ಮಂಗಳವಾರ, ಮಾರ್ಚ್ 21, 2023
27 °C

ಪಟ್ಟಾಧಿಕಾರ ಕಸಿಯಲು ಯಾರಿಗೂ ಸಾಧ್ಯವಿಲ್ಲ: ಸದಾಶಿವಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಶಿವಾನಂದ ಮಠದ ಕಿರಿಯ ಶ್ರೀಗಳನ್ನು ತೆಗೆದು ಹಾಕಲಾಗಿದೆ ಎಂದು ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಹಾಗೂ ಭಕ್ತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆದಿದೆ. ಆದರೆ, ಪಟ್ಟಾಧಿಕಾರ ಆದವರನ್ನು ತೆಗೆಯುವಂತಹ ಯಾವ ಪ್ರಕ್ರಿಯೆಯೂ ಮಠದಲ್ಲಿ ನಡೆದಿಲ್ಲ ಮತ್ತು ನನ್ನನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಶಿವಾನಂದ ಮಠದ ಕಿರಿಯಶ್ರೀ ಸದಾಶಿವಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಉತ್ತರಾಧಿಕಾರ ಪತ್ರ ರದ್ಧತಿಗಾಗಿ ಅವರು ನಡೆಸಿದ ಎಲ್ಲ ಮಾರ್ಗಗಳೂ ಕಾನೂನುಬಾಹಿರವಾಗಿವೆ. ರದ್ಧತಿ ಮಾಡುವುದಾಗಿ ಹೇಳುವ ಇವರು, ಕನಿಷ್ಠ ಪಕ್ಷ ಒಂದು ನೋಟಿಸ್‌ ಕೂಡ ಕೊಟ್ಟಿಲ್ಲ. ಹಳ್ಳಿ ಭಕ್ತರೆಲ್ಲರೂ ಬೆಂಬಲಿಸಿದ್ದಾರೆ ಎಂದು ಹೇಳುತ್ತಾರೆ. ಆದರೆ, ಅದು ಕೂಡ ಸುಳ್ಳು’ ಎಂದು ದೂರಿದರು.

‘ನಾನು, ಹಿರಿಯ ಶ್ರೀಗಳು, ಡಿ.ಆರ್‌.ಪಾಟೀಲರು ಸಹಿಮಾಡಿದ ನಂತರ ಉತ್ತರಾಧಿಕಾರ ಪತ್ರ ನೋಂದಣಿ ಆಗಿತ್ತು. ರದ್ದತಿ ಮಾಡುವಾಗ ಮಾತ್ರ ಗುರುಗಳು ಒಬ್ಬರೇ ಹೋದರು. ಈ ರೀತಿ ಮಾಡಿದ್ದು ಕಾನೂನು ಪ್ರಕಾರ ಸರಿಯೇ? ತಪ್ಪೇ? ಎಂಬ ನಿರ್ಣಯ ನ್ಯಾಯಾಲಯದಲ್ಲಿ ಆಗಿಲ್ಲ’ ಎಂದು ಹೇಳಿದರು.

‘ಈ ಹಿಂದೆ ನಮ್ಮ ಮಠದಲ್ಲಿ ಠರಾವು ಮಾಡುವ ಪದ್ಧತಿಯೇ ಇರಲಿಲ್ಲ. ಆದರೆ, ಈ ಪದ್ಧತಿ ಯಾವಾಗಿನಿಂದ ಶುರುವಾಯಿತು? ಜತೆಗೆ ಇವರು ಮಾಡಿದ ಯಾವ ಠರಾವುಗಳಲ್ಲೂ ಏಕರೂಪತೆ ಇಲ್ಲ. ಉತ್ತರಾಧಿಕಾರತ್ವ ಪತ್ರ ರದ್ದು ಮಾಡುವುದಾಗಿ ಹೇಳಿ ಬರೆದ ಠರಾವಿನಲ್ಲಿ ಹಿರಿಯ ಶ್ರೀಗಳ ಸಹಿಯೇ ಇಲ್ಲ. ಅದರಲ್ಲೂ ಭಕ್ತರ ಸಹಿಯೇ ಇದೆ. ಈ ರೀತಿಯಾಗಿ ನ್ಯಾಯಾಲಯಕ್ಕೆ ಎಷ್ಟು ಸುಳ್ಳು ದಾಖಲೆಗಳನ್ನು ಸಲ್ಲಿಸಬಹುದೋ ಅಷ್ಟು ಸಲ್ಲಿಸಿದ್ದಾರೆ’ ಎಂದು ದೂರಿದರು.

‘ಸ್ವಾರ್ಥ ಸಾಧನೆಗಾಗಿ ಊರಿನ ಒಬ್ಬರು ಇಬ್ಬರನ್ನು ಕರೆದು ಸಹಿ ಹಾಕಿಸಿಕೊಂಡು ಈ ರೀತಿ ಮಾಡಿದ್ದಾರೆ. ಹಿರಿಯ ಶ್ರೀಗಳಿಗೆ ವೃದ್ಧಾಪ್ಯ, ಉಳಿದ ನಾಲ್ಕು ಮಂದಿಗೆ ಸ್ವಾರ್ಥ ಸಾಧನೆ ಎಂಬಂತಾಗಿದೆ. ಈ ಮಠಕ್ಕೆ ಹೊಸ ಭಕ್ತರ ಪ್ರವಾಹ ನಿರಂತರವಾಗಿ ಬರಬೇಕು ಎಂಬ ನಿಟ್ಟಿನಲ್ಲಿ ನಾವು ಕೆಲಸ ಮಾಡಲು ಶುರುಮಾಡಿದಾಗ ಸ್ಥಾಪಿತ ಹಿತಾಸಕ್ತಿಗಳಿಗೆ ಕಿರಿಕಿರಿ ಶುರುವಾಯಿತು’ ಎಂದರು.

‘ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ಚೇರ್ಮನ್‌ ಆಗಿ ಎಸ್‌.ಬಿ.ಸಂಶಿ ಇದ್ದರು. ಅವರ ಮಕ್ಕಳು ಮತ್ತು ಉಳಿದ ನಾಲ್ಕೈದು ಮಂದಿ ಸೇರಿ ಇಡೀ ಸಂಸ್ಥೆ ಮಠಕ್ಕೆ ಸೇರಿದ್ದಲ್ಲ ಎಂಬ ದಾಖಲಾತಿಗಳನ್ನು ರೂಪಿಸಿದ್ದರು. ಅದಕ್ಕೆ ಹಿರಿಯ ಶ್ರೀಗಳೂ ಸಹಿ ಮಾಡಿದ್ದರು. ಇದನ್ನು ಪ್ರಶ್ನಿಸಿದಾಗ ಉಡಾಫೆಯಾಗಿ ಉತ್ತರಿಸಿದರು. ಆದರೆ, ನಾವು ಹೋರಾಟ ಮಾಡಿ ₹200 ಕೋಟಿ ಮೌಲ್ಯದ ಸಂಸ್ಥೆಯನ್ನು ಉಳಿಸಿಕೊಂಡೆವು. ಈ ಬಿಕ್ಕಟ್ಟಿಗೆ ಮೂಲ ಕಾರಣ ಇದೇ ಆಗಿದೆ. ಬಳಿಕ, ನಮ್ಮ ವಿರುದ್ಧ ಏನಾದರೂ ಮಾಡಬೇಕು ಅಂತ ಕಾಯುತ್ತಿದ್ದರು. ಹಿರಿಯ ಶ್ರೀಗಳು ಅವರಿಗೆ ಸುಲಭವಾಗಿ ಆಹಾರವಾದರು. ಆದರೆ, ನಮ್ಮ ವಿರುದ್ಧ ನಡೆಸಿರುವ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ನಮ್ಮದು ಅದ್ವೈತ ಸಂಪ್ರದಾಯದ ಮಠ. ಬಸವಾದಿ ಪ್ರಮಥರು ನಡೆದ ಹಾದಿ ಜತೆಗೆ ಆಚಾರ್ಯ ಶಂಕರರು ಬೋಧಿಸಿದ ತತ್ವಗಳ ಸಮನ್ವಯದಿಂದ ಮಠ ನಡೆಯಬೇಕು. ಮಠದ ಸಂಪ್ರದಾಯ, ಪರಂಪರೆಗೆ ಚ್ಯುತಿ ಬರುವಂತೆ ಎಂದಿಗೂ ನಡೆದುಕೊಂಡಿಲ್ಲ ಎಂದು ಹೇಳಿದರು.

ಹಿರಿಯ ಶ್ರೀಗಳಿಗೆ ಗೌರವ ಕೊಡುವುದಿಲ್ಲ ಎಂಬ ಆರೋಪ ಸುಳ್ಳು. ಅವರು ಮಾತುಗಳು ನನಗೆ ಸಹನೆ ಆಗದ ಕಾರಣ ಮೌನವಾಗಿ ಉಳಿದಿದ್ದು ಸತ್ಯ. ಹಾಗಂತ ಅವರಿಗೆ ಅಗೌರವ ಬರುವ ರೀತಿ ಎಂದಿಗೂ ನಡೆದುಕೊಂಡಿಲ್ಲ. ಒಬ್ಬ ವ್ಯಕ್ತಿಯನ್ನು ಸಿಂಹಾಸನದ ಮೇಲೆ ಕೂರಿಸಿದ ಮೇಲೆ ಎಲ್ಲ ಜವಾಬ್ದಾರಿಯನ್ನು ಕೊಟ್ಟಂತೆ. ಹಾಗಾಗಿ, ನಾವು ಮಾಡಿದ ಕಮಿಟಿಯೇ ಅಧಿಕೃತವಾದುದು. ಭಕ್ತರಿಗೆ ಗೊಂದಲ ಆಗದಂತೆ ಜಾತ್ರಾ ಮಹೋತ್ಸವ ನಡೆಸಲಾಗುವುದು. ಜತೆಗೆ ಈ ಬಾರಿಯ ಜಾತ್ರೆಯಲ್ಲಿ ಅಡ್ಡ ಪಲ್ಲಕ್ಕಿಯನ್ನು ನಾನೇ ಹತ್ತುವೆ’ ಎಂದು ಹೇಳಿದರು.

ಮತ್ತೇ ಭುಗಿಲೆದ್ದ ವಿವಾದ

ನಗರದ ಶಿವಾನಂದ ಬೃಹನ್ಮಠದ ಉತ್ತರಾಧಿಕಾರಿ ವಿವಾದ ಮತ್ತೇ ಭುಗಿಲೆದ್ದಿದ್ದು, ಗುರುವಾರ ಉಭಯ ಶ್ರೀಗಳ ಎದುರಿನಲ್ಲೇ ಎರಡೂ ಬಣಗಳ ಭಕ್ತರು ವಾಗ್ವಾದ ನಡೆಸಿದರು.
ಫೆಬ್ರುವರಿಯಲ್ಲಿ ನಡೆಯಲಿರುವ ಶಿವಾನಂದ ಮಠದ ಜಾತ್ರಾ ಮಹೋತ್ಸವದ ಸಂಬಂಧ ವಿವಾದ ಹುಟ್ಟಿಕೊಂಡಿದ್ದು, ಉಭಯ ಶ್ರೀಗಳೂ ಒಂದೊಂದು ಜಾತ್ರಾ ಮಹೋತ್ಸವ ಕಮಿಟಿ ರಚಿಸಿದ್ದಾರೆ. ಮತ್ತೇ ಇಬ್ಬರೂ ನಾವು ರಚಿಸಿರುವ ಕಮಿಟಿಯೇ ಅಧಿಕೃತ ಎಂದು ಹೇಳಿದ್ದಾರೆ. ಅಲ್ಲದೆ, ಈ ವರ್ಷದ ಜಾತ್ರಾ ಮಹೋತ್ಸವದ ಪಲ್ಲಕ್ಕಿಯನ್ನು ತಾವೇ ಹತ್ತುವುದಾಗಿ ಉಭಯತ್ರಯರು ಘೋಷಿಸಿದ್ದಾರೆ.
ಹಿರಿಯ ಮತ್ತು ಕಿರಿಯ ಶ್ರೀಗಳ ನಡುವಿನ ಜಟಾಪಟಿ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಲಿದೆಯೇ ಎಂಬ ಆತಂಕ ಮಠದ ಭಕ್ತರನ್ನು ಕಾಡುತ್ತಿದೆ.

2023ನೇ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು

ಎಸ್‌.ಕೆ.ಮ್ಯಾಗೇರಿ (ಗೌರವಾಧ್ಯಕ್ಷ), ಆದಪ್ಪ ಗೌಡ (ಅಧ್ಯಕ್ಷ), ಜಿ.ಬಿ.ಪಾಟೀಲ, ಮೋಹನ ಮಾಳಶೆಟ್ಟಿ, ಶಿವಣ್ಣ ಮುಳಗುಂದ, ರಾಜು ಕುರಡಗಿ (ಉಪಾಧ್ಯಕ್ಷರು), ಸದಾಶಿವ ಮದರಿಮಠ (ಪ್ರಧಾನ ಕಾರ್ಯದರ್ಶಿ), ಹನುಮರೆಡ್ಡಿ ಚಿ.ಹುಚ್ಚಣ್ಣವರ, ಚಂದ್ರಕಾಂತ, ವಿಜಯಕುಮಾರ ಗಡ್ಡಿ, ಶ್ರೀಪತಿ ಉಡುಪಿ (ಕಾರ್ಯದರ್ಶಿಗಳು), ಬಿ.ಎ.ಹಾಲಕೆರೆ (ಖಜಾಂಚಿ) ಎಂದು ಕಿರಿಯ ಶ್ರೀಗಳು ಘೋಷಿಸಿದರು.

‘ಹಿರಿಯ ಶ್ರೀಗಳನ್ನು ಸೇರಿಸಿಕೊಂಡೇ ಶಿವಾನಂದ ಮಠದ ಜಾತ್ರೆ ನಡೆಸುತ್ತೇವೆ. ಮೂರು ದಿನಗಳ ಕಾಲ ಸದ್ಧರ್ಮ ಪರಿಷತ್‌, ನಾಲ್ಕನೇ ದಿನ ಶಿವಯೋಗ ಹಾಗೂ ಐದನೇ ದಿನ ರಥೋತ್ಸವ ಮತ್ತು ಪಾಲಕಿ ಉತ್ಸವ, ರುದ್ರಾಭಿಷೇಕ ನಡೆಯಲಿದೆ. ಸಿದ್ಧೇಶ್ವರ ಶ್ರೀಗಳ ಗುರುವಂದನೆ ಹಾಗೂ ಅವರ ಕೃತಿಗಳ ಲೋಕಾರ್ಪಣೆಯೂ ನಡೆಯಲಿದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು