ಶನಿವಾರ, ಏಪ್ರಿಲ್ 1, 2023
23 °C
ಹತ್ತಿ ಬೆಳೆ ಸಂಶೋಧನಾ ಕೇಂದ್ರದ ತಜ್ಞರ ಕ್ಷೇತ್ರ ಭೇಟಿ

ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಧಾರವಾಡ ಹತ್ತಿ ಬೆಳೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಕೆ.ಎನ್.ಪವಾರ್ ಅವರು ಗದಗ ತಾಲ್ಲೂಕಿನ ಹೊಸಳ್ಳಿ, ಶ್ಯಾಗೋಟಿ, ದುಂದೂರು ಮೊದಲಾದ ಹಳ್ಳಿಗಳಲ್ಲಿ ಬೆಳೆದಿರುವ ಬಿಟಿ ಹತ್ತಿ ಕ್ಷೇತ್ರಗಳಿಗೆ ವಿಜ್ಞಾನಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. 

ಹೆಚ್ಚು ಮಳೆಯಾದ ಕಾರಣ ಹತ್ತಿ ಬೆಳೆಗೆ ಎಲೆ ಕೆಂಪಾಗುವಿಕೆ ಸಮಸ್ಯೆ ಕಂಡುಬಂದಿರುವುದನ್ನು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಈ ಸಮಸ್ಯೆಯನ್ನು ಹೋಗಲಾಡಿಸಲು ಶೇ 1ರಷ್ಟು ಮೆಗ್ನೇಷಿಯಂ ಸಲ್ಫೇಟ್ ಜತೆಗೆ ಶೇ 2ರ ಯೂರಿಯಾವನ್ನು ಹತ್ತಿ ಬೆಳೆಯು 70 ಹಾಗೂ 90 ದಿನಗಳಿದ್ದಾಗ ಸಿಂಪಡಣೆ ಮಾಡಬೇಕು ಎಂದು ತಿಳಿಸಿದರು.

ಈ ವರ್ಷ ಹೆಚ್ಚು ಮಳೆಯಾದ ಕಾರಣ ಬಿಟಿ ಹೈಬ್ರಿಡ್ ತಳಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾದ ಬೆಳವಣಿಗೆಯನ್ನು ನಿಯಂತ್ರಿಸಲು ಪ್ರತಿ ಲೀಟರ್ ನೀರಿಗೆ 0.60 ಮಿ.ಲೀ. ಸೈಕೋಸಿಲ್ ಸಸ್ಯಮಾರಕವನ್ನು ಬೆಳೆಯ 75 ಮತ್ತು 95 ದಿನಗಳಲ್ಲಿ ಸಿಂಪಡಿಸಬೇಕು. ಇದರಿಂದ ಬೆಳವಣಿಗೆ ನಿಯಂತ್ರಣಗೊಂಡು ಸಿಂಪಡಣೆ ಹಾಗೂ ಹತ್ತಿ ಬಿಡಿಸುವಿಕೆ ಕಾರ್ಯಕ್ಕೆ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.

ಧಾರವಾಡದ ಕೀಟ ತಜ್ಞ ಡಾ. ಎಸ್.ವಿ. ಹೂಗಾರ, ಹತ್ತಿಬೆಳೆಯಲ್ಲಿ ರಸಹೀರುವ ಕೀಟಗಳಾದ ಥ್ರಿಪ್ಸ್, ಜಿಗಿಹುಳು, ಬಿಳಿನೊಣ ಹಾಗೂ ಮಿರಿಡ್ ತಿಗಣೆಯ ಬಾಧೆ ಕಂಡು ಬಂದಿದ್ದು 0.30 ಗ್ರಾಂ ಫ್ಲೋನಿಕ್‍ಅಮಿಡ್ ಅಥವಾ 0.30 ಗ್ರಾಂ ಡೈನೋಟೆಫ್ಯುರಾನ್ ಅಥವಾ 2.0 ಮೀ.ಲೀ ಪ್ರೊಫೆನೋಫಾಸ್ ಅಥವಾ 1.0 ಗ್ರಾಂ ಅಸಿಫೇಟ್ ಕೀಟನಾಶಕಗಳನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ಸಲಹೆ ನೀಡಿದರು.

ಧಾರವಾಡ ಹತ್ತಿ ಸಂಶೋಧನಾ ಕೇಂದ್ರದ ಸಸ್ಯರೋಗಶಾಸ್ತ್ರಜ್ಞ ಡಾ. ವಿ.ಎಸ್. ಕುಲಕರ್ಣಿ ಮಾತನಾಡಿ, ಕಂದು ಎಲೆ ಚುಕ್ಕೆ ರೋಗ, ತುಕ್ಕುರೋಗ ಹಾಗೂ ಕಾಯಿಕೊಳೆ ರೋಗದ ನಿರ್ವಹಣೆಗೆ ಮೇಲಿನ ಕೀಟನಾಶಕಗಳ ಜೊತೆ 2.0 ಗ್ರಾಂ ಕ್ಲೋರೋಥಲೋನಿಲ್ ಅಥವಾ 3.0 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.50 ಗ್ರಾಂ ಸ್ಟ್ರೆಪ್ಟೋಮೈಸಿನ್ ಸಲ್ಫೇಟ್ ಅಥವಾ 2 ಗ್ರಾಂ ಮೆಂಕೋಜಬ್ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು ಎಂದು ತಿಳಿಸಿದರು.

ವ್ಯವಸ್ಥಾಪಕ ಶಂಭಣ್ಣ ಹಾದಿಮನಿ, ಹತ್ತಿಯ ಗುಲಾಬಿ ಹುಳುಗಳ ಸಮೀಕ್ಷೆಗೆ ಮೋಹಕ ಬಲೆಗಳ ಬಳಕೆ ಹಾಗೂ ಅವುಗಳ ಉಪಯುಕ್ತತೆಯನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತಿಳಿಸಿದರು.

ಗದಗ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಿ.ಎಂ.ರಫಿ ಮಾತನಾಡಿ, ಧಾರವಾಡದ ಹತ್ತಿ ಸಂಶೋಧನಾ ಕೇಂದ್ರದಿಂದ ಈ ವರ್ಷ ಸಮಗ್ರ ಬೆಳೆ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಶ್ಯಾಗೋಟಿ ಗ್ರಾಮದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು