ಸೋಮವಾರ, ಮಾರ್ಚ್ 8, 2021
26 °C
ಆರೋಗ್ಯ ತಪಾಸಣೆ, ಪ್ರಮಾಣ ಪತ್ರದೊಂದಿಗೆ ತೆರಳಲು ಅವಕಾಶ

ಅರಸೀಕೆರೆ | ವಲಸೆ ಕಾರ್ಮಿಕರು ಸ್ವ–ಜಿಲ್ಲೆಗೆ ತೆರಳಲು ಬಸ್ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಸೀಕೆರೆ: ಹಾಸನದಿಂದ ಅರಸೀಕೆರೆ ನಗರಕ್ಕೆ ಬಂದಿದ್ದ ಹಾವೇರಿ, ಗದಗ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ತೆರಳಬೇಕಿದ್ದ ಸುಮಾರು 20 ರಿಂದ 25 ವಲಸೆ ಕಾರ್ಮಿಕರು ಹೊರ ಜಿಲ್ಲೆಗಳನ್ನು ತಲುಪಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಇಲ್ಲದೆ ಸೋಮವಾರ ನಗರದಲ್ಲಿ ಪರದಾಡಿದ್ದರು.

ಈ ಕುರಿತು ಬಗ್ಗೆ ಸೋಮವಾರದ ‘ಪ್ರಜಾವಾಣಿ’ಯಲ್ಲಿ ‘ವಲಸೆ ಕಾರ್ಮಿಕರ ಪರದಾಟ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಿದ್ದರಿಂದ ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಸಾಧ್ಯವಾಯಿತು.

ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ‘ಅರಸೀಕೆರೆಗೆ ಹೋದರೆ ತಮ್ಮೂರುಗಳಿಗೆ ಹೋಗಲು ಬಸ್‌ ಸಿಗುತ್ತವೆ ಎಂದು ತಪ್ಪು ಮಾಹಿತಿ ನೀಡಿದ್ದರಿಂದ ವಲಸೆ ಕಾರ್ಮಿಕರೆಲ್ಲಾ ಹಾಸನದಿಂದ ಇಲ್ಲಿಗೆ ಬಂದಿದ್ದರು. ಆದರೆ, ಅಂತರ್ ಜಿಲ್ಲಾ ಕೇಂದ್ರಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಇಲ್ಲದ ಕಾರಣ ಅವರನ್ನು ಕೋವಿಡ್ 19 ವೈರಸ್ ಹಿನ್ನೆಲೆ ನಗರದಲ್ಲಿ ತೆರೆದಿರುವ ನಿರಾಶ್ರಿತರ ಕೇಂದ್ರದಲ್ಲಿ ಸೋಮವಾರ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳವಾರ ಅವರವರ ಜಿಲ್ಲಾ ಕೇಂದ್ರಗಳಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಅಂತರ್ ರಾಜ್ಯಗಳ ವಲಸೆ ಕಾರ್ಮಿಕರ ಎಲ್ಲ ವಿವರಗಳನ್ನು ದಾಖಲಿಸಿಕೊಂಡಿದ್ದು, ಸರ್ಕಾರದ ಸೂಚನೆ ಬಂದ ತಕ್ಷಣ ಅವರನ್ನು ಅವರವರ ರಾಜ್ಯಗಳಿಗೆ ಸಂಚರಿಸಲು ರೈಲ್ವೆ ಸೌಲಭ್ಯ ಕಲ್ಪಿಸಲಾಗುವುದು. ಬಸ್ಸಿನಲ್ಲಿ ಪ್ರಯಾಣಿಸುವವರ ವೈದ್ಯಕೀಯ ತಪಾಸಣೆ ಮಾಡಿಸಿ ಅದರ ವರದಿಯ ಪ್ರತಿಯನ್ನು ಅವರೊಂದಿಗೆ ರವಾನಿಸಲಾಗುತ್ತಿದೆ’ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲಪ್ಪ ಮಾತನಾಡಿ, ‘ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವವರ ಎಲ್ಲರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಲಾಕ್‌ಡೌನ್ ಜಾರಿಯಾದ ದಿನದಿಂದ ಎಲ್ಲಾ ನಿರಾಶ್ರಿತರಿಗೆ ನಿರಾಶ್ರಿತರ ಕೇಂದ್ರದಲ್ಲಿ ಊಟ ವಸತಿ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈಗ ಬಸ್ ಪುನರ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಇಲ್ಲಿಯ ಬಸ್ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರ ವಿವರ ಮತ್ತು ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕೆಂದೇ ನಮ್ಮ ಇಲಾಖೆ ಸಿಬ್ಬಂದಿಯನ್ನು ಬಸ್ ನಿಲ್ದಾಣಕ್ಕೆ ನಿಯೋಜಿಸಲಾಗಿದೆ. ಮಂಗಳವಾರ ಹಾವೇರಿ, ಗದಗ ಹಾಗೂ ಹುಬ್ಬಳ್ಳಿ ಜಿಲ್ಲೆಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಮಾರ್ಗ ಮಧ್ಯೆ ಊಟದ ಸಮಸ್ಯೆ ಎದುರಾಗಬಾರದೆಂಬ ಉದ್ದೇಶದಿಂದ ಆಹಾರದ ಪೊಟ್ಟಣ ಕೂಡಾ ನೀಡಲಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು