ಬುಧವಾರ, ಸೆಪ್ಟೆಂಬರ್ 22, 2021
21 °C
ನದಿ ಮೂಲದಿಂದ ಕುಡಿಯುವ ನೀರು ಪೂರೈಕೆ

ದಶಕದ ನಂತರ ತಗ್ಗಿದ ಬವಣೆ; ನೀರ ನೆಮ್ಮದಿ ತಂದ ಬಹುಗ್ರಾಮ ಯೋಜನೆ

ಜೋಮನ್‌ ವರ್ಗೀಸ್‌ Updated:

ಅಕ್ಷರ ಗಾತ್ರ : | |

Prajavani

ಗದಗ: ದಶಕದಿಂದ ಜಿಲ್ಲೆ ಎದುರಿಸುತ್ತಿದ್ದ ನೀರಿನ ಸಮಸ್ಯೆಗೆ ಈ ಬೇಸಿಗೆಯಲ್ಲಿ ಬಹುತೇಕ ಮುಕ್ತಿ ಲಭಿಸಿದೆ. ಸದ್ಯ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಯಡಿ ಜಿಲ್ಲೆಯ 337 ಜನವಸತಿ ಪ್ರದೇಶಗಳಿಗೆ, ತುಂಗಭದ್ರಾ ಮತ್ತು ಮಲಪ್ರಭಾ ನದಿ ಮೂಲದಿಂದ ನೀರು ಪೂರೈಕೆಯಾಗುತ್ತಿದ್ದು, ನೀರಿನ ಬವಣೆ ಗಣನೀಯವಾಗಿ ತಗ್ಗಿದೆ.

ವರ್ಷದ ಹಿಂದಿನವರೆಗೂ ಜಿಲ್ಲೆಯ ಪ್ರಮುಖ ಜನವಸತಿ ಪ್ರದೇಶಗಳಿಗೆ 15ರಿಂದ 20 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. 2016ರಲ್ಲಿ ಜಿಲ್ಲಾ ಕೇಂದ್ರ ಗದುಗಿನಲ್ಲಿಯೇ 40 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗಿತ್ತು. ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಕಾದಾಟ ಪ್ರಾರಂಭವಾಗುತ್ತಿತ್ತು. ಆದರೆ, ಈ ಬೇಸಿಗೆಯಲ್ಲಿ ಚಿತ್ರಣ ಬದಲಾಗಿದೆ. ಬಹುಗ್ರಾಮ ಯೋಜನೆಯು ಜಿಲ್ಲೆಗೆ ದೊಡ್ಡ ಮಟ್ಟದಲ್ಲಿ ನೀರ ನೆಮ್ಮದಿ ಒದಗಿಸಿದೆ.

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ₹ 1,049 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಿದೆ. ತುಂಗಭದ್ರಾ ನದಿಯಿಂದ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ತಾಲ್ಲೂಕಿನ 208 ಗ್ರಾಮಗಳಿಗೆ ಹಾಗೂ ಮುಂಡರಗಿ ಪಟ್ಟಣಕ್ಕೆ ನೀರು ಪೂರೈಕೆ ಆಗುತ್ತಿದೆ. ಮಲಪ್ರಭಾ ನದಿಯಿಂದ ನರಗುಂದ, ರೋಣ, ಗಜೇಂದ್ರಗಡ ತಾಲ್ಲೂಕುಗಳ 129 ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದೆ. ‘ಡಿಬಿಒಟಿ’ (ವಿನ್ಯಾಸ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ) ಮಾದರಿಯಲ್ಲಿ ಎಲ್‌ ಆ್ಯಂಡ್‌ ಟಿ ಕಂಪೆನಿ ಹಾಗೂ ತಹಲ್ ಗ್ರೂಪ್ 5 ವರ್ಷಗಳ ಅವಧಿಗೆ ಈ ಯೋಜನೆಯ ನಿರ್ವಹಣೆ ಹೊಣೆ ವಹಿಸಿಕೊಂಡಿವೆ.

ಈ ಯೋಜನೆಯಡಿ ಜಿಲ್ಲೆಯ ಹಮ್ಮಗಿ, ಜಾಲವಾಡಗಿ, ಸುಗನಹಳ್ಳಿ, ಚಿಕ್ಕವಡ್ಡಟ್ಟಿ, ಹಾರೊಗೇರಿ ಸೇರಿ 8 ಕಡೆ ನೀರೆತ್ತುವ ಘಟಕ ಮತ್ತು 12 ಕಡೆ ಜಲ ಸಂಗ್ರಹಗಾರ ನಿರ್ಮಿಸಲಾಗಿದೆ. 890ಕಿ.ಮೀ ಉದ್ದದ ಪೈಪ್‌ಲೈನ್‌ ಅಳವಡಿಕೆ ಮಾಡಲಾಗಿದೆ.

‘ಡಿಬಿಒಟಿ ಕಾಮಗಾರಿ ಪೂರ್ಣಗೊಂಡಿದ್ದು, ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೆ ಪ್ರತಿದಿನ ನೀರು ಪೂರೈಕೆಯಾಗುತ್ತಿದೆ. ಈ ಬಾರಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲೂ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕಾದ ಸ್ಥಿತಿ ಎದುರಾಗಿಲ್ಲ’ ಎಂದು ಜಿಲ್ಲೆಯ ಗ್ರಾಮೀಣ ಕುಡಿಯವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪಿ.ಎ ಕನವಳ್ಳಿ ತಿಳಿಸಿದರು.

ಗದುಗಿನಲ್ಲಿ ನಿರಂತರ ನೀರು

‘24x7 ನಿರಂತರ ಕುಡಿಯುವ ನೀರಿನ ಯೋಜನೆ ಜಾರಿಗೊಂಡ ಬಳಿಕ, ಕಳೆದೊಂದು ವರ್ಷದಿಂದ ಜಿಲ್ಲಾ ಕೇಂದ್ರ ಗದುಗಿನಲ್ಲಿ 2ರಿಂದ 3 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಮುಂಡರಗಿ ತಾಲ್ಲೂಕಿನ ಹಮ್ಮಿಗೆ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯ ಬ್ಯಾರೇಜ್‌ನಿಂದ ನೇರವಾಗಿ ಗದಗ ನಗರದ 30 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ಪೂರೈಕೆಯಾಗುತ್ತಿದೆ. ‘ಈ ಯೋಜನೆಯಿಂದ ಇಡೀ ರಾಜ್ಯವೇ ಜಿಲ್ಲೆಯತ್ತ ತಲೆಎತ್ತಿ ನೋಡುವಂತಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ ಗದಗ–ಬೆಟಗೇರಿ ಅವಳಿ ನಗರದ ಎಲ್ಲ ಮನೆಗಳಿಗೆ ನಿರಂತರ ನೀರು ಪೂರೈಸಲಾಗುವುದು’ ಎಂದು ಶಾಸಕ ಎಚ್‌.ಕೆ ಪಾಟೀಲ ಹೇಳಿದರು. 

ಕೆರೆ ತುಂಬಿತು; ಅಂತರ್ಜಲ ಹೆಚ್ಚಿತು

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನರು ಕುಡಿಯುವ ನೀರಿಗೆ ಕೆರೆಗಳನ್ನೇ ಆಶ್ರಯಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ ಜಿಲ್ಲೆಯ 1.59 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುವ ತುಂಗಭದ್ರಾ ನದಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಯ ಕಾಲುವೆ ಮೂಲಕ, ಜಿಲ್ಲಾಡಳಿತವು ಕಳೆದ ಮಳೆಗಾಲದಲ್ಲಿ ಮುಂಡರಗಿ ತಾಲ್ಲೂಕಿನ ಬಸಾಪುರ, ತಾಂಬ್ರಗುಂಡಿ, ಡಂಬಳದ ವಿಕ್ಟೋರಿಯಾ, ಗದುಗಿನ ಭೀಷ್ಮ ಕೆರೆ ಸೇರಿದಂತೆ ಪ್ರಮುಖ ಕೆರೆಗಳಿಗೆ ನೀರು ತುಂಬಿಸಿತ್ತು. ಕೆರೆ ತುಂಬಿರುವ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಸಿದ್ದು, ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ಮತ್ತೆ ಜೀವ ಜಲ ಉಕ್ಕಿದೆ.

‘ಟ್ಯಾಂಕರ್‌ ನೀರಿಗೆ ಬೇಡಿಕೆ ಇಲ್ಲ’

ಕಳೆದ ಬೇಸಿಗೆಯಲ್ಲಿ ಜಿಲ್ಲೆಯ 33 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ಜಿಲ್ಲಾಡಳಿತ ಕೆಲವೆಡೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿತ್ತು. ಈ ಬಾರಿ ಯಾವುದೇ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿಲ್ಲ. ‘ಜಿಲ್ಲೆಯಲ್ಲಿ 474 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಇವುಗಳಲ್ಲಿ 450 ಘಟಕಗಳು ಚಾಲನೆಯಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿ ನೀರಿಗೆ ಸಮಸ್ಯೆ ಎದುರಾಗಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಮಂಜುನಾಥ ಚವ್ಹಾಣ ಹೇಳಿದರು.

ಸಹಾಯವಾಣಿ ಸಂಖ್ಯೆ: 08372- 234364

**

ಬಹುಗ್ರಾಮ ಕುಡಿಯುವ ನೀರು ಮತ್ತು ಗದಗ ನಗರಕ್ಕೆ 24x7 ಮಾದರಿಯಲ್ಲಿ ನಿರಂತರ ನೀರು ಪೂರೈಸುವ ಯೋಜನೆಗಳು ಇಡೀ ಜಿಲ್ಲೆಗೆ ನೀರಿನ ಸಮಾಧಾನ ತಂದಿವೆ.ಜನರ ಸಮಾಧಾನವೇ ನಮ್ಮ ತೃಪ್ತಿ
– ಎಚ್‌.ಕೆ ಪಾಟೀಲ,ಶಾಸಕ

**

ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದರೆ, ಸಾರ್ವಜನಿಕರಿಗೆ ದೂರು ಸಲ್ಲಿಸಲು ಮತ್ತು ಅದಕ್ಕೆ ತ್ವರಿತವಾಗಿ ಸ್ಪಂದಿಸಲು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ.
– ಎಂ.ಜಿ ಹಿರೇಮಠ, ಗದಗ ಜಿಲ್ಲಾಧಿಕಾರಿ 

**

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈ ಬಾರಿ ನೀರಿನ ಸಮಸ್ಯೆ ಇಲ್ಲ. ಡಿಬಿಒಟಿ ಮೂಲಕ ನಿತ್ಯ ಸರಾಸರಿ 50ರಿಂದ 55 ಎಂಎಲ್‌ಡಿಯಷ್ಟು ನೀರು ಪೂರೈಸುತ್ತಿದ್ದೇವೆ
–ಪಿ.ಎ ಕನವಳ್ಳಿ, ಕಾರ್ಯನಿರ್ವಾಹಕ ಎಂಜಿನಿಯರ್‌,ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು