ಮಂಗಳವಾರ, ಸೆಪ್ಟೆಂಬರ್ 28, 2021
25 °C
'ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ, ಆತ್ಮವಿಶ್ವಾಸ ತುಂಬಿ'

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿ: ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿ ಬರಪರಿಸ್ಥಿತಿ ಮತ್ತಷ್ಟು ಸಮರ್ಪಕವಾಗಿ ಎದುರಿಸಲು ಎಲ್ಲಾ ಇಲಾಖಾ ಅಧಿಕಾರಿ, ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ನಿರ್ದೇಶನ ನೀಡಿದರು.

ಬರ ನಿರ್ವಹಣೆ ಕುರಿತ ಪರಿಶೀಲನಾ ಸಭೆ ನಡೆಸಿದ ಅವರು, ಈಗಾಗಲೇ ಜಿಲ್ಲೆಯ 8 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲ್ಪಟಿದ್ದು, ಎಲ್ಲಿಯೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ವಿಶೇಷ ನಿಗಾವಹಿಸಬೇಕು ಎಂದು ತಿಳಿಸಿದರು.

ಅನುದಾನಕ್ಕೆ ಕೊರತೆ ಇಲ್ಲ. ಯಾವುದೇ ಗ್ರಾಮವೂ ಕುಡಿಯುವ ನೀರಿನ ಪೂರೈಕೆಯಿಂದ ವಂಚಿತವಾಗಬಾರದು. ಕೊಳವೆ ಬಾವಿ, ಟ್ಯಾಂಕರ್ ಯಾವ ರೂಪದಲ್ಲಿಯಾದರೂ ನೀರು ಒದಗಿಸಿ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಪೂರೈಕೆ ಮೇಲ್ವಿಚಾರಣೆಯನ್ನು ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಕೋಶ, ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಮುಖ್ಯಸ್ಥರು ಜವಾಬ್ದಾರಿ ವಹಿಸಿ ಜನರಿಗೆ ತೊಂದರೆ ಆಗದಂತೆ ಗಮನ ಹರಿಸಬೇಕು ಎಂದು ಸಿಂಗ್ ಹೇಳಿದರು.

‌ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯಾವುದೇ ಗ್ರಾಮದಲ್ಲಿಯಾಗಲಿ ಉದ್ಯೋಗಾವಕಾಶಗಳ ಕೊರತೆ ಎದುರಾಗಬಾರದು. ಉದ್ದೇಶಿತ 50 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಿ ಜನ ಸಂರಕ್ಷಣಾ ಕಾಮಗಾರಿಗಳು, ಕಿಂಡಿ ಅಣೆಕಟ್ಟೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಅಂತರ್ಜಲ ಹೆಚ್ಚಳಕ್ಕೆ ಸೂಕ್ತ ಕ್ರಮವಹಿಸಿ ಎಂದು ಸೂಚಿಸಿದರು.

ಇನ್ನೇನು ಮುಂಗಾರು ಪ್ರಾರಂಭವಾಗಲಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕಿನ ಹವಾಗುಣಕ್ಕೆ ಅನುಗುಣವಾಗಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇರಿಸಲು ಅಗತ್ಯ ಕ್ರಮವಹಿಸಬೇಕು. ರೈತರಿಗೆ ಬೇಸಾಯದ ಬಗ್ಗೆ ಪೂರಕ ಮಾಹಿತಿ, ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ರೈತಾಪಿ ವರ್ಗ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ, ನೆರವು ನೀಡಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿ ಎಂದರು.

ಪ್ರಗತಿಯಲ್ಲಿರುವ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ, ಬಾಕಿ ಬಿಲ್‍ಗಳನ್ನು ಶೀಘ್ರವಾಗಿ ಪಾವತಿಗೆ ಸಲ್ಲಿಸಿ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಜಿಲ್ಲಿಯಲ್ಲಿ ಈವರೆಗೆ ಕುಡಿಯುವ ನೀರು ಪೂರೈಕೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿ, ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ ಅವರು ಉದ್ಯೋಗ ಖಾತರಿ ಯೋಜನೆ, ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ವಿವರಿಸಿದರು.

ಉಪವಿಭಾಗಾಧಿಕಾರಿಗಳಾದ ಎಚ್.ಎಲ್. ನಾಗರಾಜು, ಕವಿತಾ ರಾಜಾರಾಂ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.