ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು | ಬ್ಯಾರಿಕೇಡ್ ಇಲ್ಲದ ದ್ವಾರಸಮುದ್ರ ಕೆರೆ ಏರಿ: ಆತಂಕ

ಅಪ್ಪಳಿಸುತ್ತಿರುವ ದ್ವಾರಸಮುದ್ರ ಕೆರೆ ನೀರು, ಅಪಘಾತಕ್ಕೆ ಆಹ್ವಾನ
Published : 30 ಆಗಸ್ಟ್ 2024, 5:07 IST
Last Updated : 30 ಆಗಸ್ಟ್ 2024, 5:07 IST
ಫಾಲೋ ಮಾಡಿ
Comments

ಹಳೇಬೀಡು: ತುಂಬಿ ತುಳುಕುತ್ತಿರುವ ದ್ವಾರಸಮುದ್ರ ಕೆರೆ ಏರಿಗೆ ಸೂಕ್ತ ಬ್ಯಾರಿಕೇಡ್‌ ಇಲ್ಲದಿರುವುದು ಹಾಗೂ ಜನರು ಕಸ ಹಾಕುವುದರಿಂದ ಏರಿಯಲ್ಲಿ ಸುರಕ್ಷತೆ ಇಲ್ಲದಂತಾಗಿದೆ.

ಏರಿಗೆ ಸಮಾನಂತರವಾಗಿ ಕೆರೆಯಲ್ಲಿ ನೀರು ನಿಂತಿದೆ. ಭರ್ತಿಯಾಗಿರುವ ಕೆರೆ ಏರಿಯ ಮೇಲಿನ ರಸ್ತೆಯಲ್ಲಿ ಬಿಡುವಿಲ್ಲದಂತೆ ವಾಹನಗಳು ಸಂಚರಿಸುತ್ತವೆ. ಪರಸ್ಪರ ಎದುರಾಗಿ ವಾಹನಗಳು ಬಂದಾಗ, ಕೆಲವು ವಾಹನಗಳು ಕೆರೆ ತೀರದವರೆಗೂ ಸಂಚರಿಸುತ್ತವೆ. ಈ ವೇಳೆ ಚಾಲಕ ಸ್ವಲ್ಪ ಯಾಮಾರಿದರೂ ವಾಹನ ಕೆರೆ ಪಾಲಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕೆರೆ ಏರಿಯ ರಸ್ತೆ ಹಾಸನ ಜಿಲ್ಲಾ ಕೇಂದ್ರದ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರಿಂದ ಭರ್ತಿಯಾದ ನೂರಾರು ಸಾರಿಗೆ ಸಂಸ್ಥೆ ಬಸ್ಗಳು ಇಲ್ಲಿ ಸಂಚರಿಸುತ್ತವೆ. ಇಂತಹ ವೇಳೆ ಅಪಾಯವಾದರೆ, ವಾಹನಗಳು ಕೆರೆಗೂ ಬೀಳಬಹುದು ಎನ್ನುತ್ತಾರೆ ರೈತ ಗೋಣಿಸೋಮನಹಳ್ಳಿ ಶಿವಕುಮಾರ್.

ಎರಡು ವರ್ಷದ ಹಿಂದೆ ಜಖಂಗೊಂಡಿದ್ದ ಕೆರೆ ಏರಿ ದುರಸ್ತಿಯಾಗಿದೆ. ನಂತರ ಏರಿ ಎತ್ತರವಾಗಿದ್ದರಿಂದ ಕೆರೆ ಭಾಗದಲ್ಲಿ ಕೆಲವು ಕಡೆ ಮಾತ್ರ ಇದ್ದ ಬ್ಯಾರಿಕೇಡ್‌ಗಳು ನೆಲಸಮವಾಗಿವೆ. ಕೆಲವೆಡೆ ಇದ್ದರೂ ಉಪಯೋಗ ಇಲ್ಲದಂತಾಗಿದೆ.

ಪ್ರಯಾಣಿಕರು ಜೀವ ಬಿಗಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಚಾಲಕರು ಭಯದಿಂದ ವಾಹನ ಚಾಲನೆ ಮಾಡುವಂತಾಗಿದೆ. ಈ ನಡುವೆ ಏರಿ ರಸ್ತೆಯಲ್ಲಿ ಯುವಕರ ವೇಗದ ಬೈಕ್ ಸವಾರಿ ಸಹ ಜೋರಾಗಿರುತ್ತದೆ. ಏರಿ ಪಕ್ಕದ ಗದ್ದೆ ಭಾಗದಲ್ಲಿಯೂ ಬ್ಯಾರಿಕೇಡ್ ಇಲ್ಲ. ಗದ್ದೆ ಏರಿಯಿಂದ ಆಳದಲ್ಲಿದೆ.

ಗದ್ದೆ ಭಾಗದ ಪ್ರಪಾತಕ್ಕೆ ಕಳೆದ ವರ್ಷ ಟ್ರ್ಯಾಕ್ಟರ್ ಉರುಳಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. 30 ವರ್ಷದ ಹಿಂದೆ ಏರಿ ತಿರುವಿನಲ್ಲಿ ಮ್ಯಾಕ್ಸಿಕ್ಯಾಬ್ ಉರುಳಿ ಸಾವು ನೋವಿನ ಘಟನೆ ಸಂಭವಿಸಿತ್ತು. 10 ವರ್ಷದ ಹಿಂದೆ ಕಾರು ಕೆರೆಗೆ ಉರುಳಿ ಒಬ್ಬರು ಮೃತಪಟ್ಟಿದ್ದರು. ಕೆರೆ ಏರಿಯ ಎರಡು ಬದಿಯಲ್ಲಿಯೂ ಬ್ಯಾರಿಕೇಡ್ ತುರ್ತಾಗಿ ಆಗಬೇಕಾಗಿದೆ ಎನ್ನುತ್ತಾರೆ ಘಟ್ಟದಹಳ್ಳಿಯ ಸಂತೋಷ್.

ಕೆರೆ ಏರಿ ಎರಡು ಕಿ.ಮೀ.ಗೂ ಹೆಚ್ಚು ಉದ್ದವಾಗಿದೆ. ಹೆಚ್ಚು ವಾಹನ ಸಂಚರಿಸುತ್ತಿದ್ದು ತುರ್ತಾಗಿ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು.
ಸಂತೋಷ್ ಘಟ್ಟದಹಳ್ಳಿ ರೈತ

ಲೋಕೋಪಯೋಗಿ ಇಲಾಖೆಗೆ ಸೇರಿದ ಏರಿ

ಕೆರೆ ಏರಿ ಅಭಿವೃದ್ದಿ ಲೋಕೋಪಯೋಗಿ ಇಲಾಖೆಗೆ ಒಳಪಡುತ್ತದೆ. ಸಣ್ಣ ನೀರಾವರಿ ಇಲಾಖೆಯಿಂದ ಬ್ಯಾರಿಕೇಡ್ ಕೆಲಸ ನಿರ್ವಹಿಸುವಂತಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಸುಂದರರಾಜು ತಿಳಿಸಿದರು. ಕೆರೆಗೆ ನೀರು ಹರಿಯುವ ಪ್ರದೇಶ ಹಾಗೂ ಸಂಗ್ರಹಣಾ ಸ್ಥಳದ ನಿರ್ವಹಣೆ ನಮಗೆ ಸೇರಿದೆ. ಈ ಕುರಿತು ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗುವುದು ಎಂದರು. ನನಗೆ ವರ್ಗಾವಣೆ ಆಗಲಿದೆ. ಅಲ್ಲದೇ ಆರೋಗ್ಯ ಸಮಸ್ಯೆಯಿಂದ ರಜೆಯಲ್ಲಿದ್ದೇನೆ ಎಂದು ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT