ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಗುಂದ: ಒಕ್ಕಲುತನದೊಲವಿನ ಗಂಡು ಮಕ್ಕಳ ಶಾಲೆ

ಗೋಡೆ ಬರಹ, ಹಸಿರು ಹೊದ್ದ ಮುಳಗುಂದದ ಸರ್ಕಾರಿ ಮಾದರಿ ಶಾಲೆ
Last Updated 11 ಜೂನ್ 2021, 2:37 IST
ಅಕ್ಷರ ಗಾತ್ರ

ಮುಳಗುಂದ: ಪಟ್ಟಣದಲ್ಲಿ 1868ರಜನವರಿ 11ರಂದು ಸ್ಥಾಪನೆಯಾದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ನಂ 1 ಶಾಲೆಯು ಇವತ್ತಿನವರೆಗೂ ತನ್ನ ವಿಶಿಷ್ಟತೆಯನ್ನು ಕಾಯ್ದುಕೊಂಡು ಬಂದಿದೆ.

ಪಾಲಕರು, ಜನನಾಯಕರ ಪ್ರಶಂಸೆಗೆ ಪಾತ್ರವಾಗಿ ಕಾಲಗರ್ಭದಲ್ಲಿ ಅನೇಕ ಪ್ರಗತಿಪರ, ರಚನಾತ್ಮಕ ಹಾಗೂ ಸಾರ್ಥಕ ಚಟುವಟಿಕೆಗಳು, ಸಾಧನೆಗಳನ್ನು ಕಂಡು ಇದೀಗ 153ನೇ ವರ್ಷದತ್ತ ಮುನ್ನುಗ್ಗುತ್ತಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ರಾಷ್ಟ್ರೀಯ ಮೂಲ ಶಿಕ್ಷಣ ಯೋಜನೆ ಮೇರೆಗೆ 1947ರಲ್ಲಿ ಈ ಶಾಲೆ ಕೃಷಿಮೂಲ ಜೀವನ ಶಿಕ್ಷಣ ಶಾಲೆಯಾಗಿ ಇಲ್ಲಿ ಬೇಸಾಯವನ್ನು ಪ್ರಾಯೋಗಿಕವಾಗಿ ಮತ್ತು ತಾತ್ವಿಕವಾಗಿ ಕಲಿಸಲಾಗುತ್ತಿತ್ತು. ಈ ಶಾಲೆಗೆ ಕೃಷಿ ತರಬೇತಿ ಪಡೆದ ಶಿಕ್ಷಕರನ್ನೇ ನಿಯೋಜನೆ ಮಾಡಲಾಗುತಿತ್ತು. ಹೀಗಾಗಿ ಈ ಶಾಲೆಗೆ ‘ಒಕ್ಕಲುತನದೊಲವಿನ ಕನ್ನಡ ಗಂಡು ಮಕ್ಕಳ ಶಾಲೆ’ ಎಂಬ ಬಿರುದು ಕೂಡ ಇತ್ತು. 1967ರ ಪೂರ್ವದಲ್ಲಿ ಈ ಶಾಲೆಯು ಧಾರವಾಡ ಜಿಲ್ಲಾ ಸ್ಕೂಲ್ ಬೋರ್ಡ್‌ನ ಆಡಳಿತಕ್ಕೆ ಒಳಪಟ್ಟಿತ್ತು. 1970ರಲ್ಲಿ ಸರ್ಕಾರಿ ಶಾಲೆಯಾಗಿ ಮಾರ್ಪಾಡಾಯಿತು.

ಸದ್ಯ ಈ ಶಾಲೆ 1ರಿಂದ 8ನೇ ತರಗತಿ ಹಾಗೂ ಎರಡು ವರ್ಷದಿಂದ ಇಂಗ್ಲಿಷ್‌ ಮಾಧ್ಯಮ 1ನೇ ತರಗತಿ ಹೊಂದಿದೆ. ಕಳೆದ ವರ್ಷದಿಂದ 308 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿನ ಶಿಕ್ಷಕರು ಆಧುನಿಕತೆಗೆ ತಕ್ಕಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು ಎನ್ನುವ ಸದುದ್ದೇಶದಿಂದ ಶಿಕ್ಷಕರ ಅನುದಾನ ಮತ್ತು ತಮ್ಮ ವೈಯಕ್ತಿಕ ಹಣ ಬಳಸಿಕೊಂಡು ಗೋಡೆ ಬರಹಗಳನ್ನ ಬರೆಯಿಸಿದ್ದಾರೆ.

ಇದರಲ್ಲಿ ವಿಜ್ಞಾನ ವಿಷಯದ ಜೀವಶಾಸ್ತ್ರದ ಚಿತ್ರಗಳು, ಗಣಿತ ವಿಷಯದ ಸೂತ್ರಗಳು, ಕನ್ನಡ ವಿಷಯದ ವ್ಯಾಕರಣ ವೃಕ್ಷ ಚಿತ್ರಗಳು ಸೇರಿವೆ. ಸಾಮಾನ್ಯ ಜ್ಞಾನಾರ್ಜನೆಗೆ ಜ್ಞಾನಪೀಠ ಪುರಸ್ಕೃತ ಕವಿಗಳ ಭಾವಚಿತ್ರ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು, ನಾಣ್ಣುಡಿಗಳನ್ನು ಆರು ಕೊಠಡಿಗಳ ಒಳಗೋಡೆಗಳ ಮೇಲೆ ಚಿತ್ರಿಸಿದ್ದಾರೆ. ಹೊರಾಂಗಣ ಗೋಡೆಗಳಿಗೆ ಯೋಗ, ಕ್ರೀಡಾ ಚಟುವಟಿಕೆಗಳ ಭಂಗಿ, ಕಾಂಪೌಂಡ್‌ ಗೋಡೆಗೆ ಕಾಡು ಗಿಡಮರಗಳು, ಪ್ರಾಣಿಗಳ ಚಿತ್ರವನ್ನು ಬಿಡಿಸಿದ್ದಾರೆ. ಇದು ಮಕ್ಕಳ ಆಕರ್ಷಣೆ ಜತೆಗೆ ವಿಷಯದ ಸಂಪೂರ್ಣ ಮನವರಿಕೆಯಾಗುತ್ತಿದೆ.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಮತ್ತು ಸರ್ವಾಂಗೀಣ ಪ್ರಗತಿಯಲ್ಲಿ ಮುಂದಿರುವ ಈ ಶಾಲೆಯು ವಿಶಾಲವಾದ ಆಟದ ಮೈದಾನ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಪ್ರೋಜೆಕ್ಟರ್‌ ಸೌಲಭ್ಯ ಇದೆ. ಪಾಠದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸಿ ವಾಲಿಬಾಲ್, ಕೊಕ್ಕೊ, ಕಬಡ್ಡಿ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದವರೆಗೂ ಸಾಧನೆ ಮಾಡಿದ್ದಾರೆ. ದಾನಿಗಳಿಂದ ಶಾಲೆಯಲ್ಲಿ ಶುದ್ಧ ನೀರಿನ ವ್ಯವಸ್ಥೆ ಇದ್ದು, ಕೋವಿಡ್ ಸಂದರ್ಭದಲ್ಲಿ ಆಹಾರಧಾನ್ಯಗಳನ್ನ ಮಕ್ಕಳಿಗೆ ತಲುಪಿಸುವ ಕಾರ್ಯವನ್ನ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಕೈಗೊಂಡಿದೆ.

ಹೆಸರಿಗೆ ತಕ್ಕಂತೆ ಮಾದರಿ ಶಾಲೆ

‌‘ಇಲ್ಲಿ ಪರಿಸರಕ್ಕೆ ಒತ್ತು ನೀಡಲಾಗಿದ್ದು 20 ತೆಂಗು, 10 ಬೇವಿನ ಗಿಡಗಳನ್ನು ನೆಡಲಾಗಿದೆ. ಹಾಗಾಗಿ, ಶಾಲಾ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಸರ್ಕಾರಿ ಯೋಜನೆಗಳ ಸದ್ಭಳಕೆ ಮಾಡಿಕೊಂಡು ಹೆಸರಿಗೆ ತಕ್ಕಂತೆ ಮಾದರಿ ಶಾಲೆಯಾಗಿದೆ. ಪಾಲಕರು ತಮ್ಮ ಮಕ್ಕಳನ್ನ ಖಾಸಗಿ ಶಾಲೆಗಳ ಬದಲಾಗಿ ಸರ್ಕಾರಿ ಶಾಲೆಗೆ ದಾಖಲಿಸುವುದು ಮುಖ್ಯವಾಗಿದೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಡಿ.ಸಿದ್ದನಗೌಡ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT