ಭಾನುವಾರ, ಏಪ್ರಿಲ್ 18, 2021
26 °C

ಜನರು ದಂಗೆ ಏಳುತ್ತಾರೆ, ಸಂವಿಧಾನ ಬದಲಿಸುವ ಮಾತು ಬರದಿರಲಿ: ಪರಮೇಶ್ವರ್‌ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಬದಲಾವಣೆಗೆ ಮುಂದಾದರೆ ದೇಶದ ಜನ ದಂಗೆ ಏಳುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ದುದ್ದ ಹೋಬಳಿ ಮಾಯಸಮುದ್ರ ಗ್ರಾಮದಲ್ಲಿ ಶನಿವಾರ ಅಂಬೇಡ್ಕರ್ ಅಭಿಮಾನಿಗಳು ಹಮ್ಮಿಕೊಂಡಿದ್ದ ಅಂಬೇಡ್ಕರ್ ಸಮಾವೇಶ ಹಾಗೂ ಝಿ ಟಿ.ವಿ ವಾಹಿನಿಯವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾಭಾರತ, ರಾಮಾಯಣ ಮಹಾಗ್ರಂಥದಷ್ಟೇ ಅಂಬೇಡ್ಕರ್ ಸಂವಿಧಾನ ಸರಿಸಮಾನವಾಗಿದೆ. ಆದ್ದರಿಂದ ಯಾರಿಂದಲೂ ಸಂವಿಧಾನ ಬದಲಾಯಿಸುವ ಮಾತು ಬರಬಾರದು. ಸಂವಿಧಾನ ರಚಿಸಿ 71 ವರ್ಷ ಕಳೆದರೂ ಯಾವುದೇ ಅನಾಹುತ ನಡೆದಿಲ್ಲ. ಜಾತಿ, ಧರ್ಮದ ಆಧಾರ ಮೇಲೆ ಸಂವಿಧಾನ ರಚಿಸಿಲ್ಲ. ಇದನ್ನು ಬದಲಾಯಿಸುವ ಚಿಂತನೆ ನಡೆಸಿದರೆ ದೇಶದಲ್ಲಿ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಅಂತರ್ಜಾತಿ ವಿವಾಹವಾದರೆ ಸಮಾಜದಲ್ಲಿ ಬದಲಾವಣೆಯಾಗುತ್ತದೆ ಎಂದು ಬಸವಣ್ಣ ಹೇಳಿದರು. ಆದರೆ ಪ್ರಸ್ತುತ ಸಂರ್ಭದಲ್ಲಿ ಕೆಳಜಾತಿಯವರು ಮೇಲ್ಜಾತಿಯವರನ್ನು ಮದುವೆಯಾದರೆ ಮರ್ಯಾದ ಹತ್ಯೆಗಳು ನಡೆಯುತ್ತಿದೆ. ಜಾತಿ ವ್ಯವಸ್ಥೆ ಹೋಗದಿದ್ದರೆ ಸಮಾಜ ಉಳಿಯುವುದಿಲ್ಲ ಎಂದು ನುಡಿದರು.

ಬೇರೆ ದೇಶಗಳಲ್ಲಿ ಜಾತಿ ಎನ್ನುವುದು ಇಲ್ಲ. ಆದರೆ ಭಾರತೀಯರು ವಿದೇಶದಲ್ಲೂ ಜಾತಿ ಸಂಘಟನೆ ಮಾಡಿ ಸಮಾವೇಶ ಮಾಡುತ್ತಿದ್ದಾರೆ. ಒಕ್ಕಲಿಗ- ಲಿಂಗಾಯಿತ ಎಂಬ ಸಂಘಟನೆ ಮಾಡಿದ್ದಾರೆ. ಇದು ಬದಲಾವಣೆಯಾಗಬೇಕು ಎಂದರು.

ಪ್ರತಿಯೊಬ್ಬರು ಮಹಾನಾಯಕ ಧಾರವಾಹಿ ನೋಡುವ ಮೂಲಕ ಅಂಬೇಡ್ಕರ್ ಅವರ ಬದುಕು, ಬರಹದ ಬಗ್ಗೆ ತಿಳಿದುಕೊಳ್ಳುವ ಮನಸ್ಸು ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಾಂಗ್ರೆಸ್ ಮುಖಂಡ ಹೆರಗು ವಾಸು ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು. 

ದಲಿತ ಸಂಘರ್ಷ ಸಮಿತಿ ಮುಖಂಡ ಎಚ್.ಕೆ.ಸಂದೇಶ್ ಅವರು ಅಂಬೇಡ್ಕರ್ ವಿಚಾರಧಾರೆ ಹಾಗೂ ಬದುಕು ಬರಹದ ಬಗ್ಗೆ ವಿವರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬೆಳ್ಳಿರಥದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಗ್ರಾಮದ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಕಾಂಗ್ರೆಸ್ ಮುಖಂಡರಾದ ಬಾಗೂರು ಮಂಜೇಗೌಡ, ವಾಸುದೇವ್, ಲಕ್ಷ್ಮಣ್‍ಗೌಡ, ಮೈಸೂರು ನರೇಂದ್ರ, ವಿಶ್ವನಾಥ್, ರಂಗಸ್ವಾಮಿ, ನಾಗರಾಜ್ ಹೆತ್ತೂರು, ಆರ್.ಪಿ.ಐ.ಸತೀಶ್, ಥಾಮಸ್, ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಗೊರೂರು ರಂಜಿತ್, ಗಣೇಶ್, ಮಂಜಯ್ಯ, ಈರಯ್ಯ, ಚಂದ್ರಣ್ಣ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು