ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಕೋವಿಡ್‌ ನಡುವೆಯೂ ಖರೀದಿ ಭರಾಟೆ

ಆಯುಧ ಪೂಜೆ: ಹೂವು, ಹಣ್ಣು ಮಾರಾಟ ಜೋರು, ಬೆಲೆ ಏರಿಕೆ ಬಿಸಿ
Last Updated 24 ಅಕ್ಟೋಬರ್ 2020, 14:29 IST
ಅಕ್ಷರ ಗಾತ್ರ

ಹಾಸನ: ಕೋವಿಡ್ ಸಂಕಷ್ಟದ ನಡುವೆಯೂ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬಗಳಿಗೆ ನಗರದಲ್ಲಿ ಖರೀದಿ
ಜೋರಾಗಿತ್ತು. ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಜನರು ಸಾಲುಗಟ್ಟಿದ್ದರು. ಹೂ, ಹಣ್ಣು, ನಿಂಬೆಹಣ್ಣು ಮತ್ತು ಕುಂಬಳ ಕಾಯಿಯ ವ್ಯಾಪಾರ ಜೋರಾಗಿತ್ತು.

ಆಯುಧಪೂಜೆ ಮುನ್ನಾ ದಿನವಾದ ಶನಿವಾರ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂತು. ನಗರ ಸಾರಿಗೆ ಬಸ್‌ ನಿಲ್ದಾಣ, ಹೊಸ ಬಸ್‌ ನಿಲ್ದಾಣ, ಕೆ.ಆರ್‌. ಮಾರುಕಟ್ಟೆ, ಎಂ.ಜಿ.ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಆರ್‌.ಸಿ.ರಸ್ತೆ ಸೇರಿ ಹಲವೆಡೆ ಬಾಳೆ ಕಂದು, ಬೂದು ಕುಂಬಳಕಾಯಿ, ಹೂವು, ಹಣ್ಣುಗಳ ಭರ್ಜರಿ ವ್ಯಾಪಾರ ನಡೆಯಿತು.

ಕೋವಿಡ್‌ ಸಂಕಷ್ಟ, ಅತಿವೃಷ್ಟಿ ಬೆಳೆ ನಾಶದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಸೇಬು ಕೆ.ಜಿ ಗೆ ₹100,ಬಾಳೆ ಕಂದು ಜೋಡಿ ₹ 20 ರಿಂದ ₹40,ಮಾವಿನ ಸೊಪ್ಪು ಒಂದು ಕಟ್ಟಿಗೆ ₹10, ಸೇವಂತಿಗೆ ಒಂದು ಮಾರಿಗೆ ₹100, ತುಳಸಿ ₹ 30, ಗುಲಾಬಿ ಹಾರ ₹ 400ಕ್ಕೆ ಮಾರಾಟವಾಯಿತು.

‘ಕಳೆದ ವರ್ಷ ನಿಂಬೆ ಹಣ್ಣು ಸಗಟು ದರ ಚೀಲಕ್ಕೆ ₹2000 ದಿಂದ ₹ 2500 ಇದ್ದರೆ ಈ ಬಾರಿ ಚೀಲ ₹1,500 ಕ್ಕೆ ಇಳಿದಿದೆ. ₹ 10 ಕ್ಕೆ ಮೂರು ನಿಂಬೆಹಣ್ಣು ಮಾರಾಟ ಮಾಡಲಾಗುತ್ತಿದೆ’ ಎನ್ನುತ್ತಾರೆ ವ್ಯಾಪಾರಿ ಸುರೇಶ್‌.

‘ಕಳೆದ ವರ್ಷ ಕೆ.ಜಿಗೆ ₹10 ರಿಂದ ₹15 ಕ್ಕೆ ಮಾರಾಟವಾಗುತ್ತಿದ್ದ ಬೂದು ಕುಂಬಳಕಾಯಿ ಈ ವರ್ಷ ಕೆ.ಜಿ ಗೆ ₹40 ನಂತೆ ಮಾರಾಟ ಮಾಡಲಾಗುತ್ತಿದೆ. ಆಯುಧ ಪೂಜೆಯಲ್ಲಿ ಬೂದು ಕುಂಬಳಕಾಯಿ ಒಡೆಯುವುದು ಸಂಪ್ರದಾಯವಾದ ಕಾರಣ ವ್ಯಾಪಾರ ಚೆನ್ನಾಗಿದೆ’ಎಂದು ವ್ಯಾಪಾರಿ ಧರ್ಮರಾಜ್‌ ತಿಳಿಸಿದರು.

ನಗರದ ಕಸ್ತೂರ ಬಾ ರಸ್ತೆ, ಮಾಹಾವೀರ ವೃತ್ತ, ನಗರ ಬಸ್‌ ನಿಲ್ದಾಣ ರಸ್ತೆ, ಸಾಲಗಾಮೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದ್ದ ಪೊಲೀಸರು, ನಗರದ ಮಹಾವೀರ ವೃತ್ತ ಮತ್ತು ನಗರ ಬಸ್‌ ನಿಲ್ದಾಣ ರಸ್ತೆಯಲ್ಲಿ ಹೆಲ್ಮೆಟ್‌ ಇಲ್ಲದವರಿಗೆ ದಂಡ ವಿಧಿಸುತ್ತಿದ್ದರು.

ಸಾಲು ರಜೆಯ ಕಾರಣ ನಗರದ ಬಹುತೇಕ ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳಲ್ಲಿ ಶುಕ್ರವಾರ ಸಂಜೆಯೇ ಆಯುಧ ಪೂಜೆ ಕಾರ್ಯಕ್ರಮ ಜರುಗಿತು. ಕಚೇರಿಯಲ್ಲಿರುವ ಕಂಪ್ಯೂಟರ್ ಸೇರಿದಂತೆ ವಿವಿಧ ವಸ್ತುಗಳಿಗೆ ಪೂಜೆ ಸಲ್ಲಿಸಿದರು. ಶನಿವಾರ ನಗರದ ಗ್ಯಾರೇಜ್‌ಗಳು ಮತ್ತು ವಾಟರ್ ಸರ್ವಿಸ್‌ ಕೇಂದ್ರಗಳಲ್ಲಿ ಕಾರುಗಳು, ಬೈಕ್‌ಗಳು ಸಾಲುಗಟ್ಟಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT