ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ | ವೀರಭದ್ರೇಶ್ವರ ರಥೋತ್ಸವ: ₹1 ಕೋಟಿ ವೆಚ್ಚದಲ್ಲಿ ನೂತನ ಗಡ್ಡಿ ತೇರು

Published 23 ಮೇ 2024, 5:47 IST
Last Updated 23 ಮೇ 2024, 5:47 IST
ಅಕ್ಷರ ಗಾತ್ರ

ನರಗುಂದ: ತಾಲ್ಲೂಕಿನ ಕೆಲವೇ ದೊಡ್ಡ ಗ್ರಾಮಗಳಲ್ಲಿ ಒಂದಾದ ಕೊಣ್ಣೂರ ಹೋಬಳಿಯ ಹದಲಿ ಗ್ರಾಮದಲ್ಲಿ ಐತಿಹಾಸಿಕ ವೀರಭದ್ರೇಶ್ವರ ರಥೋತ್ಸವ ಗುರುವಾರ, ಆಗಿ ಹುಣ್ಣಿಮೆ ದಿವಸ ಸಂಭ್ರಮದಿಂದ ನಡೆಯಲಿದೆ.

ರಾಮದುರ್ಗ ಸಂಸ್ಥಾನದ ಭಾವೆ ವಂಶಸ್ಥರ ಆಡಳಿತಕ್ಕೆ ಒಳಪಟ್ಟ ಈ ಗ್ರಾಮವು ಧಾರ್ಮಿಕವಾಗಿ ವಿಶೇಷತೆ ಹೊಂದಿದೆ. ಅದರಲ್ಲೂ ಈ ವರ್ಷ ₹1 ಕೋಟಿ ವೆಚ್ಚದಲ್ಲಿ ಭಕ್ತರ ದೇಣಿಗೆಯಿಂದ ನಿರ್ಮಿಸಲ್ಪಟ್ಟ ನೂತನ ಗಡ್ಡಿ ತೇರು ಎಳೆಯುತ್ತಿರುವುದು ವಿಶೇಷ.

ಐತಿಹಾಸಿಕ ಹಿನ್ನೆಲೆ: ಹದಲಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಹಾಗೂ ರಥೋತ್ಸವಕ್ಕೆ ಶ್ರೀಮಂತ ಐತಿಹಾಸಿಕ ಹಿನ್ನೆಲೆ ಇದೆ. ಮೂರು ನೂರು ವರ್ಷಗಳ ಹಿಂದೆಯೇ ರುದ್ರಭೂಮಿಯಾಗಿದ್ದ ಈ ಸ್ಥಳದಲ್ಲಿ ವೀರಭದ್ರೇಶ್ವರರ ಉದ್ಭವ ಮೂರ್ತಿ ಇತ್ತು. ಆದರೆ ನಂತರದ ದಿನಗಳಲ್ಲಿ ಈ ಭಾಗದಲ್ಲಿ ಟಿಪ್ಪು ಸುಲ್ತಾನ್ ದಾಳಿ ನಡೆಸಲು ಮುಂದಾಗಿದ್ದನು. ಆ ಸಂದರ್ಭದಲ್ಲಿ ಹದಲಿ ಗ್ರಾಮದ ಗುರುಹಿರಿಯರು ವೀರಭದ್ರ ದೇವರ ಮೂರ್ತಿ ರಕ್ಷಣೆಗೆ ಊರ ಹೊರಗಿನ ಹೊಲದಲ್ಲಿ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಆದರೆ, ಕೆಲವು ದಿನಗಳ ಬಳಿಕ ನೋಡಿದಾಗ ಹೊಲದಲ್ಲೂ ಮೂರ್ತಿ ಕಾಣಿಸಲಿಲ್ಲ. ನಂತರ ಊರಿನ ಹಿರಿಯರು ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ದಾಳಿ ಮಾಡಿದ ಟಿಪ್ಪು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಪ್ರಾಯಶ್ಚಿತಕ್ಕೆಂದು ವೀರಭದ್ರೇಶ್ಲರನಿಗೆ ದಂಡಿಗೆ ಕಾಣಿಕೆ ನೀಡಿದನೆಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ.

ಆ ದಂಡಿಗೆ (ಪಲ್ಲಕ್ಕಿಯ ಮೇಲೆ ಉದ್ದನಾಗಿ ಬಳಸಿದ ಕಟ್ಟಿಗೆ) ಇಂದಿಗೂ ವೀರಭದ್ರೇಶ್ವರನ ಪಲ್ಲಕ್ಕಿಯಲ್ಲಿ ಬಳಸಲಾಗುತ್ತದೆ. 1970ರಲ್ಲಿ ಮೂರ್ತಿ ಬದಲಾಯಿಸಿ ಕಳೆದ ಐವತ್ತು ವರ್ಷಗಳಿಂದ ಹೊಸ ವೀರಭದ್ರೇಶ್ವರ ಮೂರ್ತಿ ಪೂಜಿಸಲಾಗುತ್ತದೆ.

ಆಭರಣ,ಅಲಂಕಾರಿಕ ವಸ್ತುಗಳು ಖಜಾನೆಯಲ್ಲಿ: ಐತಿಹಾಸಿಕ ವೀರಭದ್ರೇಶ್ವರರ ಮೂರ್ತಿಯ ಆಭರಣಗಳು, ಅಲಂಕಾರಿಕ ಸಾಮಗ್ರಿಗಳು ಸರ್ಕಾರದ ಸುಪರ್ದಿಯ ಖಜಾನೆಯಲ್ಲಿವೆ. ಅವುಗಳು ಇರುವ ಬಗ್ಗೆ ತಾಲ್ಲೂಕು ಆಡಳಿತ ಐದು ವರ್ಷಗಳ ಹಿಂದೆ ವೀರಭದ್ರೇಶ್ವರ ಟ್ರಸ್ಟ್ ಕಮಿಟಿಗೆ ತಿಳಿಸಿದೆ. ಆದರೂ ಅವುಗಳನ್ನು ಇಲ್ಲೀವರೆಗೆ ತಂದು ಅಲಂಕಾರ ಮಾಡಿದ್ದಿಲ್ಲ. ಆದರೆ ಈ ವರ್ಷ ನೂತನ ರಥೋತ್ಸವ ಇರುವುದರಿಂದ ಸಮಿತಿ ಸದಸ್ಯರು, ಗ್ರಾಮಸ್ಥರು ಸರ್ಕಾರದ ಸುಪರ್ದಿಯಲ್ಲಿರುವ ಆಭರಣಗಳನ್ನು ತಂದು ಅಲಂಕಾರಕ್ಕೆ ಮುಂದಾಗಿದ್ದಾರೆ.

ನೂತನ ತೇರಿನ ವಿಶೇಷ: ಎರಡು ನೂರು ವರ್ಷಗಳ ಹಳೆಯದಾದ ರಥವು ಶಿಥಿಲಗೊಂಡಿದ್ದ ಕಾರಣ ನೂತನ ಗಡ್ಡಿ ತೇರು ಹಿಂದಿನ ತೇರಿನ ಮಾದರಿಯಲ್ಲಿ ನಿರ್ಮಾಣಗೊಂಡಿದೆ. ಈ ಭಾಗದಲ್ಲಿಯೇ ಅತಿ ಎತ್ತರದ 41 ಅಡಿ ಎತ್ತರ ಹೊಂದಿದೆ. ರಥ ಶಿಲ್ಪಿ ಶಿರಹಟ್ಟಿ ತಾಲ್ಲೂಕಿನ ವರವಿ ಗ್ರಾಮದ ಮೌನೇಶ ಪತ್ತಾರ ನಿರ್ಮಿಸಿದ್ದಾರೆ. ಇದು ಹರಕೆಸಿಂಹ ಆಕೃತಿಯ ಅಷ್ಟಮೂಲಿ ಶೈಲಿಯಲ್ಲಿದೆ. ತೇರಿಗೆ ಸಾಗವಾನಿ ಹಾಗೂ ಕಬ್ಬಿಣ ಬಳಕೆ ಮಾಡಲಾಗಿದೆ.

‘ಇದು ಹಳೆ ಪರಂಪರೆ ನವಭೃಂಗಿಗಳಿಂದ ಕೂಡಿದ ಬ್ರಹ್ಮರಥವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷ ರಥವಾಗಿದೆ’ ಎನ್ನುತ್ತಾರೆ  ರಥಶಿಲ್ಪಿ ಮೌನೇಶ ಪತ್ತಾರ.

ವೀರಭದ್ರೇಶ್ವರ ಮೂರ್ತಿ
ವೀರಭದ್ರೇಶ್ವರ ಮೂರ್ತಿ
ಹದಲಿಯ ವೀರಭದ್ರೇಶ್ವರ ದೇವಸ್ಥಾನ
ಹದಲಿಯ ವೀರಭದ್ರೇಶ್ವರ ದೇವಸ್ಥಾನ
ನೂತನ ಗಡ್ಡಿತೇರಿನ ರಥೋತ್ಸವ ₹1 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಹದಲಿಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅದ್ದೂರಿ ನೂತನ ರಥೋತ್ಸವ ನಡೆಯಲಿದೆ
ಸುರೇಶಗೌಡ ತಮ್ಮನಗೌಡ್ರ ಅಧ್ಯಕ್ಷ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT