ಗುರುವಾರ , ಮೇ 26, 2022
23 °C
ಕಾಂಗ್ರೆಸ್‌ ಭ್ರಷ್ಟಾಚಾರದ ಜನಕ: ಶ್ರೀರಾಮುಲು

ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಮಿಷನ್‌ 150 ಗುರಿ- ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಗದಗ: ‘2023ರ ವಿಧಾನಸಭಾ ಚುನಾವಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದ್ದು, ಮಿಷನ್‌ 150 ಪಕ್ಷದ ಗುರಿಯಾಗಿದೆ’ ಎಂದು ಸಚಿವ ಶ್ರೀರಾಮುಲು ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ರಾಷ್ಟ್ರೀಯ ನಾಯಕರಾದ ಅಮಿತ್‌ ಶಾ, ಉಸ್ತುವಾರಿ ಅರುಣ್‌ ಸಿಂಗ್‌ ಅವರು ಕೂಡ ಇದನ್ನೇ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಅವರು ತಿಳಿಸಿದರು.‌

‘ಸಿಎಂ ಬೊಮ್ಮಾಯಿ ಅವರು ಎಲ್ಲ ಜಾತಿ, ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಶಾಲ ಹೃದಯದವರು. ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅದಕ್ಕೆ ಪೂರಕವಾಗಿ ನಾಡಿನ ಸಮಸ್ತ ಜನರ ಅಭಿವೃದ್ಧಿಗೆ ನೆರವಾಗುವಂತಹ ಬಜೆಟ್‌ ಅನ್ನು ಸಿಎಂ ಮಂಡಿಸಿದ್ದಾರೆ. ಬಿಜೆಪಿ ಮಾಡಿರುವ ಅಭಿವೃದ್ದಿ ಕೆಲಸಗಳೇ ನಾವು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರೀರಕ್ಷೆ ಆಗಲಿವೆ. 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.

‘ಪಿಎಸ್‌ಐ ನೇಮಕಾತಿಯಲ್ಲಿ ಆದ ಭ್ರಷ್ಟಾಚಾರನ್ನು ಬಯಲಿಗೆಳೆದಿದ್ದೇ ಬಿಜೆಪಿ ಸರ್ಕಾರ. ತನಿಖೆಗೆ ಆದೇಶಿಸುವುದರ ಜತೆಗೆ ತಪ್ಪಿತಸ್ಥರನ್ನೆಲ್ಲಾ ಬಂಧಿಸಲಾಗುತ್ತಿದೆ. ಆದರೂ ಕೂಡ, ಕಾಂಗ್ರೆಸ್‌ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಸಚಿವ ಅಶ್ವತ್ಥ್‌ ನಾರಾಯಣ ವಿರುದ್ಧ ಆರೋಪ ಮಾಡುವುದಕ್ಕೆ ಕಾಂಗ್ರೆಸ್‌ ನಾಯಕರ ಬಳಿ ಯಾವುದೇ ದಾಖಲೆಗಳಿಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದಕ್ಕಿಂತ ಸಚಿವರು ಇದರಲ್ಲಿ ಭಾಗಿ ಆಗಿದ್ದಾರೆ ಎಂಬುದನ್ನು ತೋರಿಸುವ ದಾಖಲೆಗಳನ್ನು ನೀಡಲಿ’ ಎಂದು ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.

‘ಭ್ರಷ್ಟಾಚಾರದ ಜನಕರೇ ಕಾಂಗ್ರೆಸ್‌ ನಾಯಕರು. ಅಂದಿನಿಂದಲೂ ದೇಶವನ್ನು ಲೂಟಿ ಮಾಡುತ್ತಲೇ ಬಂದಿದ್ದಾರೆ. ಕಳೆದ 60 ವರ್ಷಗಳ ಕಾಲ ಅವರ ಅಧಿಕಾರಾವಧಿಯಲ್ಲಿ ಆದಂತಹ ತಪ್ಪುಗಳನ್ನು ಇಂದಿನ ಬಿಜೆಪಿ ಸರ್ಕಾರ ಸರಿಪಡಿಸುವ ಕೆಲಸ ಮಾಡುತ್ತಿದೆ. ದಲಿತರು ಹಿಂದುಳಿದವರ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ದಲಿತ ನಾಯಕರನ್ನು ಸಿಎಂ ಮಾಡಲಿಲ್ಲ, ಅಲ್ಪಸಂಖ್ಯಾತರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಲಿಲ್ಲ’ ಎಂದು ಲೇವಡಿ ಮಾಡಿದರು.

ಉಪ ಮುಖ್ಯಮಂತ್ರಿ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆಸೆ ಇಲ್ಲದ ಮನುಷ್ಯ ಯಾರೂ ಇಲ್ಲ. ಆದರೆ, ಯಾರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಆಗಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷದ ತೀರ್ಮಾನದಂತೆ ನಡೆಯುವುದು ನಮ್ಮ ಕರ್ತವ್ಯ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ’ ಎಂದು ಹೇಳಿದರು.

ಬಿಜೆಪಿಯಲ್ಲಿ‌ ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿರುವ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್  ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಅವರು, ‘ಹೊಸಬರಿಗೆ ಅವಕಾಶ ಕೊಡುವುದರಿಂದ ರಾಜ್ಯ ರಾಜಕೀಯದಲ್ಲಿ ಚೈತನ್ಯ ಮೂಡುತ್ತದೆ. ರಾಜಕಾರಣ ನಿಂತ ನೀರಲ್ಲ. ಜಿಡ್ಡು ಗಟ್ಟಿದ ವ್ಯವಸ್ಥೆ ಬದಲಾಗಬೇಕು. ರಾಜಕೀಯವಾಗಿ ನಿಶ್ಯಕ್ತರಾದವರು ಹೊರ ಹೋಗಿ, ಹೊಸಬರು ಬರಬೇಕು’ ಎಂದು ಹೇಳಿದರು.

‌‘ಕೊಟ್ಟ ಮಾತಿನಂತೆ ನಮ್ಮ ಸರ್ಕಾರದ ಅವಧಿಯಲ್ಲೇ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು