ಶುಕ್ರವಾರ, ಡಿಸೆಂಬರ್ 4, 2020
21 °C
ನಿಷೇಧದ ನಡುವೆಯೂ ದರ್ಶನಕ್ಕೆ ಮುಗಿಬಿದ್ದ ಭಕ್ತರು

ಹಾಸನಾಂಬೆ ದರ್ಶನ ಆರಂಭ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಭಕ್ತರ ಜಯಘೋಷದ ನಡುವೆ ನಗರದ ಅಧಿದೇವತೆ ಹಾಸನಾಂಬೆ ಗುರುವಾರ ಮಧ್ಯಾಹ್ನ 12.17ಕ್ಕೆ ವಿಶ್ವರೂಪ ದರ್ಶನ ನೀಡಿದಳು.

ಸಂಪ್ರದಾಯದಂತೆ ದೇಗುಲದ ಗರ್ಭಗುಡಿ ಬಾಗಿಲು ತೆರೆದೊಡನೆ ಮೈಸೂರು ಅರಸು ಮನೆತನದ ನರಸಿಂಹರಾಜ ಅವರು ಬಾಳೆ ಕಂದು ಕಡಿದರು. ಭಕ್ತರು, ಜನಪ್ರತಿನಿಧಿಗಳು ಜಯಘೋಷ ಮೊಳಗಿಸಿ ಭಾವಪರವಶರಾದರು.

ಗರ್ಭಗುಡಿ ಬಾಗಿಲು ತೆರೆದ ನಂತರ ಅರ್ಚಕರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕಾನೂನು ಸಚಿವ
ಜೆ.ಸಿ.ಮಾಧುಸ್ವಾಮಿ, ಶಾಸಕರು, ಗಣ್ಯರು ದೇವಿಯ ದರ್ಶನ ಪಡೆದರು.

ಕೋವಿಡ್‌ ಭೀತಿಯ ಕಾರಣಕ್ಕೆ ಈ ಬಾರಿ ಸಾರ್ವಜನಿಕ ದರ್ಶನ ನಿಷೇಧಿಸಲಾಗಿದೆ. ಮೊದಲ ದಿನ ಮತ್ತು ಕೊನೆ ದಿನ ಗಣ್ಯರಿಗೆ ಮತ್ತು ಜನಪ್ರತಿನಿಧಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಿಷೇಧದ ನಡುವೆಯೂ ಸಾವಿರಾರು ಭಕ್ತರು ಬ್ಯಾರಿಕೇಡ್‌ಗಳನ್ನು ನೂಕಿ ದೇವಾಲಯದ ಆವರಣ ಪ್ರವೇಶಿಸಿದರು. ದರ್ಶನ ಪಡೆಯಲು ತಳ್ಳಾಟ ನಡೆಯಿತು. ಮಧ್ಯಾಹ್ನ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂತು.

ಗುರುವಾರದಿಂದ ಮಹೋತ್ಸವದ ಅಂತಿಮ ದಿನವಾದ ನ.16ರವರೆಗೆ ನಿತ್ಯ ಮಧ್ಯಾಹ್ನ ಎರಡು ತಾಸು ದೇವಿಗೆ ನೈವೇದ್ಯ ನಡೆಯಲಿದೆ. ಈ ಸಮಯದಲ್ಲಿ ದರ್ಶನ ಇರುವುದಿಲ್ಲ. ಬಲಿಪಾಡ್ಯಮಿಯ ಮರುದಿನ ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳನ್ವಯ ಪೂಜೆ ನೆರವೇರಿಸಿ, ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಜಾತ್ರಾ ಮಹೋತ್ಸವವನ್ನು ಆನ್‌ಲೈನ್‌ ನಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

'ದೇವಿಯ ಮುಂಭಾಗದಲ್ಲಿ ಕಳೆದ ವರ್ಷ ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ಹಚ್ಚಲಾಗಿದ್ದ ನಂದಾದೀಪ ಉರಿಯುತ್ತಲೇ ಇತ್ತು. ಕೊರೊನಾ ತೊಲಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ' ಎಂದು ಸಚಿವ ಗೋಪಾಲಯ್ಯ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು