ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಸಮಸ್ಯೆಗಳ ಸುಳಿಯಲ್ಲಿ ಕೈಗಾರಿಕೋದ್ಯಮ

ಹೇರಳ ಸೌಲಭ್ಯಗಳಿದ್ದರೂ ಇಚ್ಛಾಶಕ್ತಿ ಕೊರತೆ; ಅಭಿವೃದ್ಧಿ ಕಾಣದ ಗದಗ ಜಿಲ್ಲೆ
Last Updated 4 ಅಕ್ಟೋಬರ್ 2021, 4:51 IST
ಅಕ್ಷರ ಗಾತ್ರ

ಗದಗ: ಪರಿಸರಸ್ನೇಹಿ ಕೈಗಾರಿಕೋದ್ಯಮಗಳ ಅಭಿವೃದ್ಧಿಗೆ ಅತ್ಯುತ್ತಮ ತಾಣವಾಗಿದ್ದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಗದಗ ಜಿಲ್ಲೆ ಕೈಗಾರಿಕೋದ್ಯಮದಲ್ಲಿ ಹಿಂದುಳಿದೆ. ನಗರದ ಹೊರವಲಯದಲ್ಲಿರುವ ನರಸಾಪುರ ಇಂಡಸ್ಟ್ರಿಯಲ್‌ ಏರಿಯಾ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿದ್ದು, ಈಗಿರುವ ಉದ್ಯಮಗಳ ಅಭಿವೃದ್ಧಿಗಾಗಿ ಕನಿಷ್ಠ ಸೌಕರ್ಯಗಳನ್ನು ಒದಗಿಸಿಕೊಡಬೇಕಿದ್ದ ಜಿಲ್ಲಾಡಳಿತವೂ ಆಸಕ್ತಿ ತೋರುತ್ತಿಲ್ಲ.

1997ರಲ್ಲಿ ಅಸ್ತಿತ್ವಕ್ಕೆ ಬಂದ ನರಸಾಪುರ ಕೈಗಾರಿಕೆ ಪ್ರದೇಶ 2021ರಲ್ಲೂ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೇ ತೊಂದರೆ ಪಡುತ್ತಿದೆ ಎಂಬ ವಿಚಾರ ಅಚ್ಚರಿ ಅನಿಸಿದರೂ ಸತ್ಯ! ವಿದ್ಯುತ್‌, ರಸ್ತೆ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಆರಂಭದಲ್ಲಿ ₹2 ಲಕ್ಷಕ್ಕೆ ಭೂಮಿ ಕೊಟ್ಟು ಈಗ ₹20 ಲಕ್ಷ ಕೊಟ್ಟು ಸೇಲ್‌ಡೀಡ್‌ ಮಾಡಿಕೊಳ್ಳುವಂತೆ ನೋಟಿಸ್‌ ನೀಡಿರುವುದು ಉದ್ಯಮಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೊಸದಾಗಿ ಉದ್ಯಮ ಸ್ಥಾಪನೆ ಮಾಡಲು ಬರುವವರು ಎಕರೆಗೆ ₹70 ಲಕ್ಷ ಕೊಡಬೇಕಿರುವ ಪರಿಸ್ಥಿತಿ ಇಲ್ಲಿದ್ದು, ಉದ್ಯಮಿಗಳು ಭೂಮಿ ಬೆಲೆ ಕೇಳಿಯೇ ಹಿಂದಡಿ ಇಡುತ್ತಿದ್ದಾರೆ.

‘ನರಸಾಪುರ ಕೈಗಾರಿಕಾ ವಲಯದಲ್ಲಿ 80 ಮಂದಿ ಉದ್ಯಮಿಗಳು ಅಂದಾಜು ₹350 ಕೋಟಿಯಷ್ಟು ಬಂಡವಾಳ ಹೂಡಿದ್ದಾರೆ. ಉದ್ಯಮ ಆರಂಭಿಸಿ ಎರಡು ದಶಕಗಳು ಕಳೆದರೂ ನಾವಿನ್ನೂ ಮೂಲಸೌಲಭ್ಯಕ್ಕಾಗಿ ಸರ್ಕಾರ ಮತ್ತು ಜಿಲ್ಲಾಡಳಿತದ ಎದುರು ಅಂಗಲಾಚುತ್ತಿದ್ದೇವೆ. ಆರಂಭದಲ್ಲಿ ಉತ್ಸಾಹದಿಂದ ಬಂಡವಾಳ ಹೂಡಿಬಿಟ್ಟೆವು. ಈಗ ಕಿತ್ತುಕೊಂಡು ಹೋಗಲು ಸಾಧ್ಯವಾಗದಂತಹ ತ್ರಿಶಂಕು ಸ್ಥಿತಿಯಲ್ಲಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಜಿಲ್ಲೆಗೆ ಹೊಸ ಉದ್ಯಮಗಳು ಬರುವುದು ಕನಸಿನ ಮಾತು’ ಎಂದು ನರಸಾಪುರ ಇಂಡಸ್ಟ್ರಿಯಲ್‌ ಅಸೋಸಿಯೇಷನ್‌ ಅಧ್ಯಕ್ಷ ಶಿವಕುಮಾರ್‌ ಪಾಟೀಲ ಬೇಸರದಿಂದ ನುಡಿದರು.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆಹಾರ ಸಂಸ್ಕರಣೆ, ಫುಡ್‌ ಪಾರ್ಕ್‌, ಹಾರ್ಡ್‌ವೇರ್‌ ಎಂಜಿನಿಯರಿಂಗ್‌, ಗಾರ್ಮೆಂಟ್ಸ್‌, ಪೈಪು, ಸಿಂಟೆಕ್ಸ್‌ ಕೈಗಾರಿಕೆಗಳ ಜತೆಗೆ ಮಧ್ಯಮ ಹಾಗೂ ಗುಡಿ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಉದ್ಯಮಗಳಿಂದ ಸುತ್ತಮುತ್ತಲಿನ ಸುಮಾರು 3,500 ಮಂದಿಗೆ ಉದ್ಯೋಗ ಲಭಿಸಿದೆ.

‘ಗದಗ ನಗರದಿಂದ ಕೈಗಾರಿಕಾ ಪ್ರದೇಶಕ್ಕೆ ಬರಲು ಸರಿಯಾದ ರಸ್ತೆ ಮಾರ್ಗವಿಲ್ಲ. ಕೈಗಾರಿಕಾ ಪ್ರದೇಶಕ್ಕೆ ಬರುವಾಗ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಅಂಡರ್‌ ಬ್ರಿಡ್ಜ್‌ನಲ್ಲಿ ಕಂಟೇನರ್‌ಗಳು ಸಿಲುಕಿಕೊಂಡು ಫಜೀತಿ ಪಡುತ್ತವೆ. ದೇಶ ವಿದೇಶಗಳ ಕೈಗಾರಿಕೋದ್ಯಮಿಗಳು ಇಲ್ಲಿಗೆ ಬರುತ್ತಿರುತ್ತಾರೆ. ನಮ್ಮಲ್ಲಿ ಇನ್ನೂ ಕನಿಷ್ಠ ಸೌಲಭ್ಯಗಳು ಇಲ್ಲ ಎಂಬುದು ಅವರ ಮನಸ್ಸಿನಲ್ಲಿ ಕುಳಿತರೆ ಹೂಡಿಕೆಗೆ ಕೊಕ್ಕೆ ಬೀಳುತ್ತದೆ. ಹಾಗಾಗಿ, ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ಬೈಪಾಸ್‌ ನಿರ್ಮಾಣಕ್ಕೆ ಕ್ರಮವಹಿಸಬೇಕು’ ಎಂದು ಶಿವಕುಮಾರ್‌ ಪಾಟೀಲ ಆಗ್ರಹಿಸಿದರು.

ನಷ್ಟದಲ್ಲಿ ಸಣ್ಣ ಕೈಗಾರಿಕೆ ವಲಯ
ಮುಳಗುಂದ:
ಸಣ್ಣ ಮಟ್ಟದಲ್ಲಿರುವ ಕಬ್ಬಿಣ ವಸ್ತುಗಳ ತಯಾರಿಕೆ ಘಟಕಗಳು ಲಾಕ್‌ಡೌನ್ ಸಮಯದಲ್ಲಿ ಸಂಪೂರ್ಣ ಬಂದ್‌ ಆಗಿದ್ದರಿಂದ ನಷ್ಟ ಅನುಭವಿಸಿವೆ.

ಪಟ್ಟಣದಲ್ಲಿರುವ ಕೃಷಿ ಯಂತ್ರಗಳ ತಯಾರಿಕೆ ಮತ್ತು ರಿಪೇರಿ ಕೆಲಸ ನಿರ್ವಹಿಸುವ 5 ಘಟಕಗಳು ಸರ್ಕಾರದ ಕೋವಿಡ್ ಮಾರ್ಗಸೂಚಿ ಹಿನ್ನಲೆಯಲ್ಲಿ ಕೆಲಸ ಸ್ಥಗಿತಗೊಳಿಸಿದ್ದವು. ಪರಿಣಾಮ ಆದಾಯ ಇಲ್ಲದೇ ಕೂಲಿ ಕಾರ್ಮಿಕರು ಸಂಕಷ್ಟದ ಜೀವನ ನಡೆಸುವಂತಾಗಿತ್ತು.

‘ಕೃಷಿ ಕೆಲಸಕ್ಕೆ ಬಳಸುವ ಕುಂಟಿ, ರಂಟಿ, ನೇಗಿಲು ಹಾಗೂ ಮನೆ ನಿರ್ಮಾಣಕ್ಕೆ ಬಳಸುವ ಕಿಟಕಿ, ಬಾಗಿಲು, ಗ್ರಿಲ್, ಶೆಡ್‌ ನಿರ್ಮಾಣ ಸೇರಿದಂತೆ ಸಣ್ಣಮಟ್ಟದಲ್ಲಿ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳನ್ನು ಗದಗ, ಹುಬ್ಬಳ್ಳಿಯಿಂದ ತರಬೇಕಿದೆ. ಹುಬ್ಬಳ್ಳಿಯಲ್ಲಿ ಕಡಿಮೆ ದರಕ್ಕೆ ಸಿಗುತ್ತದೆಯಾದರೂ ಟ್ರಾನ್ಸಪೋರ್ಟ್‌ ವ್ಯವಸ್ಥೆ ಇಲ್ಲದಾಗಿದೆ. ಹೀಗಾಗಿ ಹೆಚ್ಚಿನ ದರ ಕೊಟ್ಟು ಗದುಗಿನಲ್ಲೇ ಖರೀದಿಸುವುದು ಅನಿವಾರ್ಯವಾಗಿದೆ’ ಎಂದು ವೆಲ್ಡಿಂಗ್ ಘಟಕದ ಮಕ್ತುಂಸಾಬ ಹೇಳಿದರು.

ಅಗರಬತ್ತಿ, ರೊಟ್ಟಿ ಸೇರಿದಂತೆ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಘಟಕಗಳಿಗೂ ಲಾಕ್‌ಡೌನ್ ಹೊಡೆತ ನೀಡಿದೆ. ಆಹಾರ ಪದಾರ್ಥಗಳನ್ನ ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ಕಳುಹಿಸಲು ಸಾರಿಗೆ ವ್ಯವಸ್ಥೆ ಇಲ್ಲದೇ ನಷ್ಟ ಅನುಭವಿಸಿವೆ. ಗದಗ ತಾಲ್ಲೂಕಿನ ಬಹುತೇಕ ಗ್ರಾಮೀಣ ಭಾಗದಲ್ಲಿ ಉದ್ಯೋಗ ನೀಡುವಂತಹ ಕೈಗಾರಿಕೆಗಳು ಸ್ಥಾಪನೆ ಆಗಬೇಕು’ ಎಂದು ಎಂ.ಎಂ.ಜಮಾಲಸಾಬನವರ ತಿಳಿಸಿದರು.

ಕೈಗಾರಿಕೆಯಲ್ಲಿ ಹಿಂದುಳಿದ ತಾಲ್ಲೂಕು
ಮುಂಡರಗಿ:
ವರ್ಷದಲ್ಲಿ ಕನಿಷ್ಠ ಎಂಟು ತಿಂಗಳು ಹರಿಯುವ ತುಂಗಭದ್ರಾ ನದಿ. ಜಿಲ್ಲೆಯ ಮುಂಡರಗಿ, ಶಿರಹಟ್ಟಿ ಹಾಗೂ ಗದಗ ತಾಲ್ಲೂಕುಗಳಲ್ಲಿ ವಿಶಾಲವಾಗಿ ಹಬ್ಬಿರುವ ಕಪ್ಪತಗುಡ್ಡ ಅರಣ್ಯ ಪ್ರದೇಶ. ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಅಂತರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೊದಲಾದ ಸೌಲಭ್ಯಗಳು ಹೇರಳವಾಗಿದ್ದರೂ ಕೈಗಾರಿಕಾ ಅಭಿವೃದ್ಧಿಯಲ್ಲಿ ತಾಲ್ಲೂಕು ತುಂಬಾ ಹಿಂದುಳಿದಿದೆ.

ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿ ಸಹಕಾರಿ ತತ್ವದ ಅಡಿ ನಿರ್ಮಿಸಿದ್ದ ಸಕ್ಕರೆ ಕಾರ್ಖಾನೆಯನ್ನು ಆಂಧ್ರದ ವ್ಯಕ್ತಿಯೊಬ್ಬರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದ್ದು, ಅದರಲ್ಲಿ ಅಕ್ಕಪಕ್ಕದ ಗ್ರಾಮಗಳ ಕೂಲಿಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಪ್ಪತಗುಡ್ಡದಲ್ಲಿ ಸ್ಥಾಪಿಸಲಾಗಿರುವ ಗಾಳಿ ಯಂತ್ರಗಳ ಕಾವಲು ಕಾಯಲು ಭದ್ರತಾ ಸಿಬ್ಬಂದಿ ನೇಮಿಸಿಕೊಂಡಿದ್ದು, ಇಲ್ಲಿಯ ಕೂಲಿ ಕಾರ್ಮಿಕರು ಅಷ್ಟರಲ್ಲಿಯೇ ತೃಪ್ತಿ ಪಟ್ಟುಕೊಳ್ಳಬೇಕಿದೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಅರಣ್ಯ ಕೈಗಾರಿಕೋದ್ಯಮ ನಿಗಮದ ಅಧ್ಯಕ್ಷರಾಗಿದ್ದ ಟಿ.ಈಶ್ವರ ಅವರು ಕಪ್ಪತಗುಡ್ಡದ ಆಜುಬಾಜಿನಲ್ಲಿ ಅರಣ್ಯೋತ್ಪನ್ನಗಳ ಕೈಗಾರಿಕಾ ಘಟಕ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಅದು ಮುಂದೆ ಏನಾಯಿತೆಂದು ತಿಳಿಯದಾಯಿತು. ಕಪ್ಪತಗುಡ್ಡಲ್ಲಿ ಹೇರಳವಾದ ಔಷಧೀಯ ಸಸ್ಯಗಳು ದೊರೆಯುತ್ತವೆ. ಅಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಹಾಗೂ ಆಯುರ್ವೇದ ಔಷಧ ತಯಾರಿಕಾ ಘಟಕವನ್ನು ಸ್ಥಾಪಿಸಿದರೆ ತುಂಬಾ ಅನುಕೂಲವಾಗುತ್ತದೆ ಎನ್ನುವುದು ಇಲ್ಲಿಯ ಬಹುತೇಕ ಜನರ ಅಭಿಪ್ರಾಯ.

'ಪೋಸ್ಕೋ ಕಂಪನಿಯು ಇಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿತ್ತು. ಅಂದು ಜಿಲ್ಲೆಯ ವಿವಿಧ ಸ್ವಾಮಿಜಿಗಳು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಬೀದಿಗಿಳಿದು ಹೋರಾಟ ಮಾಡಿ ಪೋಸ್ಕೋ ಕಂಪನಿಯನ್ನು ಓಡಿಸಿದ್ದರು. ಈಗ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ಎಂದು ಹೇಳುವುದು ಯಾವ ನ್ಯಾಯ?’ ಎಂದು ಹೆಸರು ಹೇಳಲಿಚ್ಛಿಸದ ಕೈಗಾರಿಕೋದ್ಯಮಿಯೊಬ್ಬರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮೂಲ ಸೌಲಭ್ಯಗಳ ಕೊರತೆ
ಲಕ್ಷ್ಮೇಶ್ವರ:
ತಾಲ್ಲೂಕಿನಲ್ಲಿ ಹತ್ತು ಹಲವಾರು ಕೈಗಾರಿಕೆ ಇದ್ದು ಅವುಗಳು ಮೂಲಸೌಲಭ್ಯಗಳ ಕೊರತೆಯಿಂದ ನರಳುತ್ತಿವೆ.

ಪಟ್ಟಣದ ದೊಡ್ಡೂರು ರಸ್ತೆಗೆ ಹೊಂದಿಕೊಂಡಂತೆ ಕೈಗಾರಿಕಾ ಪ್ರದೇಶ ಇದೆ. ವಾಟರ್ ಪ್ಲಾಂಟ್, ರೆಡಿಮೇಡ್ ಉಡುಪುಗಳ ಘಟಕ, ಅಗರಬತ್ತಿ ತಯಾರಿಕೆ, ಸಾಬೂನು ತಯಾರಿಕೆ ಘಟಕ ಸೇರಿದಂತೆ ಹತ್ತಾರು ವಿಧದ ಕೈಗಾರಿಕೆಗಳು ಇದ್ದು ನೂರಾರು ಜನರು ದುಡಿಮೆ ಕಂಡುಕೊಂಡಿದ್ದಾರೆ.

ಆದರೆ, ಇಲ್ಲಿ ಮೂಲಸೌಲಭ್ಯಗಳ ಕೊರತೆ ಇದ್ದು, ಎರಡು ವರ್ಷಗಳ ಹಿಂದಷ್ಟೇ ನಿರ್ಮಿಸಿದ ರಸ್ತೆ ಕಿತ್ತು ಹಾಳಾಗಿದೆ. ವಿದ್ಯುತ್ ಕಂಬ ಇದ್ದರೂ ಲೈಟ್‍ಗಳನ್ನು ಹಾಕಿಲ್ಲ. ಇನ್ನು ಕೆಎಸ್‍ಎಸ್‍ಐಡಿಸಿ ಕೊಳವೆಬಾವಿ ಕೊರೆಯಿಸಿದೆ. ಆದರೆ ನೀರು ಕಡಿಮೆ ಇರುವುದರಿಂದ ಕೈಗಾರಿಕೆಗಳಿಗೆ ನೀರಿನ ಪೂರೈಕೆ ಆಗುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಉದ್ಯಮಿಯೊಬ್ಬರು ಹೇಳಿದರು.

ಇಷ್ಟೆಲ್ಲ ಸಮಸ್ಯೆಗಳ ನಡುವೆ ಉದ್ಯಮಿಗಳು ಕುಶಲ ಕಾರ್ಮಿಕರ ಕೊರತೆಯನ್ನೂ ಎದುರಿಸುತ್ತಿದ್ದಾರೆ. ಅದರಂತೆ ಕಾರ್ಮಿಕರೂ ಅನೇಕ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಉದ್ದಿಮೆದಾರರು ಲಾಭವನ್ನೇ ಮುಖ್ಯವನ್ನಾಗಿ ಮಾಡಿಕೊಂಡಿರುವುದರಿಂದ ಕಾರ್ಮಿಕರ ಬಗ್ಗೆ ಕಾಳಜಿ ಕಡಿಮೆ ಇದೆ.

‘ಫ್ಯಾಕ್ಟರಿಗಳಲ್ಲಿ ಸ್ವಚ್ಛತೆ ಇಲ್ಲ. ರಾಸಾಯನಿಕಗಳಿಂದ ರಕ್ಷಣೆ ಪಡೆಯಲು ಅಗತ್ಯವಾಗಿ ಬೇಕಾಗಿರುವ ಯಾವುದೇ ವ್ಯವಸ್ಥೆ ಇಲ್ಲ’ ಎಂದು ಹೆಸರು ಹೇಳದ ಕಾರ್ಮಿಕರು ಅಳಲು ತೋಡಿಕೊಂಡರು.

ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಿ
ಶಿರಹಟ್ಟಿ:
ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಶಿರಹಟ್ಟಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯ ಕೈಗಾರಿಕೆಗಳಿಲ್ಲ. ಇಲ್ಲಿನ ಮೂಲಸೌಲಭ್ಯಗಳನ್ನು ಹೆಚ್ಚಿಸಿ ತಾಲ್ಲೂಕಿನ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೈಗಾರಿಕೆಗಳ ಸ್ಥಾಪನೆಗೆ ಕ್ರಮವಹಿಸಬೇಕು ಎಂದು ಪಟ್ಟಣದ ಸಂತೋಷ್‌ ಕುರಿ, ಗುಲಾಬಷ್ಯಾ ಮಕಾನದಾರ, ಆನಂದ, ಮಲ್ಲಿಕಾರ್ಜುನ ಆಗ್ರಹಿಸಿದರು.

ಸಾಂಗ್ಲಿ ಸಂಸ್ಥಾನದಿಂದಲೇ ಶಿರಹಟ್ಟಿ ತಾಲ್ಲೂಕು ಕೇಂದ್ರವಾಗಿ ಪ್ರಸಿದ್ಧಿ ಪಡೆದಿದ್ದರೂ ಇವರೆಗೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಆದ್ದರಿಂದ, ಈ ಭಾಗದ ಜನರ ಮೂಲ ಉದ್ಯೋಗ ಕೃಷಿಯಾಗಿದ್ದು, ವಿದ್ಯಾವಂತ ಯುವಕರು ಗುಳೆ ಹೋಗುವುದು ಸಾಮಾನ್ಯವಾಗಿದೆ. ಆದ್ದರಿಂದ ತಾಲ್ಲೂಕು ಆಡಳಿತ ಮತ್ತು ಕ್ಷೇತ್ರದ ಶಾಸಕರು ಹೆಚ್ಚಿನ ಅನುದಾನ ಪಡೆದುಕೊಂಡು ಕೈಗಾರಿಕೆಗಳ ಸ್ಥಾಪನೆಯ ಜೊತೆಗೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

*

ಕೈಗಾರಿಕೋದ್ಯಮಿಗಳಿಂದ ನಿಯಮಿತವಾಗಿ ತೆರಿಗೆ ಸಂಗ್ರಹಿಸುವ ಸರ್ಕಾರ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಕ್ರಮವಹಿಸಬೇಕು. ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿಸಬೇಕು.
-ಶಿವಕುಮಾರ್‌ ಪಾಟೀಲ,ನರಸಾಪುರ ಇಂಡಸ್ಟ್ರಿಯಲ್‌ ಅಸೋಸಿಯೇಷನ್‌ ಅಧ್ಯಕ್ಷ

*

ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಎಲ್ಲ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ನಡೆಯುವಂತೆ ಕ್ರಮವಹಿಸಬೇಕು. ಕೈಗಾರಿಕೋದ್ಯಮಿಗಳು ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗುವ ಅವಕಾಶವೇ ಇರಬಾರದು.
-ಆನಂದ್‌ ಪೊತ್ನೀಸ್‌,ಗದಗ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ

*

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಚಂದ್ರಶೇಖರ ಭಜಂತ್ರಿ, ಕಾಶೀನಾಥ ಬಿಳಿಮಗ್ಗದ, ಖಲೀಲಅಹ್ಮದ ಶೇಖ, ನಾಗರಾಜ ಎಸ್‌.ಹಣಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT