ಈ ಸರ್ಕಾರಿ ಪ್ರೌಢಶಾಲೆ ಸೇರಲು ನೂಕುನುಗ್ಗಲು..!

ಮಂಗಳವಾರ, ಜೂನ್ 18, 2019
23 °C
ಪ್ರವೇಶ ಪರೀಕ್ಷೆ ಮೂಲಕ ಮಕ್ಕಳ ಆಯ್ಕೆ; ಖಾಸಗಿ ಶಾಲೆಗಳಿಗೆ ಸೆಡ್ಡು

ಈ ಸರ್ಕಾರಿ ಪ್ರೌಢಶಾಲೆ ಸೇರಲು ನೂಕುನುಗ್ಗಲು..!

Published:
Updated:
Prajavani

ಶಿರಹಟ್ಟಿ: ಮಕ್ಕಳಿಗೆ ಪ್ರವೇಶ ನೀಡುವಂತೆ ಖಾಸಗಿ ಶಾಲೆಗಳ ಮುಂದೆ ಹಣ, ಶಿಫಾರಸ್ಸು ಪತ್ರ ಹಿಡಿದುಕೊಂಡು ಪಾಲಕರು ಸರತಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯ. ಆದರೆ, ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಸಿಸಿ ನೂರಶೆಟ್ಟರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ನಡುವೆ ಇನ್ನಿಲ್ಲದ ಪೈಪೋಟಿ ನಡೆಯುತ್ತದೆ. ಇಲ್ಲಿ ಪ್ರವೇಶ ಸಿಗುವುದೇ ಮಕ್ಕಳ ಅದೃಷ್ಟ ಎನ್ನುತ್ತಾರೆ ಪಾಲಕರು.

ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಈ ಶಾಲೆಯು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈ ಶಾಲೆಯಲ್ಲಿ  ಪ್ರವೇಶ ಸಿಕ್ಕರೆ ಸಾಕು ಎನ್ನುವ ಧನ್ಯತಾಭಾವ ಪಾಲಕರದು.

ಈ ಶಾಲೆಯಲ್ಲಿ ಪ್ರವೇಶಕ್ಕಾಗಿ ಬರುವ ಎಲ್ಲ ಮಕ್ಕಳಿಗೆ ಸುಲಭವಾಗಿ ಪ್ರವೇಶ ಲಭಿಸುವುದಿಲ್ಲ. ಹಣ, ಶಿಫಾರಸು ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಶಿಕ್ಷಕರು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದರೆ ಮಾತ್ರ ಪ್ರವೇಶ ಭಾಗ್ಯ ಲಭಿಸುತ್ತದೆ. ಉತ್ತರಿಸಲು ತಡವರಿಸಿದರೆ ಮತ್ತೆ ನಾಲ್ಕು ದಿನಗಳ ಅವಕಾಶ ನೀಡಲಾಗತ್ತದೆ. ಅದರೊಳಗೆ ಸುಧಾರಿಸಿದರೆ ಪ್ರವೇಶ ಲಭಿಸುತ್ತದೆ. ಇಲ್ಲವಾದರೆ, ಬೇರೆ ಶಾಲೆಯಲ್ಲಿಯೇ ಪ್ರವೇಶ ಪಡೆಯಬೇಕು.

‘ಸರ್ಕಾರಿ ಶಾಲೆಯಲ್ಲಿ ಎಲ್ಲ ವಿಧ್ಯಾರ್ಥಿಗಳಿಗೆ ಪ್ರವೇಶ ನೀಡಬೇಕಾದದ್ದು ಕಡ್ಡಾಯ. ಆದರೆ, ನಾವು ಮಕ್ಕಳ ಕಲಿಕಾ ಸಾಮರ್ಥ್ಯ ಪರೀಕ್ಷಿಸುವ ಸಲುವಾಗಿ ಪ್ರವೇಶ ಪರೀಕ್ಷೆ ಮಾಡುತ್ತೇವೆ’ ಎಂದು ಪ್ರಾಚಾರ್ಯ ವಿ.ಎಸ್‌. ಸೇಟವಾಜಿ ಅಭಿಪ್ರಾಯಪಟ್ಟರು.

‘ಪಾಲಕರ ಜತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಿಸಬೇಕಾದ ವಿಷಯಗಳನ್ನು ಚರ್ಚಿಸುವುದು ಹಾಗೂ ಹಂತಹಂತವಾಗಿ ಇವುಗಳನ್ನು ಜಾರಿಗೆ ತರಲು ಪ್ರಯತ್ನಿಸುವುದು’ ಶಿಕ್ಷಕರ ಮುಖ್ಯ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.

8,9 ಮತ್ತು 10ನೇ ತರಗತಿಗಳಿಗೆ 400ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಈ ಶಾಲೆಯಲ್ಲಿ ಪ್ರತಿ ವರ್ಷ ಪ್ರವೇಶ ಪಡೆಯುತ್ತಾರೆ. 7 ಮಂದಿ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ. ಶಾಲೆಗೆ ಜಮೀನನ್ನು ಸ್ಥಳೀಯ ಉದ್ಯಮಿ ಚಂದ್ರಕಾಂತ ನೂರಶೆಟ್ಟರ ಅವರು ದೇಣಿಗೆಯಾಗಿ ನೀಡಿದ್ದಾರೆ. ಹಲವು ನಿವೃತ್ತ ಶಿಕ್ಷಕರು ಶಾಲೆಯ ಅಭಿವೃದ್ದಿಗೆ ಶ್ರಮಿಸಿ ಇದನ್ನು ಮಾದರಿ ಶಾಲೆಯನ್ನಾಗಿ ಮಾಡಲು  ಪಣತೊಟ್ಟಿದ್ದಾರೆ. ಇಲಾಖೆಯೂ ಇದಕ್ಕೆ ಸ್ಪಂದಿಸಿದರೆ ಇದು ಜಿಲ್ಲೆಯಲ್ಲೇ ಮಾದರಿ ಸರ್ಕಾರಿ ಪ್ರೌಢಶಾಲೆಯಾಗಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 4

  Sad
 • 2

  Frustrated
 • 2

  Angry

Comments:

0 comments

Write the first review for this !