲೆಯಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಜುಲೈ 8ರವರೆಗೆ 2,51,705 ಮಂದಿ ಮೊದಲ ಡೋಸ್‌ (ಶೇ 32), 93,594 ಮಂದಿ ಎರಡನೇ ಡೋಸ್‌ (ಶೇ 37) ಹಾಕಿಸಿಕೊಂಡಿದ್ದಾರೆ. ಬೇಡಿಕೆಗೆ ತಕ್ಕಷ್ಟು ಲಸಿಕೆಗಳು ಜಿಲ್ಲೆಗೆ ಪೂರೈಕೆ ಆಗುತ್ತಿಲ್ಲ. ಆದರೂ, ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಗಂಟಲು ಮತ್ತು ಮೂಗಿನ ದ್ರವ ಮಾದರಿ ಪರೀಕ್ಷೆ ಹಿಂದಿನಂತೆಯೇ ನಿರಂತರವಾಗಿ ನಡೆಯುತ್ತಿದೆ. ಜೂನ್‌ 29ರಿಂದ ಜುಲೈ 8ರವರೆಗೆ 17,966 ಮಂದಿಯ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ನಡೆದಿದ್ದು, ಅವರಲ್ಲಿ 80 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಗದಗ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಪಾಸಿಟಿವಿಟಿ ರೇಟ್‌ ಶೇ 0.44ರಷ್ಟಿತ್ತು.

ಭಯವಿಲ್ಲ:

ಮುಂಡರಗಿ: ಜುಲೈ 2ರಿಂದ 8ರವರೆಗೆ ತಾಲ್ಲೂಕಿನಲ್ಲಿ ಒಟ್ಟು 1,475 ಜನರ ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ಮಾಡಲಾಗಿದೆ. ಅದರಲ್ಲಿ 48 ಜನರಿಗೆ ಮಾತ್ರ ಸೋಂಕು ತಗುಲಿದೆ. ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಜನರಲ್ಲಿ ನಿರಾತಂಕ ಮೂಡಿದೆ. ಜನರು ಮನ ಬಂದಂತೆ ಓಡಾಡಲೂ ಇದೂ ಒಂದು ಕಾರಣವಾಗಿದೆ.

ಕೊರೊನಾ ಸೋಂಕು ಹರಡುವ ಕುರಿತಂತೆ ಮೊದಲಿದ್ದ ಭಯ ಮಾಯವಾಗಿದ್ದು, ಜನಸಾಮಾನ್ಯರು ಬಹುತೇಕ ಕೊರೊನಾ ನಿರ್ಬಂಧಗಳನ್ನು ಮುರಿಯುತ್ತಿದ್ದಾರೆ. ಜನರಿಂದ ಇದೇ ವರ್ತನೆ ಮುಂದುವರಿದಲ್ಲಿ ಸಂಭಾವ್ಯ ಮೂರನೇ ಅಲೆಯು ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಪ್ರಜ್ಞಾವಂತರು ಕಳವಳ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ನಿರ್ಲಕ್ಷ್ಯ:

ರೋಣ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಇಳಿಕೆ ಕ್ರಮದಲ್ಲಿ ಸಾಗಿದೆ. ಆದರೆ, ಜನರು ಸೋಂಕಿನ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಮದುವೆ, ಹಬ್ಬಹರಿದಿನ ಹಾಗೂ ಆಚರಣೆಗಳಲ್ಲಿ ಮೈಮರೆತು ಗುಂಪು ಗುಂಪಾಗಿ ಸೇರುತ್ತಿದ್ದಾರೆ. ದಿನವೂ ಮಾರುಕಟ್ಟೆಗೆ, ಅಂಗಡಿಗಳಿಗೆ ಬರುವ ಜನರು ಕೋವಿಡ್‌ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.

ಜನರಿಗಿಲ್ಲ ಕಾಳಜಿ:

ನರೇಗಲ್:‌ ಕೋವಿಡ್‌ ಸೋಂಕು ಸಂಪೂರ್ಣವಾಗಿ ಹೋಗಿದೆ ಎನ್ನುವ ಹಾಗೆ ಜನರು ಮೈಮರೆತು ಮಾರುಕಟ್ಟೆಯಲ್ಲಿ ಸುತ್ತಾಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ನಿತ್ಯವೂ ಮಾರುಕಟ್ಟೆ ಜನರಿಂದ ತುಂಬಿರುತ್ತದೆ. ಮಾಸ್ಕ್‌ ಹಾಕುವವರು ಅಪರೂಪ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಯಾವ ಭಾಗದಲ್ಲೂ ಜನರು ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿಲ್ಲ.

ಕೊರೊನಾ ಹೋತು...

ಗಜೇಂದ್ರಗಡ: ಸುತ್ತಲಿನ ಗ್ರಾಮಗಳಿಂದ ಪ್ರತಿನಿತ್ಯ ವಿವಿಧ ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ಬರುವ ಜನರನ್ನು ಕೋವಿಡ್ ಸೋಂಕಿನ ಕುರಿತು ಪ್ರಶ್ನಿಸಿದರೆ, ‘ಲಾಕ್‌ಡೌನ್ ಮುಗಿತಲ್ಲ. ಕೋವಿಡ್ ಸೋಂಕು ಹೋಗಿದೆ‌’ ಎಂಬ ಉತ್ತರಗಳು ದೊರೆತವು.

ಅಂತರ ಮಾಯ:

ಲಕ್ಷ್ಮೇಶ್ವರ: ಲಾಕ್‍ಡೌನ್ ಸಡಿಲಿಕೆ ನಂತರ ಕೊರೊನಾ ಸಂಪೂರ್ಣ ಹೋಗಿದೆ ಎಂಬ ಭ್ರಮೆಯಲ್ಲಿ ಸಾರ್ವಜನಿಕರು ಮಾಸ್ಕ್ ಹಾಕಿಕೊಳ್ಳುವುದನ್ನು ಮತ್ತು ಅಂತರ ಕಾಯ್ದುಕೊಳ್ಳುವುದನ್ನೇ ಮರೆತಿದ್ದಾರೆ. ಇನ್ನು ಸ್ಯಾನಿಟೈಸರ್ ಉಪಯೋಗ ಜನರ ಯೋಚನೆಯಿಂದ ದೂರವಾಗಿದೆ.

ಕಚೇರಿಗಳಲ್ಲಷ್ಟೇ ನಿಯಮ ಪಾಲನೆ

ಡಂಬಳ: ಲಾಕ್‌ಡೌನ್‌ ತೆರವು ಮಾಡಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನ ಕೋವಿಡ್–19 ನಿಯಮವನ್ನು ಮರೆತಿದ್ದು, ಮಾಸ್ಕ್‌ ಧರಿಸುತ್ತಿಲ್ಲ. ಆಸ್ಪತ್ರೆ, ಬ್ಯಾಂಕ್ ಸೇರಿದಂತೆ ಕೆಲವು ಕಚೇರಿಯಲ್ಲಿ ಮಾತ್ರ ಕೋವಿಡ್‌ ನಿಯಮಗಳ ಪಾಲನೆ ಆಗುತ್ತಿದೆ.

‘ಅನ್‌ಲಾಕ್‌ ಘೋಷಣೆ ನಂತರ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಹಾಗಂತ, ಜನರು ಕೋವಿಡ್–19 ನಿಯಮ ಪಾಲನೆ ಮಾಡುವುದನ್ನು ಮರೆಯಬಾರದು’ ಎನ್ನುತ್ತಾರೆ ನೋಡಲ್ ಅಧಿಕಾರಿ ಪ್ರದೀಪ ಪವಾರ.

‘ಗ್ರಾಮೀಣ ಪ್ರದೇಶದ ಜನರು ಕೋವಿಡ್–19 ಮಾರ್ಗಸೂಚಿ ಪಾಲನೆ ಮುಂದುವರಿಸಬೇಕು. ಕೋವಿಡ್‌ ಎರಡನೇ ಅಲೆ ಬಂದು ಹೋದ ನಂತರ ಜನರು ಜಾಗೃತರಾಗಿದ್ದಾರೆ’ ಎನ್ನುತ್ತಾರೆ ಕುಬೇರಪ್ಪ ಕೆ.ಬಂಡಿ ಹಾಗೂ ಮುತ್ತು ಮಠದ.

ಬರದಾಗ ಬುತ್ತಿ ಬಿಚ್ಚಿದಂಗ!

ನರಗುಂದ: ಕಳೆದ ಸೋಮವಾರದಿಂದ ಲಾಕ್‌ಡೌನ್‌ ತೆಗೆದುಹಾಕಿದ್ದರಿಂದ ಪಟ್ಟಣ ಹಾಗೂ ತಾಲ್ಲೂಕಿನ ಜನತೆ ಕೋವಿಡ್ ಮುಕ್ತವಾದಂತೆ ಸಂಚರಿಸುತ್ತಿದ್ದಾರೆ. ನಿಯಮಗಳ ಪಾಲನೆ ಎಳ್ಳಷ್ಟೂ ಇಲ್ಲ. ಮಾಸ್ಕ್‌ ಧರಿಸುವವರು ಶೇ 50ರಷ್ಟು ಮಂದಿ ಮಾತ್ರ. ಪರಸ್ಪರ ಅಂತರ ಕಾಯ್ದುಕೊಳ್ಳುವುದು ದೂರದ ಮಾತಾಗಿದೆ. ನಗರದ ಪ್ರಮುಖ ಸ್ಥಳಗಳೆಲ್ಲವೂ ಸಂತೆ ಜಾತ್ರೆಗಳ ರೀತಿ ಕಂಡು ಬರುತ್ತಿದೆ.‌

ಬರದಾಗ ಬುತ್ತಿ ಬಿಚ್ಚಿದಂಗ ಜನರು ಎಂದೂ ಸಂಚರಿಸಿಯೇ ಇಲ್ಲವೇನೋ ಎಂಬಂತೆ ಜನದಟ್ಟಣೆ ಎಲ್ಲೆಡೆ ಹೆಚ್ಚಾಗಿದೆ. ಅಧಿಕಾರಿಗಳು, ಪೊಲೀಸರು ಕೋವಿಡ್ ನಿಯಮ ಪಾಲನೆ ಮಾಡದವರನ್ನು ವಿಚಾರಿಸುತ್ತಿಲ್ಲ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ಚಂದ್ರು ಎಂ.ರಾಥೋಡ್‌, ಶ್ರೀಶೈಲ ಎಂ.ಕುಂಬಾರ, ನಾಗರಾಜ ಎಸ್‌.ಹಣಗಿ, ಲಕ್ಷ್ಮಣ ಎಚ್.ದೊಡ್ಡಮನಿ, ಡಾ. ಬಸವರಾಜ ಹಲಕುರ್ಕಿ, ಖಲೀಲಅಹ್ಮದ ಶೇಖ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.