ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಅನಾಥವಾದ ಚಾವಡಿ; ಕಂದಾಯ ಇಲಾಖೆ ನಿರ್ಲಕ್ಷ್ಯ

Published 2 ಏಪ್ರಿಲ್ 2024, 4:26 IST
Last Updated 2 ಏಪ್ರಿಲ್ 2024, 4:26 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದ ಹೃದಯಭಾಗದ ಬಜಾರದಲ್ಲಿರುವ ಕಂದಾಯ ಇಲಾಖೆಗೆ ಸೇರಿದ ಚಾವಡಿ ಸಂಪೂರ್ಣ ಹಾಳಾಗಿದೆ. ಈ ಚಾವಡಿಯಲ್ಲಿ ಲಕ್ಷ್ಮೇಶ್ವರದ ಬಸ್ತಿಬಣ, ದೇಸಾಯಿಬಣ, ಪೇಠಬಣ, ಹಿರೇಬಣ ಮತ್ತು ಹುಲಗೇರಿಬಣಗಳ ಗೌಡರು ಗೌಡಿಕೆ ಮಾಡುತ್ತಿದ್ದರು. ಇದಕ್ಕೆ ಅಂದಾಜು 200 ವರ್ಷಗಳ ಇತಿಹಾಸವೂ ಇದೆ. ಮಿರಜ ಸಂಸ್ಥಾನಿಕರ ಕಾಲದಲ್ಲಿ ಇದನ್ನು ಕಟ್ಟಿಸಲಾಗಿತ್ತು. ಪ್ರತಿದಿನ ಐದೂ ಬಣಗಳ ಗೌಡರು ಮತ್ತು ಅವರ ಕುಲಕರ್ಣಿಗಳು ಚಾವಡಿಗೆ ಬಂದು ಕೆಲಸ ಮಾಡುತ್ತಿದ್ದಾರೆ.

ಲಕ್ಷ್ಮೇಶ್ವರದ ಜನತೆಗೂ ಮತ್ತು ಈ ಚಾವಡಿಗೆ ಅವಿನಾಭಾವ ಸಂಬಂಧ ಇದೆ. ಪ್ರತಿವರ್ಷ ಈ ಚವಡಿಯಲ್ಲಿ ಗಣಪತಿ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗುತ್ತಿತ್ತು. ಆಗಿನಿಂದ ಚಾವಡಿ ಕುಸಿಯುವವರೆಗೂ ಅಲ್ಲಿ ಮೂರ್ತಿಗಳ ಮಾರಾಟ ನಡೆಯುತ್ತಿತ್ತು.

ಗೌಡಕಿ ಕಾಲ ಮುಗಿದ ಮೇಲೆ ಇದು ಕಂದಾಯ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸುವ ಕಚೇರಿಯಾಗಿ ಬದಲಾಯಿತು. ಅಂದಾಜು ನಾಲ್ಕು ದಶಕಗಳವರೆಗೆ ಇಲಾಖೆ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸಿ ಜನರ ಸೇವೆ ಮಾಡಿದ್ದಾರೆ. ಆದರೆ ಕಳೆದ ಒಂದು ವರ್ಷದ ಹಿಂದೆ ಚಾವಡಿ ಸಂಪೂರ್ಣ ಕುಸಿದು ಬಿದ್ದಿದ್ದು ಅನಾಥವಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಅವರ ಸಹಾಯಕರು ಪುರಸಭೆ ವಾಣಿಜ್ಯ ಮಳಿಗೆಯ ಕೊಠಡಿಗೆ ಹೋಗಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿರುವ ಈ ಚಾವಡಿ ಜಾಗ ವಿಶಾಲವಾಗಿದೆ. ಇದು ಬಿದ್ದ ಮೇಲೆ ಇಲಾಖೆಯ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಜಾಗೆ ಇಲ್ಲದ ಕಾರಣ ಪಟ್ಟಣದ ಬೇರೆ ಬೇರೆ ಕಡೆ ಜಾಗೆ ಹುಡುಕಿಕೊಂಡು ಹೋಗಿದ್ದಾರೆ. ಆದರೆ ಬಿದ್ದ ಕಟ್ಟಡವನ್ನು ಕಟ್ಟಿಸಿದರೆ ಇಡೀ ಕಂದಾಯ ಇಲಾಖೆ ಒಂದೇ ಕಡೆ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಜನರಿಗೂ ಅನುಕೂಲ ಆಗುತ್ತದೆ. ಆದರೆ ಈ ಕಡೆ ಕಂದಾಯ ಇಲಾಖೆ ಗಮನ ಹರಿಸಿದಂತೆ ಕಾಣುತ್ತಿಲ್ಲ.

‘ಕಂದಾಯ ಇಲಾಖೆಯ ಎಲ್ಲ ವಿಭಾಗಗಳು ಒಂದೇ ಕಡೆ ಕಾರ್ಯನಿರ್ವಹಿಸಿದರೆ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ. ಬಿದ್ದ ಚಾವಡಿಯನ್ನು ಕಟ್ಟಿಸಿದರೆ ಇಲ್ಲಿ ಎಲ್ಲ ಕೆಲಸಗಳು ನಡೆಯುತ್ತವೆ. ಚಾವಡಿಯನ್ನು ಪುನಃ ನಿರ್ಮಿಸಲು ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಮುಖಂಡ ಪೂರ್ಣಾಜಿ ಖರಾಟೆ ಆಗ್ರಹಿಸಿದರು.

ಚಾವಡಿ ಇರುವ ಜಾಗೆಯಲ್ಲಿ ಹೊಸ ಕಟ್ಟಡ ಕಟ್ಟಿಸುವ ವಿಷಯವನ್ನು ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗನೇ ಅಲ್ಲಿ ಹೊಸ ಕಟ್ಟಡ ಕಟ್ಟಿಸಲು ಪ್ರಯತ್ನ ಮಾಡಲಾಗುವುದು

–ವಾಸುದೇವಸ್ವಾಮಿ ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT