ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನಾಳೆ: ನೀಲಮ್ಮ ಬೋಳನವರ

Published 3 ಮೇ 2024, 16:12 IST
Last Updated 3 ಮೇ 2024, 16:12 IST
ಅಕ್ಷರ ಗಾತ್ರ

ಗದಗ: ‘ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಗದಗ ನಗರಕ್ಕೆ ಬರಲಿದ್ದಾರೆ’ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೀಲಮ್ಮ ಬೋಳನವರ ತಿಳಿಸಿದರು.

‘ಶನಿವಾರ ಸಂಜೆ 5ಕ್ಕೆ ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಅಂದಾಜು 40 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಅದರಲ್ಲಿ 25 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಾರೆ’ ಎಂದು ಶುಕ್ರವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಇದೇ ಮೊದಲಬಾರಿಗೆ ಗದಗ ನಗರಕ್ಕೆ ಆಗಮಿಸುತ್ತಿರುವ ಪ್ರಿಯಾಂಕಾ ವಾದ್ರಾ ಅವರನ್ನು ನಾವೆಲ್ಲರೂ ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆಸಿದ್ದೇವೆ’ ಎಂದೂ ತಿಳಿಸಿದರು.

‘2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಕಟಿಸಿದ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳಿಗೆ ಪ್ರಿಯಾಂಕಾ ಅವರೇ ಸ್ಫೂರ್ತಿ. ಅವರ ಪ್ರೇರಣೆಯಿಂದ ಅನುಷ್ಟಾನಗೊಂಡ ಈ ಎರಡೂ ಯೋಜನೆಗಳು ಮಹಿಳೆಯರಿಗೆ ಭೀಮ ಬಲ ತುಂಬಿವೆ’ ಎಂದು ಹೇಳಿದರು.

‘ಅದೇರೀತಿಯಾಗಿ, ಈ ಬಾರಿ ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಕೂಡ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ. ಮಹಾಲಕ್ಷ್ಮಿ ಯೋಜನೆ ಅನುಷ್ಟಾನಗೊಳಿಸಿ ಮಹಿಳೆಯರಿಗೆ ವಾರ್ಷಿಕ ₹1 ಲಕ್ಷ ನೀಡುವ ಮೂಲಕ ಮತ್ತಷ್ಟು ಬಲ ತುಂಬಲಿದೆ’ ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿದೆ. ಹೇಳಿದ್ದನ್ನು ಅನುಷ್ಠಾನ ಮಾಡುತ್ತಿರುವುದನ್ನು ನೋಡಿ ವಿರೋಧ ಪಕ್ಷ ಬಿಜೆಪಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.

‘ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ನಾಯಕಿ ಉಮಾಶ್ರೀ ಕೂಡ ಪಾಲ್ಗೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ ಉಪಸ್ಥಿತರಿರುವರು’ ಎಂದು ತಿಳಿಸಿದರು.

ಗದಗ-ಬೆಟಗೇರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಅಕ್ಕಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿಗಳಾದ ಮೀನಾಕ್ಷಿ ಬೆನಕಣ್ಣವರ, ಕುಸುಮಾ ಬೆಳಗಟ್ಟಿ, ಸೀತಾ ಬಸಾಪೂರ, ಚಂಪಾವತಿ ಗುಳೇದ, ನಗರಸಭೆ ಸದಸ್ಯರಾದ ಪೂರ್ಣಿಮಾ ಬರದ್ವಾಡ, ಪರ್ವಿನಾಬಾನು ಮುಲ್ಲಾ, ಲಕ್ಷ್ಮಿ ಸಿದ್ದಮ್ಮನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT