ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರಿಂದ ಸಾಮಾಜಿಕಬದಲಾವಣೆ: ಸಿದ್ಧರಾಮ ಶ್ರೀ

Last Updated 11 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಗದಗ: ‘ತಾರತಮ್ಯದಿಂದ ಕೂಡಿದ ಸಮಾಜವನ್ನು ಬಾಲ್ಯದಲ್ಲಿಯೇ ಗಮನಿಸಿದ್ದ ಬಸವಣ್ಣನವರು ಅದಕ್ಕೆ ಪರಿಹಾರ ಕಂಡು ಹಿಡಿಯುವ ದಿಸೆಯಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡರು’ ಎಂದು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಬಸವಣ್ಣನವರು ವ್ಯಕ್ತಿಗತವಾಗಿದ್ದ ಧಾರ್ಮಿಕ ಆಚರಣೆಗಳನ್ನು ಸಾಮಾಜೀಕರಣಗೊಳಿಸುವ ಕಾರ್ಯವನ್ನು ಮಾಡಿದರು. ಜಾತಿ, ಲಿಂಗ ಆಧಾರಿತ ತಾರತಮ್ಯಗಳಿಗೆ ತಮ್ಮ ಬದುಕು ಹಾಗೂ ಕಾಯಕದ ಮೂಲಕ ಪರಿಹಾರ ಸೂಚಿಸಿದರು ಜಗತ್ತಿನ ಯಾವ ಭಾಗದಲ್ಲಿಯೂ ಕಾಣದ ಸಾಮಾಜಿಕ ಬದಲಾವಣೆಗೆ ಶರಣರು ಕಾರಣರಾದರು’ ಎಂದು ತಿಳಿಸಿದರು.

‘ಸಮಾಜ ವಿಜ್ಞಾನಿಯಾಗಿ ಬಸವಣ್ಣ’ ಎಂಬ ವಿಷಯದ ಕುರಿತು ಡಾ. ಮಹಾಂತದೇವರು ಉಪನ್ಯಾಸ ನೀಡಿ, ‘ಸಮಾಜದಲ್ಲಿ ನೆಲೆಯೂರಿದ್ದ ತಾರತಮ್ಯ ತೊಡೆದು ಹಾಕುವ ಪ್ರಯತ್ನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಶರಣರು ಯಶಸ್ವಿಯಾದರು. ಕೆಳವರ್ಗದ ನಾಗಿಮಯ್ಯನವರನ್ನು ಶಿವಭಕ್ತರನ್ನಾಗಿ ಮಾಡುವ ಮೂಲಕ ಆತ್ಮವಿಶ್ವಾಸ ವೃದ್ಧಿಸುವ ಕಾರ್ಯ ಮಾಡಿದರು. ಕಾಯಕ ಸಿದ್ಧಾಂತದ ಮೇಲೆ ಸಮಾಜವನ್ನು ಕಟ್ಟಿದರು. ಕಾಯಕಕ್ಕೆ ಲಿಂಗಪೂಜೆಯ ಮಹತ್ವವನ್ನು ನೀಡಿದರು. ಬಸವಣ್ಣನವರ ಸಿದ್ಧಾಂತವನ್ನು ಹೊರಗಿನವರು ಅರ್ಥೈಸಿಕೊಂಡಂತೆ ನಾವು ಭಾರತೀಯರು ಅರ್ಥ ಮಾಡಿಕೊಂಡಿಲ್ಲದಿರುವುದು ವಿಷಾದನೀಯ’ ಎಂದರು.

ಶ್ರೀಲಂಕಾದ ಬುದ್ಧ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ವಿಜ್ಞಾನ ಮತ್ತು ಬಸವಣ್ಣ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪಡೆದ ಡಾ.ಮಹಾಂತದೇವರನ್ನು ಡಾ.ತೋಂಟದ ಸಿದ್ಧರಾಮ ಶ್ರೀಗಳು ಸನ್ಮಾನಿಸಿದರು.

ರಾಜೇಶ್ವರಿ ಕಲಾಕುಟೀರ ವಿದ್ಯಾರ್ಥಿಗಳಿಂದ ಹರಳಯ್ಯನವರ ಪ್ರಸಾದ, ವಚನನೃತ್ಯ, ಭಕ್ತಿಪ್ರಧಾನ ನೃತ್ಯ ನಡೆಯಿತು. ಸಚಿನ್ ಕೊಟ್ರೇಶ ಅಳವಂಡಿ ಧರ್ಮಗ್ರಂಥ ಪಠಣಹಾಗೂ ಬಸಮ್ಮ ಕೊಟ್ರೇಶ ಅಳವಂಡಿ ವಚನ ಚಿಂತನೆ ನೆರವೇರಿಸಿದರು.

ಗೌರಕ್ಕ ಬಡಿಗಣ್ಣವರ ನಿರೂಪಿಸಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು. ವಿವೇಕಾನಂದಗೌಡ ಪಾಟೀಲ, ಸಂಗಮೇಶ ದುಂದೂರ, ಶಶಿಧರ ಬೀರನೂರ, ಡಾ.ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಪ್ರಕಾಶ ಅಸುಂಡಿ, ವೀರಣ್ಣ ಗೊಡಚಿ, ಶಿವನಗೌಡ ಗೌಡರ, ರತ್ನಕ್ಕ ಪಾಟೀಲ, ಮಹಾಂತಣ್ಣ ಬಡ್ನಿ, ಮೃತ್ಯುಂಜಯ ಸಂಕೇಶ್ವರ, ದಾನಪ್ಪ ತಡಸದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT