ಗುರುವಾರ , ಡಿಸೆಂಬರ್ 12, 2019
26 °C
ಎಪಿಎಂಸಿಯಲ್ಲಿ ರಜೆ ದಿನಗಳಲ್ಲೂ ಈರುಳ್ಳಿ ಖರೀದಿಗೆ ಸಿದ್ಧತೆ

ಗದಗ | ಬೆಲೆ ಏರಿಕೆ: ಈರುಳ್ಳಿಗೆ ರೈತರ ಕಾವಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ / ನರೇಗಲ್: ಈರುಳ್ಳಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ, ಈಗ ಕಳ್ಳರ ಕಣ್ಣು ಇದರತ್ತ ನೆಟ್ಟಿದೆ. ಜಮೀನಿನಲ್ಲಿ ಬೆಳೆದು ನಿಂತ ಈರುಳ್ಳಿಯನ್ನು ರಾತ್ರಿ ವೇಳೆ ಕಳ್ಳತನ ಮಾಡಲು ಪ್ರಯತ್ನಿಸಿದ ಘಟನೆ ವಾರದ ಹಿಂದೆ ಹೋಬಳಿ ವ್ಯಾಪ್ತಿಯ ದ್ಯಾಮವ್ವನ ಕೆರೆ ರಸ್ತೆ ಸಮೀಪದ ಗುರುಬಸಯ್ಯ ಕಳಕಯ್ಯ ಪ್ರಭುಸ್ವಾಮಿಮಠ ಎಂಬುವರ ಜಮೀನಿನಲ್ಲಿ ನಡೆದಿದೆ.

ಗುರುಬಸಯ್ಯ ಅವರು ಒಂದೂವರೆ ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಬೆಳೆ ಇನ್ನೇನು ಕಟಾವಿಗೆ ಬಂದಿತ್ತು. ವಾರದ ಹಿಂದೆ ರಾತ್ರಿ ವೇಳೆ ಕಳ್ಳರ ಗುಂಪು ಅವರ ಜಮೀನಿಗೆ ನುಗ್ಗಿ 30ರಿಂದ 40 ಚೀಲದಷ್ಟು ಈರುಳ್ಳಿಯನ್ನು ಕಿತ್ತುಕೊಂಡು ಹೋಗಿದೆ. ಈಗಿನ ಮಾರುಕಟ್ಟೆ ದರದಂತೆ ಅಂದಾಜು ₹1.5 ಲಕ್ಷದ ಮೌಲ್ಯದ ಈರುಳ್ಳಿ ಕಳ್ಳರ ಪಾಲಾಗಿದೆ.

‘ಈ ಜಮೀನು ರಸ್ತೆಗೆ ಹೊಂದಿಕೊಂಡಿದೆ. ಹೀಗಾಗಿ ಜಮೀನು ಸಮೀಪಕ್ಕೆ ಗಾಡಿ ತಂದಿರುವ ಕಳ್ಳರು ಉಳ್ಳಾಗಡ್ಡಿ ಮಾತ್ರವಲ್ಲ, 25 ಕೆ.ಜಿಯಷ್ಟು ಮೆಣಸಿನಕಾಯಿಯನ್ನೂ ಕಳವು ಮಾಡಿದ್ದಾರೆ’ ಎಂದು ಗ್ರಾಮಸ್ಥರು ಹೇಳಿದರು.

‘ಉಳ್ಳಾಗಡ್ಡಿ ಕೀಳಲು ಆಳುಗಳು ಸಿಗದ ಕಾರಣ ವಿಳಂಬವಾಗಿತ್ತು. ಕಳ್ಳತನ ನಡೆಯುವ ಹಿಂದಿನ ದಿನವೂ ಜಮೀನಿಗೆ ಹೋಗಿ ಬಂದಿದ್ದೆ. ಆದರೆ, ಮರುದಿನ ಹೋದಾಗ ಈರುಳ್ಳಿ ಕಳ್ಳತನವಾದ ಬಗ್ಗೆ ತಿಳಿಯಿತು. ಅಂದಾಜು ₹ 1.5 ಲಕ್ಷ ಆದಾಯ ನಷ್ಟವಾಗಿದೆ. ಈ ಕುರಿತು ದೂರು ದಾಖಲಿಸುವುದಿಲ್ಲ. ಕಳ್ಳರಿಗೆ ಶಿಕ್ಷೆಯಾಗಲಿ ಎಂದು ಧರ್ಮಸ್ಥಳ ಮಂಜುನಾಥಸ್ವಾಮಿಗೆ ಹರಕೆ ಹೊತ್ತಿದ್ದೇನೆ. ಆ ಭಗವಂತನೇ  ಕಳ್ಳರನ್ನು ನೋಡಿಕೊಳ್ಳಲಿ’ ಎಂದು ಗುರುಬಸಯ್ಯ ಹೇಳಿದರು.

ಈ ಘಟನೆಯ ಬೆನ್ನಲ್ಲೇ, ಹೋಬಳಿ ವ್ಯಾಪ್ತಿಯಲ್ಲಿ ರೈತರು ಅಲಲ್ಲಿ ಈರುಳ್ಳಿ ಬೆಳೆಗೆ ಕಾವಲು ಕಾಯುತ್ತಿದ್ದಾರೆ. ಜಮೀನಿನಲ್ಲಿ ಕಟಾವು ಮಾಡಿದ ಈರುಳ್ಳಿಯನ್ನು ಅಲ್ಲಿ ಒಣಗಲು ಬಿಡದೆ, ತಕ್ಷಣವೇ ಗ್ರಾಮಕ್ಕೆ ತೆಗೆದುಕೊಂಡು ಬಂದು ಗ್ರಾಮದ ಬಯಲು ಜಾಗದಲ್ಲಿ, ಮನೆಯ ಮುಂದಿನ ಅಂಗಳದಲ್ಲಿ, ಹಿತ್ತಲಲ್ಲಿ ಒಣಗಲು ಹಾಕುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು