ಬುಧವಾರ, ಆಗಸ್ಟ್ 4, 2021
24 °C
ದಿಗಂಬರ ಜೈನ ತ್ಯಾಗಿಗಳ ಚಾತುರ್ಮಾಸ್ಯ ವರ್ಷಾಯೋಗ ಕಾರ್ಯಕ್ರಮ

ವರ್ಷಾಯೋಗ ಚಾತುರ್ಮಾಸ್ಯ ಕಳಸ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರವಣಬೆಳಗೊಳ: ಕಳೆದ ವರ್ಷ, ಪ್ರವಾಹದಿಂದಾಗಿ ರಾಜ್ಯದ ಜನರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಈ ವರ್ಷ ಕೋವಿಡ್–19ನಿಂದಾಗಿ ಭಾರತವೂ ಸೇರಿದಂತೆ ವಿಶ್ವವೇ ಸಂಕಷ್ಟದಲ್ಲಿದೆ. ಈ ಮಾರಕ ಕಾಯಿಲೆಯು ದೂರವಾಗಲಿ ಎಂದು ಚವ್ವೀಸ ತೀರ್ಥಂಕರರಲ್ಲಿ ಪ್ರಾರ್ಥಿಸುವುದಾಗಿ ಕ್ಷೇತ್ರದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶನಿವಾರ ಇಲ್ಲಿ ಹೇಳಿದರು.

ಪಟ್ಟಣದ ಭಂಡಾರ ಬಸದಿಯ ಹುಳ್ಳ ಸಭಾಮಂಟಪದಲ್ಲಿ ಏರ್ಪಡಿಸಿದ್ದ ದಿಗಂಬರ ಜೈನ ತ್ಯಾಗಿಗಳ ಚಾತುರ್ಮಾಸ್ಯ ವರ್ಷಾಯೋಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಕಾಲ ಬದಲಾವಣೆಯಾದರೂ ಧರ್ಮ ಮಾರ್ಗ ಬಿಟ್ಟು ನಡೆಯಲು ಸಾಧ್ಯವಿಲ್ಲ. ಕೊರೊನಾ ಸಮಸ್ಯೆ ಇದ್ದರೂ ಭವ್ಯ ಪ್ರಾಚೀನ ಪರಂಪರೆ ಹೊಂದಿರುವ ಶ್ರಮಣರ ಈ ಕ್ಷೇತ್ರದಲ್ಲಿ ಚಾತುರ್ಮಾಸ್ಯ ಅತ್ಯಂತ ಯಶಸ್ವಿಯಾಗಲಿ. ಈ ನಾಲ್ಕು ತಿಂಗಳು ಶ್ರಾವಕರು ಸಹ ವ್ರತ ನಿಯಮಗಳನ್ನು ತಪ್ಪದೇ ಆಚರಿಸಿ ಒಳ್ಳೆಯ ಸದ್ಗತಿ ಪಡೆಯಬೇಕು’ ಎಂದರು.

‘ಭಗವಾನ್‌ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಕಳೆದ ನಂತರ ಅನೇಕ ಮುನಿಗಳು ಉತ್ತರದ ಕಡೆಗೆ ತೆರಳಿದ್ದಾರೆ. ಆಚಾರ್ಯ ಗುಲಾಬ್‌ ಭೂಷಣ್‌ ಮಹಾರಾಜರು ಕ್ಷೇತ್ರದಲ್ಲಿನ ಈ ಬಾರಿಯ ಚಾತುರ್ಮಾಸ್ಯದ ಸಾನಿಧ್ಯ ವಹಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ’ ಎಂದರು.

ಸಾನಿಧ್ಯ ವಹಿಸಿದ್ದ ಆಚಾರ್ಯ ಗುಲಾಬ್‌ಭೂಷಣ್‌ ಮಹಾರಾಜರು, ಪುಣ್ಯಾನಂದಿ ಮಹಾರಾಜರು ಆಶೀರ್ವಚನ ನೀಡಿದರು.

ಕಾರ್ಯಕ್ರಮಕ್ಕೂ ಮೊದಲು ಎಲ್ಲಾ ತ್ಯಾಗಿಗಳನ್ನು ಮಂಗಲವಾದ್ಯಗಳೊಂದಿಗೆ ಸಭಾ ಮಂಟಪಕ್ಕೆ ಕರೆ ತರಲಾಯಿತು. ಚಾತುರ್ಮಾಸದ ವಿಧಿಯಂತೆ ಅವರೆಲ್ಲರಿಗೂ ಶ್ರೀಫಲವನ್ನು ಅರ್ಪಿಸಿ ಪಾದ ಪೂಜೆ ನೆರವೇರಿಸಿ, ಅರ್ಘ್ಯಗಳನ್ನು ಸಮರ್ಪಿಸಲಾಯಿತು. ಚಾತುರ್ಮಾಸ್ಯ ವ್ರತದ ಮಂತ್ರಗಳನ್ನು ಪಠಿಸುತ್ತಾ ಅಷ್ಟದಿಗ್ಬಂಧನ ವಿಧಿಸಿಕೊಂಡು ಚಾತುರ್ಮಾಸ್ಯ ಕಳಸ ಸ್ಥಾಪನೆ ಮಾಡಲಾಯಿತು.

ಭಕ್ತರು ಈ ಸಂದರ್ಭದಲ್ಲಿ ಜಯಘೋಷ ಮೊಳಗಿಸಿದರು. ಪ್ರತಿಷ್ಠಾಚಾರ್ಯರಾದ ಎಸ್‌.ಡಿ.ನಂದಕುಮಾರ್‌, ಜಿನೇಶ್‌ ಧಾರ್ಮಿಕ ವಿಧಿಗಳನ್ನು ನಿರ್ವಹಿಸಿದರು. ಮಂಗಲಾಷ್ಟಕಗಳನ್ನು ಸರ್ವೇಶ್‌ ಜೈನ್‌ ಮತ್ತು ರಾಜೇಶ್‌ ಶಾಸ್ತ್ರಿ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಆರ್ಯಿಕಾ ಚಿಂತನಮತಿ ಮಾತಾಜಿ, ಕ್ಷುಲ್ಲಕ ಧ್ಯಾನ್‌ ಸಾಗರ್‌ ಮಹಾರಾಜರು, ಕ್ಷುಲ್ಲಿಕಾ ಸುಶ್ರೇಯಮತಿ ಮಾತಾಜಿ, ಕ್ಷುಲ್ಲಿಕಾ ವಿಶುದ್ಧಮತಿ ಮಾತಾಜಿ, ಕ್ಷುಲ್ಲಿಕಾ ಅಮರ ಜ್ಯೋತಿ ಮಾತಾಜಿ, ಆಡಳಿತ ಮಂಡಳಿಯ ಸದಸ್ಯ ದೇವೇಂದ್ರಕುಮಾರ್‌, ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ್‌, ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್‌, ಕಾರ್ಯದರ್ಶಿ ಎಸ್‌.ಪಿ.ಭಾನುಕುಮಾರ್‌, ಮುಖ್ಯ ಕಾರ್ಯದರ್ಶಿ ಅರುಣ್‌ಕುಮಾರ್‌, ಪ್ರೊ.ಜೀವಂಧರ್‌ಕುಮಾರ್‌ ಹೋತಪೇಟೆ ಮುಂತಾದವರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.