ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು: ಅಪಾಯ ಮರುಕಳುಹಿಸದಂತೆ ಮುಂಜಾಗ್ರತೆ ವಹಿಸಿ– ರಜನೀಶ್ ಗೋಯಲ್ ಸೂಚನೆ

ಮುಂಗಾರು ಸವಾಲು ಕುರಿತ ಸಭೆ
Last Updated 10 ಮೇ 2019, 14:16 IST
ಅಕ್ಷರ ಗಾತ್ರ

ಹಾಸನ: ಮುಂಗಾರು ಅವಧಿಯಲ್ಲಿ ಎದುರಾಗಬಹುದಾದ ಸಂಭವನೀಯ ಪ್ರಾಕೃತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಸನ್ನದ್ಧವಾಗಿರಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೂಚನೆ ನೀಡಿದರು.

ಮುಂಗಾರು ಸವಾಲುಗಳಿಗೆ ಸಿದ್ಧತೆ ಕುರಿತ ಉನ್ನತ ಮಟ್ಟದ ಸಭೆ ಉದ್ದೇಶಿಸಿ ಅವರು ಮಾತನಾಡಿದ ಅವರು, ಜಿಲ್ಲೆಯ ಶಿರಾಡಿ ಘಾಟ್, ಮಾಗೇರಿ ಹಾಗೂ ಬಿಸಿಲು ರಸ್ತೆಗಳಲ್ಲಿ ಹಲವೆಡೆ ಭೂ ಕುಸಿತ ಸಂಭವಿಸಿದ್ದು, ಈ ಬಾರಿ ಅಂತಹ ಅಪಾಯಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕು. ಎಲ್ಲೆಲ್ಲಿ ಕುಸಿತ ಸಾಧ್ಯತೆಗಳಿವೆಯೋ ಅಲ್ಲಿ ಅಗತ್ಯ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರಾಕೃತಿಕ ವಿಕೋಪಗಳನ್ನು ಎಲ್ಲಾ ಇಲಾಖೆಗಳು ಒಂದು ತಂಡವಾಗಿ ಎದುರಿಸಬೇಕು. ಪರಸ್ಪರ ಸಹಕಾರ-ಸಮನ್ವಯ ಮುಖ್ಯ. ಅದಕ್ಕೆ ಬೇಕಾದ ಸಾಧನ-ಸಲಕರಣೆಗಳು, ಮಾನವ ಸಂಪನ್ಮೂಲ, ತಾಂತ್ರಿಕ ನೆರವುಗಳನ್ನು ಮೊದಲೇ ಗುರುತಿಸಿಟ್ಟುಕೊಳ್ಳಬೇಕಿದೆ ಎಂದು ಸೂಚಿಸಿದರು.

‌ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವೈದ್ಯರ ದೂರವಾಣಿ ಸಂಖ್ಯೆ, ವಿಳಾಸ, ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಪಟ್ಟಿ ಮಾಡಿ ನೀಡಬೇಕು. ಕುಡಿಯುವ ನೀರು ಶುದ್ಧಿಕರೀಸುವ ಮಾತ್ರೆಗಳು ಸೇರಿದಂತೆ ಎಲ್ಲಾ ರೀತಿಯ ಔಷಧಗಳನ್ನು ದಾಸ್ತಾನು ಇರಿಸಬೇಕೆಂದು ತಿಳಿಸಿದರು.

ಪ್ರವಾಹ, ಗುಡ್ಡ ಕುಸಿತ ಮತ್ತಿತರ ಅಪಾಯಗಳು ಸಂಭವಿಸಿದಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ತಾಣಗಳ ಸ್ಥಳ ಗುರುತಿಸಿ ಊಟೋಪಚಾರ ಪೂರೈಕೆಗೆ ಯೋಜನೆ ರೂಪಿಸಿರಬೇಕು. ಈ ವೇಳೆ ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳ ಆಹಾರವನ್ನು ಪೂರೈಸಲು ಇಲಾಖೆ ಅಗತ್ಯ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

ಅಪಾಯಕಾರಿ ರಸ್ತೆ ಮಾರ್ಗ ಗುರುತಿಸಿ, ರಸ್ತೆಗೆ ಬೀಳಬಹುದಾದ ಮರ ಅಥವಾ ಕೊಂಬೆಗಳನ್ನು ತೆರವುಗೊಳಿಸಬೇಕು. ವಿದ್ಯುತ್ ಮಾರ್ಗ ಸುಗಮಗೊಳಿಸಿ ಇಟ್ಟುಕೊಳ್ಳಬೇಕು. ಮಳೆ ಸಂದರ್ಭದಲ್ಲಿ ಸಂಪರ್ಕ ಕಡಿತಗೊಳ್ಳಬಹುದಾದ ಪ್ರದೇಶದಲ್ಲಿ ನಿರಂತರ ಸಂವಹನ ಪ್ರಕ್ರಿಯೆ ಕೈಗೊಳ್ಳಲು ಬಿಎಸ್‍ಎನ್‍ಎಲ್ ಮಾಡಿಕೊಂಡಿರುವ ಪೂರ್ವ ತಯಾರಿ ಮರು ಪರಿಶೀಲಿಸಿ, ಎಲ್ಲೆಲ್ಲಿ ಜನರೇಟರ್‌ಗಳಿಗೆ ಇಂಧನದ ಅಗತ್ಯದ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದು ರಜನೀಶ್‌ ಸೂಚಿಸಿದರು.

ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಲೋಕೋಪಯೋಗಿ ಇಲಾಖೆ ಮುಂದಿನ 10 ದಿನದೊಳಗೆ ತಮ್ಮ ವ್ಯಾಪ್ತಿಯ ರಸ್ತೆ ಬದಿ ಇರುವ ಗಿಡ, ಗಂಟಿಗಳನ್ನು ತೆರವುಗೊಳಿಸಿ, ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯಲು ಕ್ರಮವಹಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ , ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್ ಕುಮಾರ್ ಅವರು ಹಲವು ಸಲಹೆ, ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಹಾರಕ್ಕೆ ಈವರೆಗೆ ಬಿಡುಗಡೆಯಾಗಿರುವ ಅನುದಾನ, ಕೈಗೊಂಡಿರುವ ಕ್ರಮಗಳು, ಮುಂಬರುವ ಮುಂಗಾರು ಸಂದರ್ಭದಲ್ಲಿ ಸಂಭವನೀಯ ಅಪಾಯವನ್ನು ಎದುರಿಸಲು ಮಾಡಿಕೊಂಡಿರುವ ಸಿದ್ಧತಾ ಯೋಜನೆಗಳು, ತಾಲ್ಲೂಕುವಾರು ಸಮಿತಿಗಳ ರಚನೆ, ಕುಡಿಯುವ ನೀರಿನ ಸ್ಥಿತಿ ಗತಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಪ್ರಕಾಶ್ ಅವರು ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಕೈಗೊಂಡಿರುವ ಕ್ರಮಗಳು, ಹಾಗೂ ಗ್ರಾಮ ಪಂಚಾಯಿತಿ ಹಂತಗಳ ಸಿದ್ಧತೆಗಳ ಬಗ್ಗೆ ವಿವರಿಸಿದರು.

ದಕ್ಷಿಣ ವಲಯ ಐಜಿಪಿ ಉಮೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್, ಕೆಎಸ್‍ಎನ್‍ಡಿಎಂಸಿ ನಿರ್ದೇಶಕ ಜಿ.ಎಸ್.ಶ್ರೀನಿವಾಸ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿಗಳಾದ ಎಚ್.ಎಲ್. ನಾಗರಾಜು, ಕವಿತಾ ರಾಜರಾಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT