ಮಂಗಳವಾರ, ಜನವರಿ 26, 2021
27 °C
ಡಿ.ಡಿ. ಹಸ್ತಾಂತರಿಸಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ₹ 1.11 ಲಕ್ಷ ಕಾಣಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರವಣಬೆಳಗೊಳ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಮಂದಿರಕ್ಕೆ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಂಗಳವಾರ  ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಹೆಸರಿಗೆ ₹ 1,11,111 (ಒಂದು ಲಕ್ಷ ಹನ್ನೊಂದು ಸಾವಿರದ ಒಂದುನೂರಾ ಹನ್ನೊಂದು) ಡಿ.ಡಿ. ಮೂಲಕ ಭಕ್ತಿ ಕಾಣಿಕೆ ಸಮರ್ಪಿಸಿದರು.

ಪಟ್ಟಣದ ಶ್ರೀ ಕಾನಜಿ ಯಾತ್ರಿಕಾಶ್ರಮದಲ್ಲಿ ಆಯೋಜಿಸಿದ್ದ ಭಕ್ತಿ ಕಾಣಿಕೆ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಇಡೀ ದೇಶವೇ ಒಂದಾಗಿ ಶ್ರೀರಾಮನ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುತ್ತಿರುವುದು ಸಂತಸದ ವಿಷಯ. ಎಲ್ಲರೂ ತಮ್ಮ ಕೈಲಾದ ಭಕ್ತಿ ಕಾಣಿಕೆ ನೀಡಬೇಕು ಎಂಬುದು ತಮ್ಮ ಅಪೇಕ್ಷೆ’ ಎಂದು ಸ್ವಾಮೀಜಿ ಹೇಳಿದರು.

‘ಈ ಹಿಂದೆ ಇಟ್ಟಿಗೆ ಸಂಗ್ರಹಣಾ ಕಾರ್ಯದಲ್ಲಿ ಬಾಹುಬಲಿ ರಥಯಾತ್ರೆ ಮೂಲಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಶ್ರವಣಬೆಳಗೊಳದಿಂದ ಬೀದರ್‌ವರೆಗೆ ರಥಯಾತ್ರೆ ಮಾಡಿ ಅಯೋಧ್ಯೆಗೆ ತಲುಪಿಸುವ ಕೆಲಸವಾಗಿತ್ತು. ಅಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಇನ್ನಿತರೆ ಸಂಘಟನೆಗಳು, ಜನಪ್ರತಿನಿಧಿಗಳು ಸಹಕಾರ ನೀಡಿದ್ದವು’ ಎಂದು ಸ್ಮರಿಸಿದರು.

‘ದೇಶದಲ್ಲಿ ಶ್ರೀರಾಮನ ಹೆಸರು ಪ್ರಸಿದ್ಧಿಯಾಗಿದ್ದು, ಅವರ ಜೀವನ, ಆದರ್ಶದಿಂದ ದಿನೇ ದಿನೇ ಭಕ್ತಿ ಗೌರವ ಹೆಚ್ಚಾಗುತ್ತಿದೆ. ದೇವಾಲಯ ನಿರ್ಮಾಣವಾಗಲಿಲ್ಲ ಎಂಬ ಚಿಂತೆ ದೇಶದ ಜನರಲ್ಲಿ ಇತ್ತು. ಪ್ರಸ್ತುತ ಸಂದರ್ಭದಲ್ಲಿ ದೇವಾಲಯ ಪುನರ್‌ನಿರ್ಮಾಣಗೊಳ್ಳುತ್ತಿರುವುದು ಔಚಿತ್ಯಪೂರ್ಣವಾದುದು’ ಎಂದರು.

‘ಸುಪ್ರಿಂ ಕೋರ್ಟ್‌ನಿಂದ ಅನುಮತಿ ಪಡೆದು, ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ಮಾಡಿರುವುದು ವಿಶೇಷ. ಸುಂದರ ಕಲಾತ್ಮಕ ದೇವಾಲಯ ನಿರ್ಮಾಣಗೊಂಡು ಇಡೀ ಪ್ರಪಂಚಕ್ಕೆ ಆದರ್ಶಪ್ರಾಯವಾದ ತೀರ್ಥಕ್ಷೇತ್ರವಾಗಲಿ’ ಎಂಬುದು ತಮ್ಮ ಆಶಯ ಎಂದು ಹೇಳಿದರು.

ಮೈಸೂರು ವಿಭಾಗ ಧಾರ್ಮಿಕ ಪರಿಷತ್ ಸಂಚಾಲಕ ಅನಂತನಾರಾಯಣ್ ಮಾತನಾಡಿ, ‘ನಮ್ಮ ಧಾರ್ಮಿಕ ಸಂಸ್ಕೃತಿ, ಪರಂಪರೆಯಿಂದ ಜಗತ್ತು ಇಂದು ಭಾರತದ ಕಡೆಗೆ ನೋಡುತ್ತಿದೆ. ದೇಶದ ಎಲ್ಲಾ ಸಾಧು ಸಂತರು ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು. ಹಾಸನ ಜಿಲ್ಲೆಯಲ್ಲಿ 26 ಮಠಗಳಿದ್ದು, ಇದರ ನೇತೃತ್ವವನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ವಹಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ರಾಮಾಂತರ ಸಂಘಚಾಲಕ ಡಾ.ಶೇಷಶಯನ, ಗ್ರಾಮಾಂತರ ಸಂಘಚಾಲಕ ಮಂಜೇಗೌಡ, ಜಿಲ್ಲಾ ಸಂಪರ್ಕ ಸಹಪ್ರಮುಖ್ ಮನೋಹರ್, ಗ್ರಾಮಾಂತರ ಕಾರ್ಯವಾಹ ಗಿರೀಶ್, ನಗರ ಕಾರ್ಯವಾಹ ಗಿರೀಶ್, ಧರ್ಮ ಜಾಗರಣ ಸಂಚಾಲಕ ಎಚ್.ಸಿ.ಕೃಷ್ಣಮೂರ್ತಿ, ಭೋದಿ ಪ್ರಮುಖ್ ಪ್ರಶಾಂತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು