ಗದಗ: ‘ದಲಿತ ಚಳವಳಿ ಕಟ್ಟಲು ಇಡೀ ಬದುಕನ್ನೇ ಕಳೆದವರ ಬದುಕಿನ ದಾಖಲಾತಿ ಹಾಗೂ ಆಯಾ ಜಿಲ್ಲೆಯ ದಲಿತ ಚಳವಳಿ ಚರಿತ್ರೆಯ ಅಧ್ಯಯನದ ಜತೆಗೆ ದಲಿತ ಸಮುದಾಯಗಳ ಸಮಾಜೋ-ಆರ್ಥಿಕ ಸ್ಥಿತಿಗತಿಗಳನ್ನು ಕಟ್ಟಿಕೊಡುವ ಕೆಲಸ ಆಗಬೇಕಿದೆ’ ಎಂದು ಸಾಹಿತಿ ಬಸವರಾಜ ಸೂಳಿಬಾವಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ‘ದಲಿತ ಚಳುವಳಿ 50: ಅವಲೋಕನ ಮತ್ತು ಮುನ್ನೋಟ’ ಸಮಾವೇಶದ ಐದನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ಈ ಚರಿತ್ರೆ ಏಕಕಾಲದಲ್ಲಿ ಅದು ದಲಿತರ ಬದುಕಿನ ಚರಿತ್ರೆಯೂ ಕರ್ನಾಟಕದ ಆಯಾ ಜಿಲ್ಲೆಗಳ ಜಮೀನ್ದಾರಿ, ಪಾಳೇಗಾರಿಕೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ದಬ್ಬಾಳಿಕೆಯ ಚರಿತ್ರೆಯಾಗಿಯೂ ಉಳಿಯುತ್ತದೆ. ಹಾಗೊಂದು ಐತಿಹಾಸಿಕವಾಗಿ ಚರಿತ್ರೆ ಕಟ್ಟುವ ಕೆಲಸಗಳಿಗೆ ದಲಿತ ಚಳುವಳಿ– 50 ಸಮಾವೇಶ ಪ್ರೇರಕ ಶಕ್ತಿ ಆಗಲಿದೆ’ ಎಂದು ಹೇಳಿದರು.
‘ಇದು ಎಲ್ಲ ದಲಿತ ಸಮುದಾಯಗಳನ್ನು ಒಳಗೊಳಿಸುವಿಕೆಯ ಭಾಗ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಒಂದು ದಲಿತ ಶಕ್ತಿ ಉದಯಿಸಬೇಕು ಎನ್ನುವ ಸದಾಶಯದಲ್ಲಿ ಈ ಸಮಾವೇಶ ನಡೆಯಲಿದೆ. ಡಿಎಸ್‌ಎಸ್‌ನ ಎಲ್ಲ ಘಟಕಗಳನ್ನು ಆಹ್ವಾನಿಸುತ್ತೇವೆ. ಇದು ಎಲ್ಲರೂ ಕೂಡಿ ಮಾಡುವ ಕೆಲಸ. ಅದಕ್ಕಿಂತಲೂ ತಾತ್ವಿಕ ಸಿದ್ಧಾಂತ ಅಡಿಯಲ್ಲಿ ಎಲ್ಲರೂ ಒಗ್ಗೂಡುವ ಆಶಯಗಳನ್ನು ಈ ಸಮಾವೇಶ ಹೊಂದಿದೆ’ ಎಂದರು.
‘ಈ ಸಮಾವೇಶಕ್ಕೆ ಹಿಂದಿನ ಚಳವಳಿ ನಡೆದು ಬಂದ ದಾರಿಯ ಹಿನ್ನೋಟ ಮತ್ತು ಮುಂದೆ ಸಾಗಬೇಕಾದ ಚಳವಳಿಯ ಮುನ್ನೊಟದ ಕುರಿತು ಸ್ಪಷ್ಟತೆ ಇದೆ’ ಎಂದರು.
ಗದುಗಿನಲ್ಲಿ ಬಸವಲಿಂಗಪ್ಪನವರು ಒಂದು ಪ್ರೌಢಶಾಲೆಯನ್ನು ಪ್ರಾರಂಭಿಸಿದ್ದರು. ನಾನಾ ಕಾರಣಗಳಿಂದ ಅದು ಈಗ ಮುಚ್ಚಿದೆ. ಬಸವಲಿಂಗಪ್ಪನವರ ಸ್ಮರಣಾರ್ಥ ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗಾಗಿ ವಸತಿ ಪ್ರೌಢಶಾಲೆಯೊಂದನ್ನು ಪ್ರಾರಂಭಿಸಬೇಕು. ದಲಿತ ಸಂಘರ್ಷ ಸಮಿತಿ ಕಟ್ಟಿದ ಬಿ. ಕೃಷ್ಣಪ್ಪ ಅವರು ಕೊನೆಯುಸಿರೆಳೆದ ಗದಗ ನೆಲದಲ್ಲಿ ಅವರ ಹೆಸರಿನಲ್ಲಿ ಸ್ಮಾರಕ ಭವನ ಮಾಡಬೇಕು. ಇವೆರಡು ಸಂಗತಿಗಳನ್ನು ಸಮಾವೇಶದ ನಿರ್ಣಯಗಳಲ್ಲಿ ಸೇರಿಸಬೇಕು. ಈ ನಿರ್ಣಯಗಳನ್ನು ಜಾರಿಗೆ ತರಲು ಸರ್ಕಾರವನ್ನು ಈಗಿನಿಂದಲೇ ಒತ್ತಾಯಿಸಬೇಕು. ಅದಕ್ಕಾಗಿ ಸಂಬಂಧಪಟ್ಟವರನ್ನು ಭೆಟ್ಟಿಯಾಗಿ ಒತ್ತಾಯಿಸಲು ಸಭೆ ನಿರ್ಣಯ ತಗೆದುಕೊಂಡಿತು.
ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಸಿದ್ದಾಂತ ಬದ್ಧವಾಗಿ ಕಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ನೂರು ಮಂದಿ ಯುವಕರಿಗೆ ಅಧ್ಯಯನ ಶಿಬಿರ ಮಾಡಬೇಕು ಎನ್ನುವ ತೀರ್ಮಾನವನ್ನು ಸಭೆ ತಗೆದುಕೊಂಡಿತು.
ದಲಿತ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ಮಾತನಾಡಿದರು. ಗದಗ ಜಿಲ್ಲೆಯ ದಲಿತ ಚಳವಳಿಯ ಚರಿತ್ರೆ ಕಟ್ಟಲು ಒಂದು ಉಪಸಮಿತಿ ರಚಿಸಲಾಯಿತು.
ಮುತ್ತು ಬಿಳಿಯಲಿ, ಆನಂದ ಶಿಂಗಾಡಿ, ರಮೇಶ ಕೋಳೂರು, ಅಶೋಕ ಕಟ್ಟಿಮನಿ ಸೇರಿದಂತೆ ಧಾರವಾಡ ಕೊಪ್ಪಳ, ಕುಷ್ಟಗಿ ಗದಗ ಜಿಲ್ಲೆಗಳ ದಲಿತ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.