ಬುಧವಾರ, ನವೆಂಬರ್ 25, 2020
18 °C
ಮಟ್ಟನವಿಲೆ ಬಳಿ ಸುಟ್ಟ ಕಾರಿನ ಡಿಕ್ಕಿಯಲ್ಲಿ ಶವ ಪತ್ತೆ ಪ್ರಕರಣ

ಮಟ್ಟನವಿಲೆ ಬಳಿ ಸುಟ್ಟ ಕಾರಿನ ಡಿಕ್ಕಿಯಲ್ಲಿ ಶವ ಪತ್ತೆ ಪ್ರಕರಣ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಕಗ್ಗೆರೆ ರಸ್ತೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಪತ್ತೆಯಾದ ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಿರುವ ಪೊಲೀಸರು, ಕೊಲೆಯಾದ ಯುವಕನ ಪತ್ನಿ ಸೇರಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಲಕ್ಷ್ಮೀಪುರದ ಗ್ರಾಮದ ದಿನೇಶ್‌ ಕೊಲೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಸಾಣೇನಹಳ್ಳಿಯ ದಿನೇಶನ ಪತ್ನಿ ಅಭಿಲಾಷ (22), ಆಕೆಯ ತಂದೆ ಮಂಜುನಾಥ (55), ಸಹೋದರ ಬಸವರಾಜು (21) ಎಂಬುವವರನ್ನು ಬಂಧಿಸಲಾಗಿದೆ. ಸುಟ್ಟ ಕಾರಿನ ಎಂಜಿನ್‌ ನಂಬರ್‌ ಆಧರಿಸಿ ಪ್ರಕರಣ ಭೇದಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದಿನೇಶ್ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನ ತಾತ ನಂಜುಂಡಯ್ಯನಿಗೆ ಪುಟ್ಟಸ್ವಾಮಿ ಮತ್ತು ಮಂಜಮ್ಮ ಎಂಬ ಮಕ್ಕಳು ಇದ್ದಾರೆ. ಇದರಲ್ಲಿ ಮಂಜಮ್ಮನ ಮಗಳು ಅಭಿಲಾಷಳನ್ನು ದಿನೇಶ್‌ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದ. ಇತ್ತೀಚೆಗೆ ದಿನೇಶ್‌ ಮತ್ತೊಂದು ವಿವಾಹವಾಗಿದ್ದ. ಈ ಕಾರಣಕ್ಕಾಗಿ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟಿತ್ತು. ಈ ಸಂಬಂಧ ನುಗ್ಗೇಹಳ್ಳಿ ಮತ್ತು ಬೆಂಗಳೂರಿನ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ತಿಳಿಸಿದರು.

‘ಎರಡನೇ ಮದುವೆಯಾದ ಕಾರಣ ದಿನೇಶ್‌ನನ್ನು ಕೊಲೆ ಮಾಡುವ ಉದ್ದೇಶದಿಂದ ಅ. 10ರಂದು ಅಭಿಲಾಷ ಕರೆ ಮಾಡಿ ಮನೆಗೆ ಕರೆದಿದ್ದಾಳೆ. ಮನೆಗೆ ಬಂದ ದಿನೇಶನಿಗೆ ಮದ್ಯ ಕುಡಿಸಿದ್ದಾರೆ. ಬಳಿಕ ಅಭಿಲಾಷಳ ತಂದೆ ಮಂಜುನಾಥ ಮತ್ತು ಸಹೋದರ ಬಸವರಾಜು ಸೇರಿ ದಿನೇಶನನ್ನು ಹತ್ಯೆ ಮಾಡಿದ್ದಾರೆ. ನಂತರ ಶವವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿ, ಬೆಂಗಳೂರಿನಿಂದ ಮಟ್ಟನವಿಲೆ ಗ್ರಾಮಕ್ಕೆ ಕಾರಿನಲ್ಲಿ ಬಂದಿದ್ದಾರೆ. ಇದಕ್ಕಾಗಿ ಬಾಬು ಎಂಬ ಚಾಲಕನನ್ನು ಕರೆದುಕೊಂಡು ಬಂದಿದ್ದಾರೆ. ಬಳಿಕ ಆತನಿಗೆ ಹಣ ಕೊಟ್ಟು ವಾಪಸ್‌ ಹೇಳಿದ್ದಾರೆ. ಕೊಲೆಯ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಬಳಿಕ ಪೆಟ್ರೋಲ್‌ ಸುರಿದು ದಿನೇಶ್ ಮೃತದೇಹವನ್ನು ಕಾರು ಸಮೇತ ಸುಟ್ಟು ಹಾಕಲಾಗಿದೆ. ಕೃತ್ಯಕ್ಕೆ ಬಳಸಿದ ಕಾರು ಅನ್ನು ಪಿರಿಯಾಪಟ್ಟಣದ ವ್ಯಕ್ತಿಯೊಬ್ಬರಿಂದ ಬಹಳ ಹಿಂದೆಯೇ ಖರೀದಿಸಲಾಗಿದೆ. ಆದರೆ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿರಲಿಲ್ಲ’ ಎಂದು ಎಸ್ಪಿ ಮಾಹಿತಿ ನೀಡಿದರು.

‘ಆರೋಪಿ ಪತ್ತೆ ಕಾರ್ಯದಲ್ಲಿ ಡಿವೈಎಸ್‌ಪಿ ಬಿ.ಬಿ. ಲಕ್ಷ್ಮೇಗೌಡ, ಚನ್ನರಾಯಪಟ್ಟಣ ವೃತ್ತ ಸಿಪಿಐ ಬಿ.ಜಿ. ಕುಮಾರ, ಹಿರೀಸಾವೆ ಪಿಎಸ್‌ಐ ಶ್ರೀನಿವಾಸ, ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್‌ಐ ವಿನೋದ್‌ ರಾಜ್‌, ಸಿಬ್ಬಂದಿ  ಸುರೇಶ್‌, ಜಯಪ್ರಕಾಶ್‌, ಮಹೇಶ್‌, ಹರೀಶ್‌, ಚಂದ್ರೇಶ್‌, ಶಫೀ ಉರ್‌ ರೆಹಮಾನ್‌, ಜವರೇಗೌಡ, ಕುಮಾರಸ್ವಾಮಿ ಶ್ರಮಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು