ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ಷರದವ್ವ ಫುಲೆ ಮಾರ್ಗದಲ್ಲಿ ನಡೆಯಿರಿ’

ಫುಲೆ ಗೌರವ, ಫುಲೆ ಮಾರ್ಗಿ ಪ್ರಶಸ್ತಿ ಪ್ರದಾನ, ನಿವೃತ್ತ ಪೌರಕಾರ್ಮಿಕ ರಾಮಗಿರಿಗೆ ಸನ್ಮಾನ
Last Updated 4 ಜನವರಿ 2022, 5:51 IST
ಅಕ್ಷರ ಗಾತ್ರ

ಗದಗ: ‘ಸ್ತ್ರೀಯರು, ಶೂದ್ರರು, ದಲಿತ ಸಮಾಜದ ಜನರ ಶೈಕ್ಷಣಿಕ ಹಕ್ಕಿಗಾಗಿ ಹೋರಾಡಿದವರು ಸಾವಿತ್ರಿಬಾ ಫುಲೆ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಓದುವ ಹಕ್ಕು ಲಭಿಸಿದ್ದರೆ ಅದಕ್ಕೆ ಮೂಲ ಕಾರಣ ಫುಲೆ’ ಎಂದು ವಕೀಲ ಕ್ಲಿಪ್ಟನ್‌ ರೊಜಾರಿಯೋ ಹೇಳಿದರು.

ಸಂವಿಧಾನ ಸಂರಕ್ಷಣಾ ವೇದಿಕೆ, ಲಡಾಯಿ ಪ್ರಕಾಶನ, ದಲಿತ ಕಲಾ ಮಂಡಳಿ ಮತ್ತು ಗದಗ ಪೌರಕಾರ್ಮಿಕರ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ನಡೆದ ಸಾವಿತ್ರಿಬಾ ಫುಲೆ ಜಯಂತ್ಯುತ್ಸವ ಹಾಗೂ ಫುಲೆ ಗೌರವ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಅಧಿಕಾರಿಶಾಹಿ ವರ್ಗಕ್ಕೆ ನಮ್ಮ ಸಂವಿಧಾನ ಬೇಕಿಲ್ಲವಾಗಿದೆ. ಸಮ ಸಮಾಜ ನಿರ್ಮಾಣ ರಾಜಕಾರಣಿಗಳ ಆದ್ಯತೆಯಲ್ಲ. ಜನ ಮತ್ತು ದೇಶವನ್ನು ಜಾತಿ, ಧರ್ಮ ಆಧಾರಿತವಾಗಿ ವಿಭಜನೆ ಮಾಡುವುದೇ ಅವರ ಉದ್ದೇಶ’ ಎಂದು ದೂರಿದರು.

‘ಈ ಹಿಂದೆ ಫುಲೆ ಮನು ಸಂಸ್ಕೃತಿ ವಿರುದ್ಧ ಹೋರಾಡಿದರು. ಆದರೆ, ಈಗಿನ ಪರಿಸ್ಥಿತಿ ಹಿಂದಿನಂತೆಯೇ ಆಗಿದ್ದು, ನಾವೆಲ್ಲರೂ ಮತ್ತೆ ಅದೇ ಜಾಗಕ್ಕೆ ಬಂದು ನಿಂತಿದ್ದೇವೆ. ಅವರು ಎದುರಿಸಿದ ಸವಾಲುಗಳು ಈಗ ಇನ್ನಷ್ಟು ಕ್ರೂರವಾಗಿ ತಲೆ ಎತ್ತಿವೆ. ಫುಲೆ ಹೇಳಿದಂತೆ ಜ್ಞಾನವೇ ಶಕ್ತಿ. ಮನುವಾದ ಸೋಲಿಸಲು ಫುಲೆ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು’ ಎಂದು
ಹೇಳಿದರು.

‘ಫುಲೆ ಮಾರ್ಗಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲ್ಪಿತಾರಾಣಿ, ‘ಮಾನಸಿಕ ಗುಲಾಮಗಿರಿ ಅನುಭವಿಸುವುದು ಅತ್ಯಂತ ಹೀನ ಸ್ಥಿತಿ. ಧರ್ಮವನ್ನು ಜಾತಿರೂಪದಲ್ಲಿ ನೋಡಬಾರದು. ಒಳ್ಳೆಯದನ್ನು ರಕ್ಷಣೆ ಮಾಡುವುದು ಧರ್ಮದ ಕೆಲಸವಾಗಬೇಕು. ಫುಲೆ ಅಕ್ಷರ ಜ್ಞಾನ ಕೊಡುವುದಷ್ಟೇ ಅಲ್ಲದೇ ಶಾಲೆಗಳನ್ನು ತೆರೆದು ಹೆಣ್ಣಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು’ ಎಂದು ಹೇಳಿದರು.

ಶರಣ ಅಶೋಕ ಬರಗುಂಡಿ ಮಾತನಾಡಿ, ‘ಅಂತರಂಗ ಬಹಿರಂಗ ಶುದ್ಧಗೊಳಿಸದ ಹೊರತು ಬದುಕು ಎತ್ತರಕ್ಕೇರುವುದಿಲ್ಲ. ಅಂಬೇಡ್ಕರ್, ಫುಲೆ, ಗಾಂಧೀಜಿ ಅವರ ವಿಚಾರಧಾರೆಗಳ ಬಗ್ಗೆ ಮಾತನಾಡುವ ನಾವು ತತ್ವಗಳನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಶಿಕ್ಷಕ ಎಸ್.ಎನ್.ಬಳ್ಳಾರಿ ಮಾತನಾಡಿದರು. ಕೆಎಸ್‌ಎಸ್‌ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ವಿ.ಗವಾನಿ ಅಧ್ಯಕ್ಷತೆ ವಹಿಸಿದ್ದರು. 41 ವರ್ಷಗಳ ಕಾಲ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿರೂಪಾಕ್ಷಪ್ಪ ರಾಮಗಿರಿ ದಂಪತಿಯನ್ನು ಸನ್ಮಾನಿಸಲಾಯಿತು.

ಜೆನ್ನಿಬಾಯಕ್ಕ ಅವರಿಗೆ ₹10 ಸಾವಿರ ನಗದು, ಪುಸ್ತಕ ಮತ್ತು ಫಲಕ ಒಳಗೊಂಡ ‘ಫುಲೆ ಗೌರವ’ ಹಾಗೂವೀರಪ್ಪ ತಾಳದವರ, ವಾಸುದೇವ ಕಾಳೆ, ಕಲ್ಪಿತಾರಾಣಿ, ಸುರೇಶ ಅಂಗಡಿ ಅವರಿಗೆ ₹5 ಸಾವಿರ ನಗದು, ಫಲಕ, ಪುಸ್ತಕ ಒಳಗೊಂಡ ‘ಫುಲೆ ಮಾರ್ಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಚಳವಳಿ ನಡೆಸುವ ಅಗತ್ಯವಿದೆ’

‘ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಪೌರಕಾರ್ಮಿಕರಿಂದ ದುಡಿಸಿಕೊಂಡ ಸರ್ಕಾರ ಅವರಿಗೆ ಕನಿಷ್ಠ ಸೌಕರ್ಯ ಒದಗಿಸಿಕೊಡಲಿಲ್ಲ. ನ್ಯಾಯಾಲಯ ಛೀಮಾರಿ ಹಾಕಿದ ನಂತರವಷ್ಟೇ ಸರ್ಕಾರ ಅವರಿಗೆ ಗ್ಲೌಸ್‌, ಸ್ಯಾನಿಟೈಸರ್‌, ಮಾಸ್ಕ್‌ಗಳನ್ನು ವಿತರಿಸಿತು’ ಎಂದು ವಕೀಲ ಕ್ಲಿಪ್ಟನ್‌ ರೊಜಾರಿಯೋ ಹೇಳಿದರು.

‘ಕೋವಿಡ್‌ ವಾರಿಯರ್ಸ್‌ ಆಗಿ ದುಡಿದ ಪೌರಕಾರ್ಮಿಕರಲ್ಲಿ ಕೆಲವರು ಸಾವನ್ನಪ್ಪಿದರು. ಸರ್ಕಾರ ಅವರಿಗೆ ಪರಿಹಾರ ಕೊಡಲಿಲ್ಲ. ಸೋಂಕಿತರಾಗಿ ರಜೆ ಹಾಕಿದಾಗ ಸಂಬಳ ಕೊಡಲಿಲ್ಲ. ಪೌರಕಾರ್ಮಿಕರ ಜೀವನಮಟ್ಟ ಸುಧಾರಣೆಗೆ ಇಂದು ದೊಡ್ಡ ಚಳವಳಿಯೇ ನಡೆಯಬೇಕಿದೆ’ ಎಂದು ಹೇಳಿದರು.

ಸಂವಿಧಾನವನ್ನು ದುರ್ಬಲಗೊಳಿಸುವ, ನಮ್ಮ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ, ಸಂವಿಧಾನ ಸಂರಕ್ಷಣಾ ಚಳವಳಿಯನ್ನು ರಾಜ್ಯದೆಲ್ಲೆಡೆ ವಿಸ್ತರಿಸುವ ಅಗತ್ಯ ಇದೆ

- ವೈ.ಜೆ.ರಾಜೇಂದ್ರ, ಮುಖಂಡ

ಸಾವಿತ್ರಿಬಾ ಫುಲೆ ಅವರ ಕುರಿತಾಗಿ ವಿಶ್ವವಿದ್ಯಾಲಯದಲ್ಲಿ ಕೋರ್ಸ್ ಅಳವಡಿಸಬೇಕು. ವಿದ್ಯಾರ್ಥಿಗಳು ಅವರನ್ನು ಓದಿಕೊಂಡು ಅವರ ವಿಚಾರಗಳನ್ನು ಬಳಸಿ‌ ಸಮ ಸಮಾಜ ಕಟ್ಟಲು‌ ಶ್ರಮಿಸಬೇಕು

- ವೆಂಟೇಶಯ್ಯ, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT