ಗುರುವಾರ , ಸೆಪ್ಟೆಂಬರ್ 16, 2021
29 °C
ಕೇಂದ್ರ ಸರ್ಕಾರ ವಜಾಗೊಳಿಸಲು ಜೆಡಿಎಸ್‌ ಒತ್ತಾಯ

ಇಂಧನ ದರ ಏರಿಕೆ ಖಂಡಿಸಿ ಸೈಕಲ್ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಪೆಟ್ರೋಲ್‌‌, ಡೀಸೆಲ್‌‌, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್‌ ಮುಖಂಡ ಅಗಿಲೆ ಯೋಗೇಶ್‌ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಬುಧವಾರ ಸೈಕಲ್‌ ಜಾಥಾ ನಡೆಸಲಾಯಿತು.

ನಗರದ ಎಪಿಎಂಸಿ ಎದುರಿನ 80 ಅಡಿ ರಸ್ತೆಯಿಂದ ಆರಂಭವಾದ ಸೈಕಲ್‌ ಜಾಥಾದಲ್ಲಿ 800ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸಂತೆಪೇಟೆ ವೃತ್ತ, ಎನ್‌.ಆರ್‌. ವೃತ್ತ, ಹೇಮಾವತಿ ಪ್ರತಿಮೆ, ಸಾಲಗಾಮೆ ರಸ್ತೆ, ಎಂ.ಜಿ. ರಸ್ತೆ ಹಾಗೂ ಬಿ.ಎಂ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು.

ಅಗಿಲೆ ಯೋಗೇಶ್‌ ಮಾತನಾಡಿ, ‘ಅಡುಗೆ ಅನಿಲ, ಪೆಟ್ರೋಲ್‌ , ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ
ಏರಿಕೆಯಿಂದ ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ದೇಶದಲ್ಲಿ ಆಡಳಿತ ನಡೆಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅವೈಜ್ಞಾನಿಕ ನೀತಿಗಳಿಂದ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದೆ’ ಎಂದು ಆರೋಪಿಸಿದರು.

‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನೋಟು ಅಮಾನ್ಯೀಕರಣ, ಸರ್ಕಾರಿ ಸಂಸ್ಥೆ ಖಾಸಗೀಕರಣ ಮಾಡುತ್ತಿದ್ದಾರೆ. ನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆ ಕಡಿಮೆ ಮಾಡಲೇಬೇಕು. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳಿಸಿ, ಜನ ಸಾಮಾನ್ಯರ ಬದುಕನ್ನು ಉತ್ತಮಗೊಳಿಸಲು ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿದಿರೇಕೆರೆ ಜಯರಾಂ, ಜೆಡಿಎಸ್‌ ವಕ್ತಾರ ಹೊಂಗೆರೆ ರಘು, ಸುನಿಲ್‌ ಆಡುವಳ್ಳಿ, ನಗರಸಭೆ ಮಾಜಿ ಸದ್ಯಸ್ಯ ಗೋಪಾಲ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.