ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು: ಪ್ರೇಕ್ಷಕರ ಮನಸೂರೆಗೊಂಡ ಸಂಗೀತ ಸಂಜೆ

ಹೆಬ್ಬಾಳಿನಲ್ಲಿ ಜಾತ್ರೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಉತ್ಸವ
Published 14 ಏಪ್ರಿಲ್ 2024, 7:28 IST
Last Updated 14 ಏಪ್ರಿಲ್ 2024, 7:28 IST
ಅಕ್ಷರ ಗಾತ್ರ

ಹಳೇಬೀಡು: ಹೆಬ್ಬಾಳು ಗ್ರಾಮದ ಚನ್ನಬಸವೇಶ್ವರ ದೇವಾಲಯ ಮುಂಭಾಗದ ಮುಖ್ಯ ರಸ್ತೆ ಜನರಿಂದ ತುಂಬಿ ತುಳುಕುತ್ತಿತ್ತು. ಕುಟುಂಬ ಸಮೇತರಾಗಿ ಬಂದಿದ್ದ ಜನರು, ಉತ್ಸಾಹದಿಂದ ಸಂಗೀತ ಸಂಜೆ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದರು‌.

ಹೆಬ್ಬಾಳು ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಹೆಬ್ಬಾಳು ಗ್ರಾಮದಲ್ಲಿ ಚನ್ನಬಸವೇಶ್ವರ, ಚಿಕ್ಕಮ್ಮ, ದೊಡ್ಡಮ್ಮ ಜಾತ್ರೆ ಪ್ರಯುಕ್ತ ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮವನ್ನು ಸಾವಿರಾರು ಜನರು ಸಂಭ್ರಮಿಸಿದರು. ಚಿಕ್ಕಮಗಳೂರಿನ ಭಾಗ್ಯಶ್ರೀ ಗೌಡ ಎಂ.ಪಿ. ತಂಡದವರು ಭಾವಗೀತೆ, ಜನಪದ ಹಾಗೂ ಚಲನಚಿತ್ರ ಗೀತೆಯ ಸುಧೆ ಹರಿಸಿ ಪ್ರೇಕ್ಷಕರ ಮನಗೆದ್ದರು.  

ಭಾಗ್ಯಶ್ರೀ ಜೊತೆಯಲ್ಲಿ ವಿಶಾಖ್ ನಾಗಲಪುರ, ಕಾರ್ತಿಕ್ ನಾಗಲಪುರ ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕ್ರಮ ಆರಂಭವಾದಾಗ ವೇದಿಕೆ ಮುಂಭಾಗದ ಸಾಕಷ್ಟು ಆಸನಗಳು ಖಾಲಿ ಉಳಿದಿದ್ದವು. ಗಾಯಕರು ಹಾಡಲು ಆರಂಭಿಸಿದ ತಕ್ಷಣ, ಜನಸಾಗರ ಹರಿದು ಬಂತು. ಮೊದಲಿಗೆ ಹಾಡಿದ ಗಣೇಶ ಸ್ತುತಿ ಹಾಗೂ ಶಾರದಾ ಮಾತೆಯ ಗೀತೆ ಮುಗಿಯುವುದರಲ್ಲಿ ಆಸನಗಳು ಭರ್ತಿಯಾದವು. 

ಜಿ.ಎಸ್. ಶಿವರುದ್ರಪ್ಪ ಅವರ ಕಾಣದ ಕಡಲಿಗೆ, ಕುವೆಂಪು ರಚಿತ ಓನನ್ನ ಚೇತನ ಹಾಡಿಗೆ ಸಭಿಕರು ತಲೆದೂಗಿದರು. ದ.ರಾ.ಬೇಂದ್ರೆ ರಚಿಸಿ, ಸಿ.ಅಶ್ವತ್ಥ ಸಂಗೀತ ನಿರ್ದೇಶಿಸಿದ ಶ್ರಾವಣ ಬಂತು ಕಾಡಿಗೆ ಹಾಡು ಪ್ರೇಕ್ಷಕರಿಗೆ ಪಂಚ್ ನೀಡಿತು. ಪ್ರೇಕ್ಷಕರು ಕುಳಿತ ಸ್ಥಳದಲ್ಲಿಯೇ ಕಾಲು ಕುಣಿಸುತ್ತ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.   

ಎಲ್ಲಿ ಕಾಣೆ ಯಲ್ಲಮ್ಮನ, ಬನ್ನಿ ಮುಡಿಯೋಣಾ ಬಾರಾ, ಸೋಜುಗಾದ ಸೂಜಿ ಮಲ್ಲಿಗೆ ಮೊದಲಾದ ಜನಪದ ಹಾಡಿಗೆ ಪ್ರೇಕ್ಷಕ ವರ್ಗ ಶಿಳ್ಳೆ ಹಾಕಿ ಕುಣಿದು  ಕುಪ್ಪಳಿಸಿತು. ಗಾಯಕರು ಸಂಗೀತ ವಿವಿಧ ಪ್ರಾಕಾರಗಳನ್ನು ಬಲ್ಲವರಾಗಿರುವುದರಿಂದ ಚಲನಚಿತ್ರ ಗೀತೆಯನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು‌.   

ಬಾಳಾ ಬಂಗಾರ ನೀನು, ಈ ಭೂಮಿ ಬಣ್ಣದ ಬುಗುರಿ, ಕನ್ನಡ ಮಣ್ಣನು ಮರಿಬ್ಯಾಡ, ಕಮಲದ ಕಣ್ಣೋಳೆ ಹಾಡುಗಳು ಪ್ರೇಕ್ಷಕರ ಮನತಣಿಸಿದವು. ಕಾರ್ಯಕ್ರಮ ಮುಗಿಯುವುದರೊಳೆಗೆ ವೇದಿಕೆ ಮುಂಭಾಗ ಭಾರಿ ಜನಸ್ತೋಮ ಸೇರಿತ್ತು.     

ಹೆಬ್ಬಾಳು ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಹೆಬ್ಬಾಳು ಸುಧಾಕರ್, ಎಚ್.ಜಿ.ಭುವನೇಶ್, ಅಭಿಲಾಷ್, ವೈದ್ಯಾಧಿಕಾರಿ ಡಾ.ಅನುಪಮಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಮಮತಾ ರಾವ್, ಯೋಜನಾಧಿಕಾರಿ ಚಂದ್ರಶೇಖರ್ ಭಾಗವಹಿಸಿದ್ದರು.

ಬೇಸಿಗೆಯ ಅಧಿಕ ಉಷ್ಣಾಂಶದಿಂದ ನಲುಗಿರುವ ಜನರು ‌ಮಧ್ಯಮ ಪ್ರಮಾಣದ ಗಾಳಿಗೆ ಮೈಯೊಡ್ಡಿ ಸಂಗೀತವನ್ನು ಅಸ್ವಾದಿಸಿದರು.  

ಕಲೆ ಸಂಸ್ಕೃತಿ ನೆಲೆವೀಡಾದ ಹೊಯ್ಸಳರ ನಾಡಿನಲ್ಲಿ ವೈಭವ ಮರುಕಳಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೆಬ್ಬಾಳಿನ ಜಾತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುತ್ತಿದ್ದೇವೆ.
ಹೆಬ್ಬಾಳು ಸುಧಾಕರ್ ಹೆಬ್ಬಾಳು ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ
ಸಾಂಸ್ಕೃತಿಕ ಉತ್ಸವಕ್ಕೆ ನಿರೀಕ್ಷೆಗೂ ಮೀರಿದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನರ ಪ್ರೋತ್ಸಾಹಕ್ಕೆ ಗಾಯಕರು ಸಹ ಸಂಭ್ರಮಿಸಿದರು.
ವೈ.ಸಿ. ಜಗದೀಶ್ ಗ್ರಾಮಾಭಿವೃದ್ಧಿ ಸಂಘದ ಕಾರ್ಯದರ್ಶಿ
ಹೆಬ್ಬಾಳಿನ ಸಾಂಸ್ಕೃತಿಕ ಉತ್ಸವದಲ್ಲಿ ಹಾಡಿದಾಗ ಮನಸ್ಸಿಗೆ ಹಿತ ದೊರಕಿತು. ಪ್ರೇಕ್ಷಕರು ಹರಿಸಿದ ಅಭಿಮಾನದ ಹೊಳೆ ಮರೆಯುವಂತಿಲ್ಲ.
ಭಾಗ್ಯಶ್ರೀ ಗೌಡ ಎಂ.ಪಿ. ಗಾಯಕಿ ಚಿಕ್ಕಮಗಳೂರು

ಪ್ರೇಕ್ಷಕರ ಮನಸ್ಸಿನಲ್ಲಿ ನಿಂತ ಗಾಯಕರು

ಭಾಗ್ಯಶ್ರೀ ಗೌಡ ಆಕಾಶವಾಣಿ ಚಂದನ ವಾಹಿನಿಯ ಕಲಾವಿದೆ. ಹಂಪಿ ಕದಂಬ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಹಾಗೂ ಜಿಲ್ಲಾ ಉತ್ಸವಗಳಲ್ಲಿ ಹಾಡಿದ ಪರಿಣತ ಗಾಯಕಿ. ವಿಶಾಖ್ ನಾಗಲಾಪುರ ಸರಿಗಮಪ ಸೀಸನ್ 10 ಹಾಗೂ ಎದೆತುಂಬಿ ಹಾಡುವೇನು ಮೋದಲಾದ ಟಿವಿ ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಕಾರ್ತಿಕ್ ನಾಗಲಾಪುರ ಸರಿಗಮಪ ಸೀಸನ್ 6 ರಲ್ಲಿ ಹಾಡಿದ್ದಾರೆ‌. ಮೂವರು ಗಾಯಕರು ಲೆಕ್ಕವಿಲ್ಲದಷ್ಟು ವೇದಿಕೆಯಲ್ಲಿ ಹಾಡಿದ್ದು ಹೆಬ್ಬಾಳು ಗ್ರಾಮದ ಜನರ ಮನಸ್ಸಿನಲ್ಲಿಯೂ ನೆಲೆಯಾಗಿ ನಿಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT