ಸೋಮವಾರ, ಸೆಪ್ಟೆಂಬರ್ 20, 2021
28 °C
ದೋಸ್ತಿ ಸರ್ಕಾರದ ಜಪ ಮಾಡುತ್ತಿರುವ ಬಿಜೆಪಿ: ಲೇವಡಿ

ಡೆಡ್‌ಲೈನ್‌ನಿಂದ ಸರ್ಕಾರಕ್ಕೆ ಏನೂ ಆಗದು: ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಯಾರು ಏನೇ ಡೆಡ್ ಲೈನ್ ಕೊಟ್ಟರೂ ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗುವುದಿಲ್ಲ’ ಎಂದು ಸಚಿವ ಎಚ್‌.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಟೀಕೆ-ಟಿಪ್ಪಣಿ, ಆರೋಪ-ಪ್ರತ್ಯಾರೋಪ, ಬಿಜೆಪಿ ನಾಯಕರಿಂದ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಡೆಡ್ ಲೈನ್ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರು ಈವರೆಗೂ ಶ್ರೀ ರಾಮನ ಜಪ ಮಾಡುತ್ತಿದ್ದರು. ಈಗ ದೋಸ್ತಿ ಸರ್ಕಾರದ ಜಪ ಮಾಡುತ್ತಿದ್ದಾರೆ. ರಾಮನನ್ನು ಬಿಟ್ಟು ಕುಮಾರಣ್ಣನನ್ನು ಹಿಡಿದು ಕೊಂಡಿದ್ದಾರೆ’ ಎಂದು ನಗುತ್ತಲೇ ಲೇವಡಿ ಮಾಡಿದರು.

ವಿಧಾನಸಭೆಯ ಎರಡೂ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಸದ್ಯ ದೋಸ್ತಿ ಪಕ್ಷಗಳ ನಾಯಕರ ನಡುವೆ ನಡೆಯುತ್ತಿರುವ ಮಾತು-ಕತೆಯ ಗೊಂದಲ ಶೀಘ್ರವೇ ಸರಿಯಾಗಲಿದೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದರು.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗ ಶಾಸಕರು ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ನಡುವಿನ ವಾಕ್ಸಮರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಚಾಮರಾಜನಗರ ಜಿಲ್ಲೆ ಮಲೈ ಮಹದೇಶ್ವರ ಬೆಟ್ಟಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ್ದರ ಹಿಂದೆ ಬೇರೆ ಉದ್ದೇಶವಿಲ್ಲ. ವಿಶೇಷ ಪೂಜೆ ಇದ್ದ ಕಾರಣಕ್ಕೆ ಭಾಗಿಯಾಗಿದ್ದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಾರಕ್ಕೊಮ್ಮೆ ಆಯಾಯ ತಾಲ್ಲೂಕುಗಳ ತಹಶೀಲ್ದಾರ್, ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆ ನಡೆಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ವರದಿ ಕಳುಹಿಸಬೇಕು ಎಂದು ತಿಳಿಸಿದರು.

ಕುಡಿಯುವ ನೀರು ಪೂರೈಕೆ ಮಾಡುವ ಪೈಪ್ ಲೈನ್ ನಲ್ಲಿ ಸಮಸ್ಯೆ ಎದುರಾದರೆ, ಡಿಸಿ ಖಾತೆಯಲ್ಲಿರುವ ಹಣ ಬಳಸಿಕೊಳ್ಳಬೇಕು. ಕೊಳವೆ ಬಾವಿ ಅವಶ್ಯಕತೆ ಇದ್ದರೆ, ಅಧಿಕಾರಿಗಳೇ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಬರೆಯಬೇಕು. ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿ ನಂತರ ಆರಂಭವಾಗಿದ್ದ ಕಾಮಗಾರಿಗಳು ಎಲ್ಲೆಲ್ಲಿ ಬಾಕಿ ಇವೆಯೋ ಅವುಗಳನ್ನು ತಿಂಗಳಾಂತ್ಯದೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.

ಈ ಬಾರಿಯೂ ಭೂ ಕುಸಿತ ಭೀತಿ ಸೇರಿದಂತೆ ತಲೆದೋರ ಬಹುದಾದ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಈಗಿನಿಂದಲೇ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಮೊಸಳೆ ಹೊಸಳ್ಳಿಯಲ್ಲಿ ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಾರ್ಯಾರಂಭ ಮಾಡಲಿದ್ದು, ಒಟ್ಟು 5 ವಿಷಯಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು