ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸ್ವರಾಜ್ಯಕ್ಕೆ ‘ಸ್ವಗ್ರಾಮ ಫೆಲೋಶಿಪ್‌’

ಹಳ್ಳಿಗಳ ಅಂತಃಸತ್ವ ಜಾಗೃತಗೊಳಿಸುವ ಗುರಿ: ಉದ್ಯೋಗ ಸೃಷ್ಟಿಯ ಉದ್ದೇಶ
Last Updated 5 ನವೆಂಬರ್ 2022, 20:14 IST
ಅಕ್ಷರ ಗಾತ್ರ

ಗದಗ: ಗ್ರಾಮಗಳಲ್ಲಿ ನಿರಂತರ ಹಾಗೂ ಸುಸ್ಥಿರ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ ರೂಪಿಸಿರುವ ‘ಸ್ವಗ್ರಾಮ ಫೆಲೋಶಿಪ್‌’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸ್ಥಳೀಯರ ಜತೆಗೆ ಅನಿವಾಸಿ ವ್ಯಕ್ತಿಗಳ ಸ್ವಗ್ರಾಮ ಅಭಿವೃದ್ಧಿಯ ತುಡಿತಕ್ಕೆ ಈ ಯೋಜನೆ ವೇದಿಕೆ ಒದಗಿಸಲಿದೆ.

ಪ್ರತಿಯೊಂದು ಗ್ರಾಮಕ್ಕೂ ಒಂದು ಸ್ವಭಾವ, ಸಂಸ್ಕೃತಿ ಇರುತ್ತದೆ. ಹಳ್ಳಿಯಿಂದ ಹಳ್ಳಿಗೆ ಅದು ಭಿನ್ನವಾಗಿರುತ್ತದೆ. ಗ್ರಾಮದ ಅಂತಃಸತ್ವವನ್ನು ಜಾಗೃತಗೊಳಿಸದೇ ಬರೀ ಕಟ್ಟಡಗಳ ನಿರ್ಮಾಣದಿಂದ ಗ್ರಾಮೀಣಾಭಿವೃದ್ಧಿ ಸಾಧ್ಯವಿಲ್ಲ. ಒಂದು ಗ್ರಾಮದ ಸ್ವಭಾವಕ್ಕೆ ತಕ್ಕಂತೆ ಅಲ್ಲಿನ ಜನರ ಸಹಭಾಗಿತ್ವದೊಂದಿಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದೇ ಸ್ವಗ್ರಾಮ ಫೆಲೋಶಿಪ್‌ನ ಉದ್ದೇಶವಾಗಿದೆ.

‘ವಿಶ್ವವಿದ್ಯಾಲಯದ ಮೂಲ ಉದ್ದೇಶವೇ ಗ್ರಾಮೀಣಾಭಿವೃದ್ಧಿಯಾಗಿದ್ದು, ಅದಕ್ಕೆ ಪೂರಕವಾಗಿ ಸ್ವಗ್ರಾಮ ಫೆಲೋಶಿಪ್‌ ಅನ್ನು ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಈ ಯೋಜನೆಯಲ್ಲಿ ಮೊದಲಿಗೆ ಗ್ರಾಮಗಳು, ನಂತರ ಫೆಲೋ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಇಬ್ಬರು ಸ್ಥಳೀಯ ವ್ಯಕ್ತಿಗಳ ಜತೆಗೆ ಶಿಕ್ಷಣ, ಉದ್ಯೋಗದ ನಿಮಿತ್ತ ಬೇರೆ ಸ್ಥಳದಲ್ಲಿರುವ ಹಾಗೂ ಊರಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಯೊಬ್ಬನನ್ನು ಇವರೊಂದಿಗೆ ಜೋಡಿಸಲಾಗುವುದು. ಒಂದೇ ಗ್ರಾಮದ ಮೂವರ ಗುಂಪಿನಿಂದ ಹಳ್ಳಿಗಳನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಗುರಿಯಾಗಿದೆ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ.

‘ಒಂದು ಗ್ರಾಮದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಅದರಲ್ಲಿ ಎಲ್ಲರೂ ಭಾಗವಹಿಸುವುದಿಲ್ಲ. ಆದರೆ, ಜಾತ್ರೆಗಳು ಊರಿನವರೆನ್ನೆಲ್ಲಾ ಒಂದೆಡೆ ಸೇರಿಸುತ್ತವೆ. ಶಿಕ್ಷಣ, ಉದ್ಯೋಗ, ಆರೋಗ್ಯ ಈ ಮೂರು ಉದ್ದೇಶಗಳಿಗಾಗಿಯೇ ಅನೇಕರು ಊರು ತೊರೆಯುತ್ತಾರೆ. ಈ ಮೂರೂ ಊರಿನಲ್ಲೇ ಸಿಗುವಂತಾದರೆ ಯಾರೂ ವಲಸೆ ಹೋಗುವುದಿಲ್ಲ. ಈ ಫೆಲೋಶಿಪ್‌ ಅವಧಿ ಮೂರು ವರ್ಷಗಳದ್ದಾಗಿದ್ದು, ಮೊದಲ ವರ್ಷದಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧತೆಗಳು, ಆಯ್ಕೆಯಾದ ಗುಂಪುಗಳಿಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ, ಮಾರ್ಗದರ್ಶನ ನೀಡಲಿದ್ದಾರೆ. ನಂತರ ಕ್ರಿಯಾಯೋಜನೆಗಳು ರೂಪುಗೊಳ್ಳಲಿವೆ. ಸ್ವಗ್ರಾಮ ಫೆಲೋಶಿಪ್‌ ರಾಜ್ಯದಲ್ಲಿ ಯಶಸ್ವಿಯಾದರೆ ಅದನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುವ ಆಶಯ ಹೊಂದಲಾಗಿದೆ’ ಎನ್ನುತ್ತಾರೆ ಅವರು.

75 ಗ್ರೂಪ್‌ಗೆ ಫೆಲೋಶಿಪ್‌ ನೀಡುವ ಯೋಚನೆ: ವಿಷ್ಣುಕಾಂತ ಎಸ್‌.ಚಟಪಲ್ಲಿ

‘ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಗ್ರಾಮ ಫೆಲೋಶಿಪ್‌ಗೆ 75 ಗುಂಪುಗಳನ್ನು ರಚಿಸುವ ಯೋಚನೆ ಇದೆ. ಆಸಕ್ತರ ಸಂಖ್ಯೆ ಜಾಸ್ತಿಯಾದರೆ ಹೆಚ್ಚಿನ ಗುಂಪುಗಳನ್ನು ರಚಿಸಲಾಗುವುದು’ ಎನ್ನುತ್ತಾರೆ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ.

ಫೆಲೋಶಿಪ್‌ಗೆ ಆಯ್ಕೆಯಾದ ವ್ಯಕ್ತಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಾನೆಯೇ ಹೊರತು, ಅವನೇ ಬದಲಾವಣೆಯ ಹರಿಕಾರನಲ್ಲ. ಸ್ವಂತ ಉದ್ಯೋಗದ ಜತೆಗೆ ಬಿಡುವಿನ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ನಿರಂತರವಾಗಿ ತೊಡಗಿಸಿಕೊಳ್ಳುವ ಫೆಲೋಗೆ ಪ್ರತಿ ತಿಂಗಳು ₹5 ಸಾವಿರ ನೀಡಲಾಗುವುದು. ಗ್ರಾಮದ ವಿಕಾಸಕ್ಕೆ ಪೂರಕವಾಗಿ ಹಮ್ಮಿಕೊಳ್ಳುವ ಚಟುವಟಿಕೆ ಕೈಗೊಳ್ಳಲು ಮೊದಲ ವರ್ಷ ₹50 ಸಾವಿರದವರೆಗೆ ಮೂಲಧನ ನೀಡಲಾಗುವುದು. ಎರಡು ಮತ್ತು ಮೂರನೇ ವರ್ಷದಲ್ಲಿ ಚಟುವಟಿಕೆ ಕೈಗೊಳ್ಳಲು ಬೇಕಿರುವ ಹಣ ಕ್ರೋಡೀಕರಿಸಲು ಫೆಲೋಗಳಿಗೆ ತರಬೇತಿ ನೀಡಲಾಗುವುದು. ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಡಿ. 15 ಕೊನೆ ದಿನವಾಗಿದ್ದು, ಮಾಹಿತಿಗೆ: 98444 56208 ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT