ಶಿರಹಟ್ಟಿ: ಹಗಲಿರುಳು ಸಂಚರಿಸುವ ಮರಳಿನ ಗಾಡಿಗಳಿಂದ ಗುಂಡಿ ಬಿದ್ದ ರಸ್ತೆಗಳು, ರಸ್ತೆಗಳಿಲ್ಲದೇ ಗಬ್ಬೆದ್ದು ನಾರುತ್ತಿರುವ ಬಡಾವಣೆಗಳು, ಕೊಠಡಿಗಳ ಕೊರತೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಗ್ರಾಮದ ಮಕ್ಕಳು, ಶಿಥಿಲಾವಸ್ಥೆಯ ವಿದ್ಯುತ್ ಕಂಬಗಳ ಮಧ್ಯ ಭಯದ ಜೀವನ ನಡೆಸುತ್ತಿರುವ ಅಂಕಲಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಕೊಗನೂರು ಗ್ರಾಮ ಪಂಚಾಯ್ತಿಗೆ ಒಳಪಡುವ ಅಂಕಲಿ ಗ್ರಾಮದಲ್ಲಿ ಸುಮಾರು 400 ರಿಂದ 500 ಜನಸಂಖ್ಯೆ ಇದೆ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರನ್ನು ಒಳಗೊಂಡ ಅಂಕಲಿ ಗ್ರಾಮವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಕೊಗನೂರು ಪಂಚಾಯಿತಿ ಅತೀ ಹಿಂದುಳಿದ ಗ್ರಾಮವೆಂದೇ ಖ್ಯಾತಿ ಪಡೆದಿದೆ.
ಕೊಠಡಿಗಳ ಕೊರತೆ: ಗ್ರಾಮದಲ್ಲಿರುವ 1 ರಿಂದ 5ನೇ ತರಗತಿಯ ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆ ಇದೆ. ಕೇವಲ 3 ಕೊಠಡಿಗಳಿದ್ದು, ಅದರಲ್ಲಿ ಒಂದು ಶಿಥಿಲಾವಸ್ಥೆಯಲ್ಲಿದೆ. ಇರುವ ಎರಡು ಕೊಠಡಿಗಳಲ್ಲಿ ಒಂದು ಕೊಠಡಿಯಲ್ಲಿ 1 ರಿಂದ 3 ಹಾಗೂ ಇನ್ನೊಂದರಲ್ಲಿ 4 ಮತ್ತು 5ನೇ ತರಗತಿಗಳು ನಡೆಯುತ್ತಿವೆ.
ಕೇವಲ 2 ಜನ ಶಿಕ್ಷಕರು ಇದ್ದು, ಕೊಠಡಿ ಮತ್ತು ಶಿಕ್ಷಕರ ಕೊರತೆ ಇದೆ. ಅಲ್ಲದೇ ಶಾಲಾ ಮಕ್ಕಳಿಗೆ ಆಟದ ಮೈದಾನ ಇಲ್ಲ. ಮಕ್ಕಳು ಶಾಲೆಗೆ ಬರಲು ಇರುವ ರಸ್ತೆಯಲ್ಲಿ ಸತತವಾಗಿ ನೀರು ಹರಿಯುವುದರಿಂದ ಪಾಚಿ ಬೆಳೆದು ಕಾಲು ಜಾರುತ್ತಿವೆ. ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕೆನ್ನುವುದು ಗ್ರಾಮಸ್ಥರ ಅಳಲು.
ಶಿಥಿಲಾವಸ್ಥೆಯ ವಿದ್ಯುತ್ ಕಂಬಗಳು:
ಗ್ರಾಮದಲ್ಲಿನ ಬಹುತೇಕ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿವೆ. ಕಂಬಗಳಲ್ಲಿನ ಸ್ಟೀಲ್ ಹೊರಗೆ ಬಂದು ಕಟ್ಟಾಗುತ್ತಿವೆ. ಕೆಲವು ಬಾಗಿ ವಿದ್ಯುತ್ ತಂತಿಗಳು ಮನೆಯ ಚಾವಣಿ ತಗುಲುತ್ತಿವೆ. ಇಂತಹ ಕಂಬಗಳನ್ನು ತೆಗೆದು ಹೊಸ ಕಂಬಗಳನ್ನು ಅಳವಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಮನ್ನಣೆ ದೊರೆತಿಲ್ಲ. ಗ್ರಾಪಂನ ಅಧಿಕಾರಿಗಳು ಸೇರಿದಂತೆ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯುತ್ ಅವಘಡ ಸಂಭವಿಸಿ ಗ್ರಾಮವೇ ಹೊತ್ತಿ ಉರಿಯುವ ಮುಂಚಿತವಾಗಿ ಅಧಿಕಾರಿಗಳು ಎಚ್ಚೆತ್ತಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ಶೌಚಾಲಯ ಕೊರತೆ
ಸರ್ಕಾರ ಇಂದು ಸ್ವಚ್ಚ ಭಾರತ್ ಅಭಿಯಾನ ಹಾಗೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಯೋಜನೆಗಳು ಗ್ರಾಮಕ್ಕೆ ಸರಿಯಾಗಿ ದೊರೆಯದೆ ಅಭಿವೃದ್ಧಿ ಆಗುತ್ತಿಲ್ಲ. ಪಂಚಾಯ್ತಿಯ ಜಾಗೃತಿ ಕೊರತೆಯಿಂದ ಪುರುಷ ಮತ್ತು ಮಹಿಳೆಯರು ಗ್ರಾಮದ ಹೊರವಲಯದ ಗಿಡಗಂಟಿಗಳ ಮರೆಯಲ್ಲಿ ಶೌಚ ಮಾಡಿ ಹಳೆಯ ಪದ್ದತಿಯನ್ನು ಅನುಸರಿಸುತ್ತಿರುವುದು ವಿಷಾದಕರ.
ಅಂಕಲಿ ಗ್ರಾಮದ ಶಾಲೆಯ ಪಕ್ಕದಲ್ಲಿನ ರಸ್ತೆ ನಿರ್ಮಾಣಕ್ಕೆ ಅನುದಾನ ಸಾಕಾಗುವುದಿಲ್ಲ.ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆಶರಣಪ್ಪ ಮುದ್ದಿ ಕೊಗನೂರು ಪಿಡಿಒ
ಸ್ತೆಗಳ ದುಸ್ಥಿತಿ: ಸಂಚಾರಕ್ಕೆ ಪರದಾಟ
ಗ್ರಾಮದಲ್ಲಿನ ಬಡಾವಣೆಯಲ್ಲಿ ಸರಿಯಾದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣವಾಗಿಲ್ಲ. ಮನೆಯಿಂದ ಹೊರಬರುವ ತ್ಯಾಜ್ಯ ನೀರನ್ನು ರಸ್ತೆ ಮೇಲೆ ಹರಿಬಿಡಲಾಗುತ್ತಿದ್ದು ರಸ್ತೆಗಳಲ್ಲಿ ಗುಂಡಿಗಳು ಮನೆಮಾಡಿವೆ. ಪ್ರಸ್ತುತ ಮಳೆಗಾಲ ಇರುವುದರಿಂದ ಮಳೆ ನೀರು ಸೇರಿ ಕೆಸರು ಗದ್ದೆಯಂತಾಗಿವೆ. ಇದು ಗ್ರಾಮದಲ್ಲಿನ ರಸ್ತೆಯ ದುಃಸ್ಥಿತಿಯಾದರೆ ಇನ್ನೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಸ್ಥಿತಿಯಂತೂ ಹೇಳತೀರದು. ಗ್ರಾಮದ ಅಕ್ಕಪಕ್ಕದಲ್ಲಿ ಅವ್ಯಾಹತವಾಗಿ ನಡೆಯುವ ಮರಳುಗಾರಿಕೆಯಿಂದ ರಸ್ತೆಗಳು ಹಾಳಾಗಿವೆ. ಹಗಲಿರುಳು ಎನ್ನದೇ ಓವರ್ ಲೋಡ್ ಹೊತ್ತ ಗಾಡಿಗಳ ಮೂಲಕ ಮರಳು ಸಾಗಿಸುವ ದುರುಳರಿಂದ ರಸ್ತೆಗಳು ಮಾಯವಾಗುತ್ತಿವೆ. ಜನಪ್ರತಿನಿಧಿಗಳು ಕಚ್ಚಾರಸ್ತೆಯ ದುರಸ್ತಿಯಂತಾದರೂ ಅನುದಾನ ಬಿಡುಗಡೆ ಮಾಡಲಿ ಎಂಬುದು ಗ್ರಾಮಸ್ಥರ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.