ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭುಗಿಲೆದ್ದ ಆಕ್ರೋಶ

Published 27 ಮಾರ್ಚ್ 2024, 14:17 IST
Last Updated 27 ಮಾರ್ಚ್ 2024, 14:17 IST
ಅಕ್ಷರ ಗಾತ್ರ

ಹಾಸನ: ನಗರದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ವಿರುದ್ಧ ಅರಕಲಗೂಡು ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀಧರ್ ಗೌಡ ಬೆಂಬಲಿಗರು ಆಕ್ರೋಶ ಹೊರಹಾಕಿದರು. ಆ ಮೂಲಕ, ‘ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ’ ಎಂಬುದು ಮತ್ತೊಮ್ಮೆ ಸಾಬೀತಾಯಿತು. 

ಮಾರ್ಚ್‌ 30ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿರುವ ಹಿನ್ನೆಲೆಯಲ್ಲಿ, ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪ‍ಡಿಸಿದ್ದ ಸಭೆಯಲ್ಲಿ ಮಾತನಾಡಿದ ಶ್ರೀಧರ್‌ಗೌಡ, ‘ಈ ಬಾರಿ ಅರಕಲಗೂಡಿನಲ್ಲಿ 30 ಸಾವಿರ ಲೀಡ್ ಕೊಡುತ್ತೇವೆ’ ಎಂದು ಹೇಳಿದರು.

ನಂತರ ಅವರ ಮಾತನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಕೆ.ಎನ್.ರಾಜಣ್ಣ, ‘30 ಸಾವಿರ ಲೀಡ್ ನೀಡೋನು, ಚುನಾವಣೆಯಲ್ಲಿ ಯಾಕಪ್ಪ ಮೂರನೇ ಸ್ಥಾನಕ್ಕೆ ಹೋದೆ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಅದಕ್ಕೆ ಆಕ್ಷೇಪಿಸಿದ ಶ್ರೀಧರ್‌ಗೌಡ ಬೆಂಬಲಿಗರು ಕೂಗಾಟ ಆರಂಭಿಸಿ, ಭಾಷಣಕ್ಕೆ ಅಡ್ಡಿಪಡಿಸಿದರು.

ಅದರಿಂದ ಕೆರಳಿದ ರಾಜಣ್ಣ, ‘ನೀವು ಶ್ರೇಯಸ್ ಪಟೇಲ್ ಗೆಲ್ಲಿಸಲು ಬಂದಿದ್ದೀರಾ ಅಥವಾ ಸೋಲಿಸಲು ಬಂದ್ದಿದ್ದೀರಾ? ನಿಮ್ಮ ನಡವಳಿಕೆ ಶ್ರೀಧರ್‌ಗೌಡ ಅವರ ರಾಜಕೀಯ ಭವಿಷ್ಯಕ್ಕೆ ಮಾರಕವಾಗಲಿದೆ’ ಎಂದು‌ ಎಚ್ಚರಿಸಿದರು.

ಶ್ರೀಧರ್‌ಗೌಡ ಎದ್ದು ನಿಂತು, ಸುಮ್ಮನಾಗುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರೂ, ಕಾರ್ಯಕರ್ತರು ಭಾಷಣಕ್ಕೆ ಅಡ್ಡಿಪಡಿಸುವುದನ್ನು ಮುಂದುವರಿಸಿದರು. ಅದರಿಂದ ಮತ್ತಷ್ಟು ಆಕ್ರೋಶಗೊಂಡ ರಾಜಣ್ಣ, ‘ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಾಡಿಗೆ ಗಿರಾಕಿಗಳು’ ಎಂದರು. ಅದಕ್ಕೆ ಪ್ರತಿಯಾಗಿ ಕಾರ್ಯಕರ್ತರ ವಿರೋಧವೂ ಹೆಚ್ಚಿತು.

ವೇದಿಕೆಯಲ್ಲಿದ್ದ ಮುಖಂಡರು, ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದವರ ಮೇಲೆ ಮುಗಿಬಿದ್ದರು.‌ ಪರಸ್ಪರ ಕೈಕೈ ಮಿಲಾಯಿಸುವ ಹಂತ ತಲುಪಿತು. ಕೆಲವರು ಕುರ್ಚಿಗಳನ್ನು ಎತ್ತಿಹಾಕಿ ಆಕ್ರೋಶ ಹೊರಹಾಕಿದರು.

ಕಾರ್ಯಕರ್ತರನ್ನು ನಿಯಂತ್ರಿಸಲು ಮುಖಂಡರು ಹರಸಾಹಸಪಟ್ಟರೂ ಫಲ ಸಿಗದಿದ್ದರಿಂದ ರಾಜಣ್ಣ ಭಾಷಣ ನಿಲ್ಲಿಸಿ, ಸಿಟ್ಟಿನಿಂದಲೇ ವೇದಿಕೆ ಮೇಲೆ ಹೋಗಿ ಕುಳಿತರು. ಪಕ್ಷದ ಉಸ್ತುವಾರಿಯಾಗಿ ಬಂದಿದ್ದ ಚುನಾವಣಾ ಉಸ್ತುವಾರಿ ಜಿ.ಸಿ. ಚಂದ್ರಶೇಖರ್ ಅವರೂ ಗಲಾಟೆ ನೋಡುತ್ತ ಮೌನವಾಗಿ ಕುಳಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT