ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ವಲಸೆ ಬಂದು ಜೀವ, ಬೆಳೆ ಹಾನಿ ಮಾಡುತ್ತಿವೆ ವನ್ಯ ಜೀವಿಗಳು

ನಾಡಿನತ್ತ ಬರುತ್ತಿವೆ ವನ್ಯಜೀವಿಗಳು
Last Updated 9 ಸೆಪ್ಟೆಂಬರ್ 2020, 1:52 IST
ಅಕ್ಷರ ಗಾತ್ರ

ಸಕಲೇಶಪುರ: ಮಲೆನಾಡಿನಲ್ಲಿ ಕಾಡಾನೆ, ಕಾಟಿ ಸೇರಿದಂತೆ ವನ್ಯ ಜೀವಿಗಳಿಂದ ಮನುಷ್ಯನ ಜೀವ ಹಾಗೂ ಬೆಳೆ ಹಾನಿ ಪ್ರಮಾಣ ಹೆಚ್ಚಾಗುತ್ತಿದ್ದು, ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ.

ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆನೆ– ಮಾನವ ಸಂಘರ್ಷವೂ ಹೆಚ್ಚಾಗುತ್ತಿದೆ. ಕಾಡಾನೆಗಳನ್ನು ಸ್ಥಳಾಂತರಗೊಳಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂಬುದು ರೈತರು ಹಾಗೂ ಬೆಳೆಗಾರರ ಸಂಘಟನೆಗಳ
ಬೇಡಿಕೆ.

ಕಾಡು ಬಿಟ್ಟು ನಾಡಿಗೆ: ವನ್ಯ ಜೀವಿಗಳು ಕಾಡು ಬಿಟ್ಟು ನಾಡಿಗೆ ಬಂದು ಮನುಷ್ಯರ ಜೀವ, ರೈತರ ಬೆಳೆ ಹಾಳು ಮಾಡುತ್ತಿವೆ. ಪಶ್ಚಿಮಘಟ್ಟದ ನಿತ್ಯ ಹರಿಧ್ವರ್ಣದ ಸ್ವಾಭಾವಿಕ ರಕ್ಷಿತ ಅರಣ್ಯ, ಶೋಲಾ ಬೆಟ್ಟಗಳು, ಕಣಿವೆಗಳಲ್ಲಿ ಸ್ವತಂತ್ರವಾಗಿದ್ದ ವನ್ಯ ಜೀವಿಗಳಿಗೆ ಕಾಡಿನಲ್ಲಿ ಆಹಾರ, ನೀರು ಹಾಗೂ ನೆಲೆ ಇಲ್ಲದಂತಾಗಿದೆ.

ಕಾಡಾನೆ ಹಾಗೂ ಕಾಟಿಗಳ ಸಮಸ್ಯೆ ಹೆಚ್ಚಾಗುವುದಕ್ಕೆ ಪಶ್ಚಿಮಘಟ್ಟದಲ್ಲಿ ತಲೆ ಎತ್ತಿರುವ ವಿವಿಧ ಯೋಜನೆಗಳೇ ಕಾರಣ. ಆನೆಗಳಿಗೆ ಬೇಕಾದ ವಾಟೆ, ಬಿದಿರು ಸಹಜವಾಗಿ ಹೊಳೆ, ಹಳ್ಳಗಳ ಪಕ್ಕದಲ್ಲಿಯೇ ಹೇರಳವಾಗಿ ಇರುತ್ತದೆ. ಕಾಡಿನಲ್ಲಿ ಹರಿಯುವ ಎಲ್ಲ ಹೊಳೆಗಳನ್ನು ವಿದ್ಯುತ್‌ ಉತ್ಪಾದನೆ, ಎತ್ತಿನಹೊಳೆ ತಿರುವು ಯೋಜನೆಗೆ ಬಳಸಿಕೊಂಡಿರುವುದರಿಂದ ಆನೆಗಳು ಆಹಾರ ಅರಸಿ ರೈತರ ಗದ್ದೆ ತೋಟಗಳಲ್ಲಿ ವಾಸ್ತವ್ಯ ಹೂಡಿವೆ ಎಂದು ಪರಿಸರವಾದಿ ಗೊದ್ದು ಉಮೇಶ್‌ ಹೇಳುತ್ತಾರೆ.

ಸರ್ಕಾರದ ಕಿರು ಜಲವಿದ್ಯುತ್‌ ಯೋಜನೆಗಳು, ಪೆಟ್ರೋಲಿಯಂ ಪೈಪ್‌ಲೈನ್‌ಗಳು, ಹೈಟೆನ್ಷನ್‌ ವಿದ್ಯುತ್‌ ಮಾರ್ಗ, ಎತ್ತಿನಹೊಳೆ ತಿರುವು ಯೋಜನೆಗಳ ಕಾಮಗಾರಿಗಳಿಂದಾಗಿ ಕಾಡಿನಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಈ ಯೋಜನೆಗಳಲ್ಲಿ ಕೆಲಸ ಮಾಡುವವರು ಕಾಡಿನಲ್ಲಿ ಸಂಚರಿಸಿ ಪ್ರಾಣಿ, ಪಕ್ಷಿಗಳನ್ನೂ ಬೇಟೆಯಾಡುತ್ತಾರೆ. ಕಾಡಿನಲ್ಲಿ ಹರಿಯುವ ಹಳ್ಳಗಳಿಗೆ ವಿಷ ಹಾಕಿ ಮೀನು ಹಿಡಿಯುತ್ತಾರೆ. ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿ ಕೆಲವರು ಪ್ರಾಣಿಗಳ ಬೇಟೆ ಆಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಮರಗಳ್ಳತನ, ಅರಣ್ಯ ಉತ್ಪನ್ನಗಳ ಕಳ್ಳ ಸಾಗಣೆಯೂ ನಡೆಯುತ್ತಿದೆ.
ಈ ಅಕ್ರಮ ಚಟುವಟಿಕೆಗಳಿಂದಾಗಿ ವನ್ಯ ಜೀವಿಗಳು ನಾಡಿನತ್ತ ವಲಸೆ ಬಂದಿವೆ ಎನ್ನುವುದು ಪರಿಸರಪ್ರೇಮಿಗಳ ಆರೋಪ.

ಕಾಡು ಹಾಗೂ ಹಿಡುವಳಿ ನಡುವೆ ರೈಲ್ವೆ ಕಂಬಿಗಳ ಬೇಲಿ ಹಾಕಿ, ಕಾಡಾನೆಗಳನ್ನು ಹಿಡಿದು ಕಾಡಿಗೆ ಸ್ಥಳಾಂತರ ಮಾಡಿದರೂ ಅವುಗಳಿಗೆ ಬೇಕಾದ ಆಹಾರ ಕಾಡಿನಲ್ಲಿಲ್ಲ. ಸರ್ಕಾರ ರಕ್ಷಿತ ಅರಣ್ಯದಲ್ಲಿ ಇರುವ ಯೋಜನೆಗಳನ್ನು ನಿಲ್ಲಿಸಬೇಕು. ಕಾಡಿನೊಳಗೆ ಮನುಷ್ಯ ಪ್ರವೇಶ ಮಾಡದಂತೆ ಕ್ರಮ ಕೈಗೊಂಡರೆ ಒಂದೇ ವರ್ಷದಲ್ಲಿ ವನ್ಯಜೀವಿಗಳಿಗೆ ಬೇಕಾದ ಆಹಾರ ಕಾಡಿನಲ್ಲಿಯೇ ಲಭ್ಯವಾಗುತ್ತದೆ ಎಂದು ಹುರುಡಿ ವಿಕ್ರಂ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನ ಪಶ್ಚಿಮಘಟ್ಟದ ರಕ್ಷಿತ ಅರಣ್ಯ ಪ್ರದೇಶದಲ್ಲಿ ಇನ್ನು ಮುಂದೆ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅವಕಾಶ ನೀಡುವುದಿಲ್ಲ. ಈಗ ಇರುವ ಜಲ ವಿದ್ಯುತ್‌ ಯೋಜನೆಗಳನ್ನು ಬಂದ್‌ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸುವುದಾಗಿ ಶಾಸಕ ಎಚ್‌.ಕೆ.ಕುಮಾರಸ್ವಾಮಿ
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT