ಶನಿವಾರ, ನವೆಂಬರ್ 28, 2020
18 °C
ಕೆರೆ ಏರಿಯಲ್ಲಿ ಅಪಘಾತದ ಸಾಧ್ಯತೆ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಹಳೇಬೀಡು: ಕುಸಿಯುತ್ತಿದೆ ದ್ವಾರಸಮುದ್ರ ಕೆರೆ ಏರಿ

ಎಚ್.ಎಸ್.ಅನಿಲ್ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಐತಿಹಾಸಿಕ ಮಹತ್ವ ಹೊಂದಿರುವ, ಹಳೇಬೀಡಿನ ಆಕರ್ಷಕ ಕೇಂದ್ರಗಳಲ್ಲಿ ಒಂದಾಗಿರುವ ದ್ವಾರಸಮುದ್ರ ಕೆರೆಯ ಏರಿಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಎರಡು ಸ್ಥಳದಲ್ಲಿ ಏರಿ ಜಗ್ಗಿರುವುದರಿಂದ ಜನರ‌ಲ್ಲಿ ಭಯ ಮೂಡಿದೆ.

ಹಾಸನ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ದ್ವಾರಸಮುದ್ರ ಕೆರೆ ವಿಶಾಲವಾಗಿದ್ದು, 100 ಹೆಕ್ಟೇರ್ ಜಲಾವೃತ ಪ್ರದೇಶ ಹೊಂದಿದೆ. 289 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆರೆ 153.80 ಎಂಸಿಎಫ್‌ಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಕೆರೆಗೆ ಹಳ್ಳಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಕೆರೆಗೆ ನೀರಿನ ಒತ್ತಡ ಹೆಚ್ಚಾದಂತೆ ಏರಿ ಕುಸಿದರೆ ಅಪರೂಪಕ್ಕೆ ಸಂಗ್ರಹವಾಗಿರುವ ಕೆರೆ ನೀರು ಪೋಲಾಗುತ್ತದೆ. ಏರಿಕೆಯಾಗಿರುವ ಅಂತರ್ಜಲ ಪ್ರಮಾಣ ಇಳಿಕೆಯಾಗುತ್ತದೆ. ಗದ್ದೆಗಳಲ್ಲಿ ಎಲ್ಲೆಂದರಲ್ಲಿ ನೀರು ನುಗ್ಗಿದರೆ ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗುತ್ತದೆ. ಜಾವಗಲ್ ರಸ್ತೆಯ ಗದ್ದೆ ಬಯಲಿನ ಮನೆಗಳು ಹಾಗೂ ಬೂದಿಗುಂಡಿ ಬಡಾವಣೆಗೆ ನೀರು ನುಗ್ಗುತ್ತದೆ. ಏರಿಗೆ ಹಾನಿಯಾದರೆ ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಮಾತು ಕೆರೆ ಅಚ್ಚಕಟ್ಟು ಭಾಗದ ರೈತರಿಂದ ಕೇಳಿಬರುತ್ತಿದೆ.

‘13 ವರ್ಷದ ನಂತರ ಕೆರೆ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯುತ್ತಿದೆ. ಗದ್ದೆ ಭಾಗದಲ್ಲಿ ಏರಿಯಿಂದ ನೀರು ಜಿನುಗುತ್ತಿದೆ. ಜೊತೆಗೆ ಮಳೆ ಬಂದಾಗ ಏರಿಗೆ ಬಿರುಕುಗಳಿಂದ ನೀರು ಇಳಿಯುತ್ತದೆ. ಏರಿಯಲ್ಲಿ ತೇವಾಂಶ ಹೆಚ್ಚಾದರೆ ಯಾವ ಸಂದರ್ಭದಲ್ಲಾದರೂ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ’ ಎಂದು ರೈತ ಮುಖಂಡ ಮಾಯಾಗೊಂಡನಹಳ್ಳಿ ಚನ್ನೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಚಾಲನೆಗೆ ತೊಡಕು: ಹಾಸನ ಜಿಲ್ಲಾ ಕೇಂದ್ರ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಮಂಗಳೂರು ಮೊದಲಾದ ಮಹಾನಗರಗಳಿಗೆ ಇದೇ ಏರಿ ಮೇಲಿನ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ. ನೂರಾರು ಹಳ್ಳಿಗಳ ರೈತರು ಕೃಷಿ ಉತ್ಪನ್ನವನ್ನು ದ್ವಾರಸಮುದ್ರ ಕೆರೆ ಏರಿ ಮೇಲೆಯೇ ಸಾಗಾಟ ಮಾಡುತ್ತಾರೆ. ಏರಿ ಜಖಂ ಆದರೆ, ಪ್ರಯಾಣಿಕರು ಮಾತ್ರವಲ್ಲದೆ ರೈತರಿಗೂ ಅಡಚಣೆಯಾಗಲಿದೆ.

ದಿನದಿಂದ ದಿನಕ್ಕೆ ಜಗ್ಗುತ್ತಿರುವ ಏರಿಯ ಮೇಲೆ ಚಾಲಕರು ಕೈಯಲ್ಲಿ ಜೀವ ಹಿಡಿದು ವಾಹನ ಚಾಲನೆ ಮಾಡುವಂತಾಗಿದೆ. ಏರಿ ಕುಸಿದ ಸ್ಥಳದಲ್ಲಿ ಚಾಲಕನ ನಿಯಂತ್ರಣ ತಪ್ಪಿದರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

‘ಒಂದು ವರ್ಷದಿಂದ ಏರಿಯಲ್ಲಿ ಬಿರುಕು ಕಾಣಿಸಿಕೊಂಡರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದುರಸ್ತಿ ಕೆಲಸ ಕೈಗೊಂಡಿಲ್ಲ’ ಎಂದು ಗೋಣಿಸೋಮನಹಳ್ಳಿಯ ಜಿ.ವಿ.ಪ್ರಸನ್ನ ಆರೋಪಿಸಿದ್ದಾರೆ.

‘ದ್ವಾರಸಮುದ್ರ ಕೆರೆ ಏರಿಯ ಮೇಲ್ಪದರ ಸಿಂಕ್ ಆಗಿರುವುದನ್ನು ಗಮನಿಸಿದ್ದೇವೆ. ಏರಿಯ ಮೇಲಿನ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಹೀಗಾಗಿ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಡಾಂಬರೀಕರಣ ಹಾಗೂ ಏರಿ ರಿಪೇರಿಗೆ ₹ 2 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂಬ ಮಾಹಿತಿ ಇದೆ. ಕಾಮಗಾರಿ ಬಗ್ಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳೊಂದಿಗೆ ಮಾತನಾಡು ತ್ತೇವೆ’ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಸಂತೋಷ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು