ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಾವಣೆಗಳಿಗೆ ಮೂಲಸೌಲಭ್ಯ ಕಲ್ಪಿಸಿ: ಶ್ರೀರಾಮಸೇನೆ ಸಂಚಾಲಕ ರಾಜು ಖಾನಪ್ಪನವರ

Last Updated 18 ಆಗಸ್ಟ್ 2021, 16:20 IST
ಅಕ್ಷರ ಗಾತ್ರ

ಗದಗ: ‘ಗದಗ ಬೆಟಗೇರಿ ನಗರಸಭೆ ನಗರದ ವಿವಿಧ ಬಡವಾಣೆಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಶ್ರೀರಾಮಸೇನೆ ಧಾರವಾಡ ವಲಯ ಸಂಚಾಲಕ ರಾಜು ಖಾನಪ್ಪನವರ ಆಗ್ರಹಿಸಿದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನಗರದಲ್ಲಿನ ವಿವಿಧ ಕಾಲೊನಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಇಲ್ಲ. ಒಳಚರಂಡಿ ವ್ಯವಸ್ಥೆಯ ಸೂಕ್ತ ನಿರ್ವಹಣೆ ಇಲ್ಲದೇ ಕೆಲವೆಡೆ ಚರಂಡಿ ನೀರೆಲ್ಲವೂ ರಸ್ತೆಯಲ್ಲಿ ಹರಿಯುತ್ತದೆ. ನಿರಂತರ ನೀರು ಪೂರೈಕೆ ಯೋಜನೆ ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಪೈಪ್‍ಲೈನ್‍ ಅಳವಡಿಸಲಷ್ಟೇ ಸೀಮಿತವಾಗಿದೆ’ ಎಂದು ದೂರಿದರು.

‘ನಗರದ ಮಾರುಕಟ್ಟೆ ಪ್ರದೇಶ, ಜನನಿಬಿಡ ಪ್ರದೇಶಗಳು ಸೇರಿದಂತೆ ಹಲವೆಡೆ ರಸ್ತೆ ವಿಸ್ತರಣೆ, ಅಭಿವೃದ್ಧಿ ನೆಪದಲ್ಲಿ ತೆರವುಗೊಳಿಸಿದ ಮೂತ್ರಾಲಯಗಳನ್ನು ಮತ್ತೆ ಕಟ್ಟಿಸಬೇಕು. ಸಾರ್ವಜನಿಕ ಶೌಚಾಲಯಗಳು ಇಲ್ಲದೇ ಇರುವುದರಿಂದ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವವರಿಗೆ ತೀವ್ರ ತೊಂದರೆ ಎದುರಾಗಿದೆ’ ಎಂದು ಹೇಳಿದರು.

‘15 ದಿನಗಳ ಒಳಗಾಗಿ ಜಿಲ್ಲಾಡಳಿತ ಮೂತ್ರಾಲಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಅವಳಿ ನಗರದ ಸಾರ್ವಜನಿಕರೊಂದಿಗೆ ನಗರಸಭೆ ಪೌರಾಯುಕ್ತರ ಕಚೇರಿ ಆವರಣದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಗಂಗಿಮಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮೇಲು ಸೇತುವೆ ಕಾಮಗಾರಿ ಮುಗಿದು ಮೂರು ವರ್ಷಗಳಾಗಿವೆ. ಆದರೂ ಎರಡೂ ಬದಿ ಸರ್ವಿಸ್ ರಸ್ತೆ ನಿರ್ಮಿಸಿಲ್ಲ. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅಕ್ರಮ ನಡೆಸಿರುವ ಅನುಮಾನ ಇದೆ. ನಿರ್ಮಾಣ ಹಂತದಲ್ಲಿರುವ ಆಶ್ರಯ ಮನೆಗಳ ಹಂಚಿಕೆ ಪಾರದರ್ಶಕವಾಗಿಸಲು ಜಿಲ್ಲಾಧಿಕಾರಿ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

‘ಗಂಗಿಮಡಿ ಎರಡನೇ ಹಂತದಲ್ಲಿ 200 ವಸತಿರಹಿತರಿಗೆ ನಿವೇಶನ ಹಂಚಿಕೆ ಮಾಡಿದ್ದರಿಂದ ಸುಮಾರು 70 ಕುಟುಂಬಗಳು ಅಲ್ಲಿ ವಾಸ ಇವೆ. ಆದರೆ, ಅಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಅಲ್ಲಿನ ನಿವಾಸಿಗಳು ಖಾಸಗಿ ನೀರಿನ ಟ್ಯಾಂಕರ್ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಅಲ್ಲಿನ ರಸ್ತೆಗಳು ಕೆಸರು ಗದ್ದೆಯಾಗುತ್ತವೆ’ ಎಂದು ಕಿಡಿಕಾರಿದರು.

ಗಣೇಶ ಸತ್ಯಪ್ಪನವರ, ನಾಗರಾಜ ಪವಾರ, ಗಂಗಾಧರ ಹೂಗಾರ, ಶಿವಯೋಗಿ ಹಿರೇಮಠ, ನಾಗಪ್ಪ ಓಬಾಜಿ, ಚಂದ್ರಶೇಖರ ತಡಹಾಳ,ಕುಮಾರ ಜಾಧವ, ಶಶಿ ಮಲ್ಲಣ್ಣವರ, ಗಣಪತಸಾ ಬದಿ ಇದ್ದರು.

ಗದುಗಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣವಿದೆ. ಆದ್ದರಿಂದ, ಗದಗ ಬೆಟಗೇರಿ ನಗರಸಭೆ ಚುನಾವಣೆ ವೇಳೆ 35 ವಾರ್ಡ್‍ಗಳಲ್ಲೂ ಶ್ರೀರಾಮಸೇನೆ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ
ರಾಜು ಖಾನಪ್ಪನವರ, ಶ್ರೀರಾಮಸೇನೆ ಧಾರವಾಡ ವಲಯ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT